ಬೆಂಗಳೂರು: ಚೆಕ್ ಬೌನ್ಸ್ ಪ್ರಕರಣ ಸಂಬಂಧ ಶಿಕ್ಷಣ ಸಚಿವ ಮಧು ಬಂಗಾರಪ್ಪ ರಾಜೀನಾಮೆಗೆ ಪ್ರತಿಪಕ್ಷ ಬಿಜೆಪಿ ಆಗ್ರಹಿಸಿದೆ. ಈ ಸಂಬಂಧ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಕಾಂಗ್ರೆಸ್ ಸರ್ಕಾರದ ಶಿಕ್ಷಣ ಸಚಿವರು ಚೆಕ್ ಬೌನ್ಸ್ ಪ್ರಕರಣದಲ್ಲಿ ಶಿಕ್ಷಾರ್ಹ ಅಪರಾಧಿ ಎಂದು ಸಾಬೀತಾಗಿದೆ. ಇದು ಸರ್ಕಾರದ ಘನತೆ, ಅಷ್ಟೇ ಅಲ್ಲದೇ ಶಿಕ್ಷಣದ ಪಾವಿತ್ರ್ಯತೆಗೆ ತಗುಲಿದ ಕಪ್ಪು ಚುಕ್ಕೆಯಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಶಿಕ್ಷಣ ಸಚಿವ ಮಧು ಬಂಗಾರಪ್ಪ ರಾಜೀನಾಮೆ ನೀಡಿ ತಮ್ಮ ನೈತಿಕತೆ ಪ್ರದರ್ಶಿಸಲಿ, ಇಲ್ಲವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಕೂಡಲೇ ಸಚಿವರ ರಾಜೀನಾಮೆ ಪಡೆಯಲಿ ಎಂದು ಬಿ.ವೈ.ವಿಜಯೇಂದ್ರ ಒತ್ತಾಯಿಸಿದ್ದಾರೆ.
ರಾಜೀನಾಮೆ ನೀಡಿಲೆಂದ ಅಶೋಕ್:ಸರ್ಕಾರಿ ಶಾಲೆ ಮಕ್ಕಳನ್ನು ಮಲದ ಗುಂಡಿಗಿಳಿಸಿದಾಗ, ಓದುವ ಮಕ್ಕಳನ್ನು ಶೌಚಾಲಯ ಸ್ವಚ್ಛಗೊಳಿಸಲು ಬಳಸಿಕೊಂಡಾಗ, ಸಿಎಂ ಸಿದ್ದರಾಮಯ್ಯನವರು ಹಿಜಾಬ್ ವಿಷಯ ತೇಲಿಬಿಟ್ಟು ತಮಾಷೆ ನೋಡುತ್ತಿದ್ದಾಗ ನಾಪತ್ತೆಯಾಗಿದ್ದ ಶಿಕ್ಷಣ ಸಚಿವರು, ಈಗ ಚೆಕ್ ಬೌನ್ಸ್ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿ ಕಾಣಿಸಿಕೊಂಡಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಟೀಕಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಕೂಡಲೇ ಶಿಕ್ಷಣ ಸಚಿವರ ರಾಜೀನಾಮೆ ಪಡೆದುಕೊಂಡು ಅರ್ಹರಿಗೆ ಶಿಕ್ಷಣ ಇಲಾಖೆ ನೀಡಬೇಕು ಎಂದು ಎಕ್ಸ್ ಪೊಸ್ಟ್ ಮೂಲಕ ಆರ್.ಅಶೋಕ್ ಆಗ್ರಹಿಸಿದ್ದಾರೆ.