ಬೆಂಗಳೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಇಂದು ಆಟೋ, ಟ್ಯಾಕ್ಸಿ ಚಾಲಕರು ಮೆಜೆಸ್ಟಿಕ್‌ನ ರೈಲ್ವೆ ಸ್ಟೇಷನ್‌ನಿಂದ ಫ್ರೀಡಂ ಪಾರ್ಕ್ವರೆಗೆ ರ‌್ಯಾಲಿ ಹಮ್ಮಿಕೊಳ್ಳಲಾಗಿದ್ದು, ರ‌್ಯಾಲಿಗೆ ಮಳೆ ಅಡ್ಡಿಯಾಗುವ ಸಾಧ್ಯತೆ ಇದೆ.
ಆಟೋ ಮತ್ತು ಟ್ಯಾಕ್ಸಿ ಚಾಲಕರ ಮುಷ್ಕರ ಇದ್ದರೂ ಮೆಜೆಸ್ಟಿಕ್ ಬಳಿ ಎಂದಿನಂತೆ ಆಟೋ, ಟ್ಯಾಕ್ಸಿ ಸಂಚಾರವಾಗುತ್ತಿರುವುದು ಕಂಡು ಬಂದಿದೆ. ಓಲಾ, ಊಬರ್ ಕ್ಯಾಬ್ಗಳು, ಆಟೋ, ಟ್ಯಾಕ್ಸಿಗಳಲ್ಲಿ ಎಂದಿನಂತೆ ಜನರು ಸಂಚಾರ ಮಾಡುತ್ತಿದ್ದಾರೆ.
ಮಳೆ ನಡುವೆಯೂ ಮುಷ್ಕರಕ್ಕೆ ಮುಂದಾಗಿರುವ ಚಾಲಕರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ, ಬಿಎಂಟಿಸಿ ಹಾಗೂ ಕೆ.ಎಸ್.ಆರ್ ಟಿಸಿ ಬಸ್ ನಿಲ್ದಾಣ, ಆನಂದ್ ರಾವ್ ಸರ್ಕಲ್ ಸೇರಿದಂತೆ ಹಲವೆಡೆ ಸಂಚಾರ ಎಂದಿನಂತಿದೆ. ಈ ಮುಷ್ಕರದ ಕುರಿತು ಬಹುತೇಕ ಆಟೋ ಚಾಲಕರಿಗೆ ಮಾಹಿತಿಯೇ ಇಲ್ಲ. ಅದಕ್ಕೆ ನಮ್ಮ ವಾಹನಗಳನ್ನು ರಸ್ತೆಗಿಳಿಸಿದ್ದೇವೆ ಎಂದು ಆಟೋ ಚಾಲಕರು ಹೇಳುತ್ತಿದ್ದಾರೆ.
ಆಟೋ ಟ್ಯಾಕ್ಸಿ ಚಾಲಕರ ಬೇಡಿಕೆಗಳೇನು:
ಆಟೋ ಚಾಲಕರಿಗೆ 1 ಲಕ್ಷ & ಟ್ಯಾಕ್ಸಿ ಚಾಲಕರಿಗೆ 2 ಲಕ್ಷ ರೂಪಾಯಿ ಸಾಲ, ಜಾತಿವಾರು ನಿಗಮದಿಂದ ನೇರ ಸಾಲ ಯೋಜನೆಯಡಿಯಲ್ಲಿ ಸಾಲ, ಅಸಂಘಟಿತ ಚಾಲಕರ ಅಭಿವೃದ್ಧಿ ನಿಗಮ ಸ್ಥಾಪನೆ, ಕಂತುಗಳ ಮೇಲೆ ಹೆಚ್ಚು ಬಡ್ಡಿ ವಸೂಲಿ ನಿಲ್ಲಿಸಬೇಕು, ಬಡ್ಡಿ ವಜಾ ಮಾಡಲು ಸರ್ಕಾರ ಕ್ರಮ ಕೈಗೊಳ್ಳಬೇಕು, ಆಟೋ, ಟ್ಯಾಕ್ಸಿ ಚಾಲಕರಿಗೆ ಗೃಹ ಮಂಡಳಿಯಿಂದ ಮನೆ ಕಟ್ಟಿಸಿಕೊಡಬೇಕು, ಹೊಸ ಆಟೋ ರಿಕ್ಷಾ ಮಾರಾಟ ತೆರಿಗೆ ಶೇ.17 ರಿಂದ 5ಕ್ಕೆ ಇಳಿಸಬೇಕು, ಇ-ಪರ್ಮಿಟ್ ಆಧಾರ್ ಲಿಂಕ್ ಕಡ್ಡಾಯಗೊಳಿಸಬೇಕು, 15 ವರ್ಷದ ಹಳೆ ವಾಹನಗಳ FC ನಿಲ್ಲಿಸಿರುವುದನ್ನು ರದ್ದು, ಕೊರೊನಾದಿಂದ ಮೃತಪಟ್ಟ ಚಾಲಕರಿಗೆ 25 ಲಕ್ಷ ಪರಿಹಾರ, ಆ್ಯಪ್ ಆಧಾರಿತ ಬೃಹತ್ ಕಂಪನಿ ಪೈಪೋಟಿ ತಡೆಗಟ್ಟಬೇಕು, ಸರ್ಕಾರ ನಿಗದಿಪಡಿಸಿರುವ ದರ ನೀಡಬೇಕು, ಓಲಾ, ಊಬರ್ ಮಾದರಿಯಲ್ಲಿ ಸರ್ಕಾರ ಆ್ಯಪ್ ಆಧಾರಿತ ಸಂಸ್ಥೆ ಸ್ಥಾಪಿಸಬೇಕು ಎಂಬ ಹಲವು ಬೇಡಿಕೆಗಳನ್ನು ಇಟ್ಟುಕೊಂಡು ಆಟೋ, ರಿಕ್ಷಾ ಚಾಲಕರು ರ‌್ಯಾಲಿಗೆ ಮುಂದಾಗಿದ್ದಾರೆ.