ಬೆಂಗಳೂರು: ರಾಜ್ಯ ಸರ್ಕಾರ ಸಿಟಿ ಕ್ರೈಮ್ ಬ್ರಾಂಚ್(ಸಿಸಿಬಿ) ರಚನೆ ಮಾಡಿ ಪೊಲೀಸ್ ಠಾಣೆಯಾಗಿ ಅಧಿಕಾರ ನೀಡಿದ ಬಳಿಕ ಆ ಅಧಿಕಾರಿಗಳು ಕ್ರಿಮಿನಲ್ ಪ್ರಕರಣಗಳ ತನಿಖೆ ನಡೆಸಿ ಆರೋಪ ಪಟ್ಟಿ ಸಲ್ಲಿಸುವ ಅಧಿಕಾರ ನೀಡಿದಂತೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಅಲ್ಲದೆ, ಕರ್ನಾಟಕ ಪೊಲೀಸ್ ಕಾಯಿದೆಯಡಿ ರಾಜ್ಯ ಸರ್ಕಾರವು ಯಾವುದೇ ಅಧಿಕಾರಿಯನ್ನು ಪೊಲೀಸ್ ಠಾಣೆಯ ಮುಖ್ಯಸ್ಥರನ್ನಾಗಿ ನೇಮಕ ಮಾಡುವುದಕ್ಕೆ ಅವಕಾಶವಿದ್ದು, ಅಂತಹ ಅಧಿಕಾರಿಯು ಠಾಣಾ ಮುಖ್ಯಸ್ಥರಾಗಿ ಅಧಿಕಾರ ನಡೆಸುವುದಕ್ಕೆ ಅವಕಾಶವಿದೆ ಎಂದು ನ್ಯಾಯಪೀಠ ತಿಳಿಸಿದೆ.
ನಗರದ ಉದ್ಯಮಿ ದಿತುಲ್ ಮೆಹ್ತಾ ಮತ್ತಿತರರ ವಿರುದ್ಧ ಸಿಸಿಬಿ ಪೊಲೀಸರು ಸಲ್ಲಿಸಿದ್ದ ಆರೋಪ ಪಟ್ಟಿಯನ್ನು ರದ್ದುಪಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ. ನಟರಾಜನ್ ಅವರಿದ್ದ ನ್ಯಾಯಪೀಠ, ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ. ಅಲ್ಲದೇ, ಸಿಸಿಬಿ ಅಧಿಕಾರಿಗಳು ಸಲ್ಲಿಸಿದ್ದ ಅಂತಿಮ ವರದಿ ಪೊಲೀಸ್ ವರದಿಗೆ ಸಮನಾಗಿರಲಿದೆ. ಜತೆಗೆ, ಈ ವರದಿಯ ಆಧಾರದಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಸಿಆರ್‌ಪಿಸಿ 190ರ ಪ್ರಕಾರ ಕಾಗ್ನಿಜೆನ್ಸ್ ತೆಗೆದುಕೊಳ್ಳಬಹುದಾಗಿದೆ. ಆದ್ದರಿಂದ ಸಿಸಿಬಿ ಸಲ್ಲಿಸಿರುವ ಆರೋಪ ಪಟ್ಟಿಯು ಸಮರ್ಥನಿಯ ಎಂದು ತಿಳಿಸಿದೆ.
ರಾಜ್ಯದಲ್ಲಿ 1971ರ ಸೆಪ್ಟಂಬರ್ 3ರಿಂದ ಸಿಸಿಬಿ ಕಾರ್ಯನಿರ್ವಹಿಸುತ್ತಿದೆ. 2021ರ ಫೆಬ್ರುವರಿ 25ರಂದು ಪೊಲೀಸ್ ಠಾಣೆಯ ಅಧಿಕಾರನ್ನು ನೀಡಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಇದನ್ನು ರಾತ್ರೋರಾತ್ರಿ ಬೆಳವಣಿಗೆ ಎಂದು ಪರಿಗಣಿಸಲಾಗದು. ಅಲ್ಲದೇ, ಕರ್ನಾಟಕ ಪೊಲೀಸ್ ಕಾಯ್ದೆಯ ಸೆಕ್ಷನ್ 7ರ ಅಡಿಯಲ್ಲಿ ರಾಜ್ಯ ಸರ್ಕಾರ ನೀಡಿದ ಅಧಿಕಾರಕ್ಕೆ ಅನುಗುಣವಾಗಿ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಕಾರ್ಯನಿರ್ವಹಿಸುತ್ತಿದ್ದು, ಪ್ರಕರಣದ ತನಿಖೆಯನ್ನು ಸಿಸಿಬಿಗೆ ಹಸ್ತಾಂತರಿಸಿದ್ದಾರೆ. ಸಿಸಿಬಿ ಪೊಲೀಸರು ತನಿಖೆ ನಡೆಸಿ ಆರೋಪ ಪಟ್ಟಿಯನ್ನು ಸಲ್ಲಿಸಿದ್ದಾರೆ. ಇದು ಸಿಆರ್‌ಪಿಸಿ ಸೆಕ್ಷನ್ 172(2)ರ ಅಡಿಯಲ್ಲಿ ಅಂತಿಮ ವರದಿಯಾಗಿದ್ದು, ಪ್ರಕರಣದಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರು ಕಾಗ್ನಿಜೆನ್ಸ್ ತೆಗೆದುಕೊಂಡಿರುವುದು ಕಾನೂನು ಪ್ರಕಾರವೇ ಆಗಿದೆ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿ ಅರ್ಜಿಯನ್ನು ವಜಾಗೊಳಿಸಿದೆ.