ಬೆಂಗಳೂರು: ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸಂಪೂರ್ಣ ನಿಷ್ಕ್ರಿಯವಾಗಿದೆ. ಅಧ್ಯಕ್ಷರು ಆಯೋಗದ ಕಚೇರಿಗೆ ಕಾಲಿಡದೆ ತಿಂಗಳುಗಳೇ ಕಳೆದಿವೆ. ಮಕ್ಕಳು ತೊಂದರೆಯಲ್ಲಿ ಸಿಲುಕಿದ್ದಾರೆಂದು ಯಾರಾದರೂ ಕರೆ ಮಾಡಿದರೂ ಕೂಡಾ ಪ್ರತಿಕ್ರಿಯೆ ನೀಡೋದಕ್ಕೂ ಯಾರೂ ಇಲ್ಲ.
ಲಾಕ್ಡೌನ್ ಘೋಷಣೆ ಆದ್ಮೇಲೆ ಮಕ್ಕಳ ಹಕ್ಕುಗಳ ರಕ್ಷಣೆಯ ಜವಾಬ್ದಾರಿ ಹೊರಬೇಕಾದ ಈ ಆಯೋಗ ಇಂತಹ ತುರ್ತು ಸಂದರ್ಭದಲ್ಲಿಯೇ ನಿಷ್ಕ್ರಿಯವಾಗಿದೆ. ರಾಜ್ಯದಲ್ಲಿ ಮಕ್ಕಳ ಸ್ಥಿತಿ ಗತಿ ಏನಾಗಿದೆ ಎಂಬುದರ ಸಣ್ಣ ಮಾಹಿತಿಯೂ ಕೂಡಾ ಆಯೋಗಕ್ಕೆ ಇಲ್ಲ ಎಂಬುದು ವಿಪರ್ಯಾಸ. ಕಳೆದ ಎರಡು ದಿನದಿಂದ ಕೆಲ ಸಿಬ್ಬಂದಿ ಕಚೇರಿಯ ಬಾಗಿಲು ತೆರೆದು ಧೂಳು ಒರೆಸಿದ್ದಾರೆ. ಎರಡು ಅಥವಾ ಮೂರು ಮಂದಿ ಮಾತ್ರ ಕಚೇರಿಗೆ ಬರುತ್ತಿದ್ದು, ಲಾಕ್ ಡೌನ್ ಸಂದರ್ಭದಲ್ಲಿ ಮಕ್ಕಳ ಸ್ಥಿತಿಗತಿಯ ಕುರಿತು ವಿಚಾರಿಸಿದ್ರೆ ''ನಮಗೇನು ಗೊತ್ತಿಲ್ಲ, ಲಾಕ್ಡೌನ್ ಕಾರಣದಿಂದ ಕಚೇರಿ ಕೂಡಾ ಬಂದ್ ಇತ್ತು'' ಎಂದು ದೂರವಾಣಿಯಲ್ಲಿ ಈಟಿವಿ ಭಾರತ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಆಯೋಗ ಸಿಬ್ಬಂದಿ ಔಟ್ ಆಫ್ ಆಫೀಸ್.. ನಾಟ್ ರೀಚಬಲ್...!
ಆಯೋಗದ ಕಾರ್ಯದರ್ಶಿ ಸಲ್ಮಾ ಸಫಿಕ್, ಅಧ್ಯಕ್ಷ ಡಾ.ಆಂಟನಿ ಸಬಾಸ್ಟಿನ್ ಯಾರ ಫೋನ್ ಕರೆಗೂ ಸಿಗುತ್ತಿಲ್ಲ. ಒಬ್ಬರು ಅಧ್ಯಕ್ಷರು, ಕಾರ್ಯದರ್ಶಿ, ಸಹಾಯಕ ನಿರ್ದೇಶಕರು, ಮೂವರು ಸಿಬ್ಬಂದಿ, ಐದು ಜನ ಕೋರ್ಟ್ ಕೇಸ್ ನೋಡಿಕೊಳ್ಳುವ ಸಿಬ್ಬಂದಿ ಇದ್ದರೂ ಕಚೇರಿ ಮಾತ್ರ ಖಾಲಿ ಖಾಲಿ. ಇಂತಹ ಆಯೋಗದಿಂದ ಮಕ್ಕಳಿಗೆ ರಕ್ಷಣೆ ಸಿಗುವ ಯಾವ ಭರವಸೆಯೂ ಇಲ್ಲ ಅನ್ನೋದು ಜನಾಭಿಪ್ರಾಯ. ಆಯೋಗದ ಕಡೆಯಿಂದ ಐದು ಜಿಲ್ಲೆಗಳಿಗೆ ಒಬ್ಬ ಸದಸ್ಯನನ್ನು ನೇಮಿಸಲಾಗಿದ್ದು ಅವರು ಕೆಲಸ ಮಾಡ್ತಿದಾರೆ ಅಂತ ಹೇಳಲಾಗ್ತಿದೆ. ಆದರೆ ಅವರನ್ನು ಸಂಪರ್ಕಿಸುವುದು ಹೇಗೆ ಎಂಬುದು ಯಾರಿಗೂ ತಿಳಿದಿಲ್ಲ. ಅವರ ದೂರವಾಣಿ ಸಂಖ್ಯೆಗಳೂ ಕೂಡಾ ಬಹಿರಂಗವಾಗಿಲ್ಲ. ಜೊತೆಗೆ ಅವರದ್ದೇ ಆದ ಸೀಮಿತ ಸೌಲಭ್ಯಗಳಲ್ಲಿ ಎಲ್ಲಾ ಕಡೆ ಹೋಗಿ ಮಕ್ಕಳ ರಕ್ಷಣೆ ಮಾಡುವುದು ಕೂಡಾ ಅಸಾಧ್ಯ.
ಇನ್ನೊಂದೆಡೆ ಚೈಲ್ಡ್ ಲೈನ್ ಫೌಂಡೇಶನ್ನ 1098 ಸಹಾಯವಾಣಿಗೆ ಕರೆಗಳು ಬರುತ್ತಿದ್ದು, ಅವರು ದೂರು ಸ್ವೀಕರಿಸುತ್ತಿದ್ದಾರೆ ಎಂದು ಆಯೋಗದ ಕಾರ್ಯದರ್ಶಿ ತಿಳಿಸಿದ್ದಾರೆ. ಚೈಲ್ಡ್ ಲೈನ್ ಫೌಂಡೇಶನ್ ಕೇಂದ್ರ ಸರ್ಕಾರದ ಅಧೀನದಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದ್ದು, ರಾಜ್ಯಕ್ಕೆ ಆಯೋಗದ ಅನಿವಾರ್ಯತೆ ಏನಿದೆ ಎಂಬ ಪ್ರಶ್ನೆ ಮೂಡಿಸುತ್ತದೆ.