ಬೆಂಗಳೂರು: ಶಾಸಕ ರೇಣುಕಾಚಾರ್ಯ ಸಹೋದರನ ಪುತ್ರ ಚಂದ್ರು ಸಾವಿನ ಪ್ರಕರಣದ ಕುರಿತು ಪೊಲೀಸ್ ತನಿಖೆ ಸರಿಯಾದ ರೀತಿಯಲ್ಲಿಯೇ ನಡೆಯುತ್ತಿದೆ. ಶಾಸಕರು ಭಾವೋದ್ವೇಗದಿಂದ ತನಿಖೆ ಸರಿಯಾಗಿ ನಡೆಯುತ್ತಿಲ್ಲ ಎಂದಿದ್ದಾರಷ್ಟೆ. ಈ ಬಗ್ಗೆ ಅವರೊಂದಿಗೆ ಮಾತನಾಡುತ್ತೇನೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟಪಡಿಸಿದ್ದಾರೆ.
ಪೊಲೀಸರು ಸರಿಯಾದ ರೀತಿಯಲ್ಲಿ ತನಿಖೆ ನಡೆಸುತ್ತಿದ್ದಾರೆ: ಆರ್.ಟಿ ನಗರದಲ್ಲಿರುವ ಸಿಎಂ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಂದ್ರು ಸಾವಿನ ಪ್ರಕರಣಕ್ಕೆ ಸರ್ಕಾರ ಬಹಳ ಮಹತ್ವ ಕೊಟ್ಟಿದೆ. ಎಡಿಜಿಪಿ ಸ್ಥಳಕ್ಕೆ ಹೋಗಿದ್ದರು. ಯಾವುದನ್ನೂ ಅವಗಣನೆ ಮಾಡಿಲ್ಲ. ರೇಣುಕಾಚಾರ್ಯ ಜಾಗದಲ್ಲಿ ಯಾರೇ ಇದ್ದರೂ ಭಾವೋದ್ವೇಗಕ್ಕೆ ಒಳಗಾಗುತ್ತಿದ್ದರು. ತನಿಖೆ ವಿಚಾರದಲ್ಲಿ ಯಾವುದೇ ಸಂದೇಹ ಬೇಡ. ಪೊಲೀಸರು ಯಾವುದನ್ನೂ ಮುಚ್ಚಿಡುತ್ತಿಲ್ಲ. ಮುಚ್ಚಿಡುವುದರಿಂದ ಯಾರಿಗೇನು ಪ್ರಯೋಜನ ಇದೆ ಹೇಳಿ? ಯಡಿಯೂರಪ್ಪ ನವರೂ ಭೇಟಿ ಕೊಟ್ಟಿದ್ದರು. ತನಿಖೆಯ ವರದಿ ಬಂದ ಬಳಿಕ ಸತ್ಯಾಂಶ ಗೊತ್ತಾಗುತ್ತದೆ ಎಂದು ಹೇಳಿದರು.
ರೇಣುಕಾಚಾರ್ಯ ಭಾವೋದ್ವೇಗದಿಂದ ಆ ರೀತಿ ಹೇಳಿದ್ದಾರೆ: ಮನೆಯಲ್ಲಿ ಯುವಕನನ್ನು ಕಳೆದುಕೊಂಡಿರುವ ಕಾರಣ ಭಾವುಕರಾಗಿ ಮಾತಾಡುತ್ತಾರೆ. ಸ್ವಲ್ಪ ದಿನ ಆ ರೀತಿ ಇರುತ್ತದೆ. ನಾನು ಕೂಡಾ ರೇಣುಕಾಚಾರ್ಯ ಜೊತೆ ಮಾತಾಡುತ್ತೇನೆ. ಆ ಕುಟುಂಬಕ್ಕೆ ಬಹಳ ದೊಡ್ಡ ಹೊಡೆತ ಬಿದ್ದಿದೆ. ಗೃಹ ಇಲಾಖೆಯಿಂದ ತೀವ್ರತರವಾದ ತನಿಖೆ ಮಾಡಿಸುತ್ತಿದ್ದೇವೆ. ಮೂರು ಜನ ತಜ್ಞ ವೈದ್ಯರ ನೇತೃತ್ವದಲ್ಲಿ ಪೋಸ್ಟ್ ಮಾರ್ಟಮ್ ನಡೆದಿದೆ. ಪೊಲೀಸ್ ವರದಿ ಬರುವವರೆಗೂ ನಾವು ಯಾರೂ ಏನೂ ಹೇಳಲು ಆಗಲ್ಲ. ಕೊಲೆ ಪ್ರಕರಣ ದಾಖಲು ಆಗಲಿಲ್ಲ. ಅಸಹಜ ಸಾವು ಎಂದು ಎಫ್ ಐಆರ್ ಆಗಿದೆ. ವರದಿ ಬಂದ ಬಳಿಕ ಕೊಲೆಯಾಗಿದ್ದರೆ ಕೊಲೆ ಕೇಸ್ ದಾಖಲಾಗುತ್ತದೆ.ಈ ಹಂತದಲ್ಲಿ ಏನೂ ಹೇಳಲೂ ಆಗಲ್ಲ ಎಂದರು.
ಬಂಡೆ ಸ್ವಾಮೀಜಿ ಆತ್ಮಹತ್ಯೆ ಪ್ರಕರಣ: ಬಂಡೆ ಮಠದ ಸ್ವಾಮೀಜಿ ಆತ್ಮಹತ್ಯೆ ಪ್ರಕರಣ ವಿಚಾರವಾಗಿ ಮಾತನಾಡಿದ ಗೃಹ ಸಚಿವರು, ಪ್ರಕರಣದಲ್ಲಿ ಎಲ್ಲ ರೀತಿಯಿಂದಲೂ ಆಳವಾದ ತನಿಖೆ ನಡೆಯುತ್ತಿದೆ. ತನಿಖೆಯಿಂದ ಸತ್ಯ ಹೊರಬರಲಿದೆ ಎಂದು ಹೇಳಿದರು.