ಬೆಂಗಳೂರು :ರಾಜ್ಯದ ಎಲ್ಲ ವರ್ಗದವರಿಗೂ ನಮ್ಮ ಪಕ್ಷದಲ್ಲಿ ಅವಕಾಶ ನೀಡಲಾಗಿದೆ. ಹಳೆ ಬೇರು, ಹೊಸ ಚಿಗುರಿಗೆ ಆದ್ಯತೆ ನೀಡಿದ್ದೇವೆ ಎಂದು ಬಿಜೆಪಿ ಮುಖಂಡ ಸಿ.ಟಿ.ರವಿ ತಿಳಿಸಿದರು. ಬೆಂಗಳೂರು ಪ್ರೆಸ್ ಕ್ಲಬ್ನಲ್ಲಿಂದು ನಡೆದ ಮಾಧ್ಯಮ ಸಂವಾದದಲ್ಲಿ ಅವರು ಮಾತನಾಡಿದರು.
ನೀತಿ, ನೇತೃತ್ವ, ನಿಯತ್ತು ಈ ಮೂರು ಅಜೆಂಡಾಗಳ ಮೂಲಕ ನಾವು ಚುನಾವಣೆಯಲ್ಲಿ ಸ್ಪರ್ಧಿಸಲಿದ್ದೇವೆ. ದೇಶ ಮೊದಲು ಅನ್ನೋದು ನಮ್ಮ ನೀತಿ . ಹೈಕಮಾಂಡ್ ನೇತೃತ್ವದಲ್ಲಿ ರಾಜ್ಯದಲ್ಲಿ ನಾವು ಮುಂದೆ ಸಾಗುತ್ತೇವೆ. ಅವರ ಜೊತೆ ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ಮತ್ತು ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮುಂದೆ ಹೆಜ್ಜೆ ಇಡುತ್ತೇವೆ. ಇನ್ನು ಅಭ್ಯರ್ಥಿಗಳ ವಿಚಾರದಲ್ಲಿ ಎಲ್ಲ ರೀತಿಯಲ್ಲೂ ನಾವು ಅಭ್ಯರ್ಥಿಗಳ ಸರ್ವೇಗಳನ್ನು ಮಾಡಿದ್ದೇವೆ. ನಮ್ಮ ನಿಯತ್ತನ್ನು ಕಾಲಕಾಲಕ್ಕೆ ಸ್ಪಷ್ಟಪಡಿಸಿದ್ದೇವೆ ಎಂದು ಹೇಳಿದರು.
ಅಪವಿತ್ರ ಮೈತ್ರಿ ಮಾಡಿಕೊಂಡು ಕುಮಾರಸ್ವಾಮಿ ಜೊತೆ ಕಾಂಗ್ರೆಸ್ ಅಧಿಕಾರ ಪ್ರಾರಂಭಿಸಿದ್ದರು. ಆದರೆ, ಜನ ಅದನ್ನು ಒಪ್ಪಿಕೊಳ್ಳಲಿಲ್ಲ. ಡಬಲ್ ಇಂಜಿನ್ ಸರ್ಕಾರ ಅಧಿಕಾರಕ್ಕೆ ಬಂದು ರಾಜ್ಯದಲ್ಲಿ ಹಲವು ಯೋಜನೆಗಳು ನಡೆದಿವೆ. ಸ್ಮಾರ್ಟ್ ಸಿಟಿ ಯೋಜನೆಯಡಿ 7 ಸಿಟಿಗಳು ಆಯ್ಕೆ ಆಗಿವೆ ಎಂದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಮನ್ವಯದಿಂದ ಅಧಿಕಾರ ನಡೆಸಿ ಅವಧಿ ಪೂರ್ಣಗೊಳಿಸಿ, ಕಠಿಣ ನಿರ್ಧಾರ ತೆಗೆದುಕೊಂಡವರು. ಮೀಸಲಾತಿ ವಿಚಾರಕ್ಕೆ ಯಾರೂ ಕೈ ಹಾಕಿಲ್ಲ. ಆದರೆ ಬೊಮ್ಮಾಯಿ ಒಳ ಮೀಸಲಾತಿಯನ್ನು ಅನುಷ್ಠಾನಗೊಳಿಸಿದರು. ನಾಯಕತ್ವ ಗುಣ ಇದಕ್ಕಿಂತ ಬೇಕಾ? ರಾಜ್ಯಕ್ಕೆ ನಾವು ಏನು ನೀಡಿದ್ದೇವೆ ಅದನ್ನು ಹೇಳುತ್ತೇವೆ. ಲಂಬಾಣಿ ತಾಂಡಗಳಿಗೆ ಹಕ್ಕು ಪತ್ರ ವಿತರಣೆ ಮಾಡಿದ್ದೇವೆ. ಆದರೆ ಹಲವರು ಸುಮ್ಮನೆ ಆರೋಪ ಮಾಡುತ್ತಾರೆ ಎಂದು ಪ್ರತಿಪಕ್ಷದ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.