ಕರ್ನಾಟಕ

karnataka

ETV Bharat / state

ರಾಷ್ಟ್ರೀಯ ಪಕ್ಷಗಳ ತಂತ್ರಗಾರಿಕೆ: ಜೆಡಿಎಸ್​​​ಗೆ ಮುಳುವಾಗುತ್ತಾ ಉಪ ಚುನಾವಣೆ!? - Shira JDS candidate

ಸಾಕಷ್ಟು ಬಾರಿ ಆಂತರಿಕ ಭಿನ್ನಾಭಿಪ್ರಾಯದಿಂದ ಛಿದ್ರಗೊಂಡಿದ್ದರೂ ಕೂಡ ಪ್ರಬಲ ಪ್ರಾದೇಶಿಕ ಪಕ್ಷವಾಗಿ ಇದುವರೆಗೂ ಸಾಕಷ್ಟು ಬಲ ಉಳಿಸಿಕೊಂಡಿದ್ದ ಜೆಡಿಎಸ್ ಪಾಲಿಗೆ ಉಪ ಚುನಾವಣೆ ಫಲಿತಾಂಶ ಅವಸಾನದ ದಾರಿಯನ್ನು ತೋರಿಸುತ್ತದಾ ಎನ್ನುವ ಅನುಮಾನ ಕಾಡಲಾರಂಭಿಸಿದೆ.

dsd
ಉಪಚುನಾವಣೆ ಜೆಡಿಎಸ್ ಅವಸಾನದ ಸುಳಿವಾ..?

By

Published : Oct 22, 2020, 9:21 AM IST

ಬೆಂಗಳೂರು: ಪ್ರಬಲ ಪ್ರಾದೇಶಿಕ ಪಕ್ಷವಾಗಿ ರಾಜ್ಯದಲ್ಲಿ ಇದುವರೆಗೂ ಉತ್ತಮ ನೆಲೆ ಹೊಂದಿದ್ದ ಜೆಡಿಎಸ್ ಪಕ್ಷಕ್ಕೆ ಎರಡು ರಾಷ್ಟ್ರೀಯ ಪಕ್ಷಗಳು ಅವಸಾನದ ಹಾದಿ ತೋರಿಸಲಿವೆಯೇ ಎಂಬ ಅನುಮಾನ ಉಪ ಚುನಾವಣೆ ಮೂಲಕ ಕಾಡಿದೆ.

ರಾಜರಾಜೇಶ್ವರಿ ನಗರ ಹಾಗೂ ತುಮಕೂರು ಜಿಲ್ಲೆಯ ಶಿರಾ ವಿಧಾನಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪ ಚುನಾವಣೆ ಸಂದರ್ಭ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ನಡೆಸುತ್ತಿರುವ ಕಾರ್ಯತಂತ್ರ ಈ ಅನುಮಾನವನ್ನು ದಟ್ಟವಾಗಿಸಿದೆ. ಜೆಡಿಎಸ್ ಪಕ್ಷ ಒಂದಿಷ್ಟು ಅಸ್ತಿತ್ವ ಹೊಂದಿರುವ ಜಿಲ್ಲೆಗಳಲ್ಲಿ ಬೆಂಗಳೂರು ನಗರ ಹಾಗೂ ತುಮಕೂರು ಸಹ ಸೇರಿವೆ. ಅಲ್ಲದೆ ಶಿರಾ ಕ್ಷೇತ್ರದಲ್ಲಿ ತಮ್ಮದೇ ಶಾಸಕರಾಗಿದ್ದ ಬಿ.ಸತ್ಯನಾರಾಯಣರನ್ನು ಕಳೆದುಕೊಂಡಿರುವ ಜೆಡಿಎಸ್ ಅನುಕಂಪದ ಅಲೆಯನ್ನು ನೆಚ್ಚಿಕೊಂಡು ಸತ್ಯನಾರಾಯಣ ಪತ್ನಿ ಅಮ್ಮಜಮ್ಮರನ್ನೇ ಕಣಕ್ಕಿಳಿಸಿದೆ. ಆದರೂ ರಾಷ್ಟ್ರೀಯ ಪಕ್ಷಗಳ ಮೇಲಾಟದ ನಡುವೆ ಗೆಲುವು ಅಸಾಧ್ಯವೇನೋ ಎಂಬ ಅನುಮಾನ ಮೂಡಿಸುತ್ತಿದೆ.

ಸತ್ಯನಾರಾಯಣ ನಿಧನದಿಂದ ಶಿರಾ ಕ್ಷೇತ್ರ ತೆರವಾಗಿದ್ದರೆ, ಕಾಂಗ್ರೆಸ್ ಶಾಸಕರಾಗಿದ್ದ ಮುನಿರತ್ನ ರಾಜೀನಾಮೆ ನೀಡಿದ್ದರಿಂದ ರಾಜರಾಜೇಶ್ವರಿ ನಗರ ಕ್ಷೇತ್ರ ತೆರವಾಗಿತ್ತು. ಇದೀಗ ಮುನಿರತ್ನ ಬಿಜೆಪಿಯಿಂದ ಕಣಕ್ಕಿಳಿದಿದ್ದಾರೆ. ಡಿಕೆ ಸೋಹದರರು ಈ ಕ್ಷೇತ್ರವನ್ನು ಅತ್ಯಂತ ಪ್ರತಿಷ್ಠೆಯಾಗಿ ಪರಿಗಣಿಸಿದ್ದು, ಕಾಂಗ್ರೆಸ್​ನಿಂದ ಕುಸುಮಾ ಹನುಮಂತರಾಯಪ್ಪರನ್ನ ಕಣಕ್ಕಿಳಿಸಿದ್ದಾರೆ. ಗೆಲ್ಲಲೇಬೇಕು ಎಂಬ ಛಲದಿಂದ ಎರಡೂ ಪಕ್ಷಗಳು ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರನ್ನು ದೊಡ್ಡ ಮಟ್ಟದಲ್ಲಿ ಸೆಳೆದಿವೆ.

ಸದ್ಯ ಜೆಡಿಎಸ್ ಅಭ್ಯರ್ಥಿಯಾಗಿರುವ ಕೃಷ್ಣಮೂರ್ತಿ ಜೊತೆ ಕ್ಷೇತ್ರದಲ್ಲಿ ಸುತ್ತಲೂ ದೊಡ್ಡ ಮಟ್ಟದ ಕಾರ್ಯಕರ್ತರ ಬಲ ಕೂಡ ಇಲ್ಲದಂತಾಗಿದೆ. ಹಂತ ಹಂತವಾಗಿ ಜೆಡಿಎಸ್ ಪಾಳಯದಲ್ಲಿದ್ದ ಮುಖಂಡರು ಹಾಗೂ ಕಾರ್ಯಕರ್ತರನ್ನು ಬಿಜೆಪಿ ಹಾಗೂ ಕಾಂಗ್ರೆಸ್ ಸೆಳೆದಿವೆ. ಈ ಒಂದು ಯತ್ನ ಕೇವಲ ಬೆಂಗಳೂರಿಗೆ ಸೀಮಿತವಾಗಿಲ್ಲ, ಶಿರಾ ವಿಧಾನಸಭಾ ಕ್ಷೇತ್ರದಲ್ಲಿಯೂ ಇದೇ ಪರಿಸ್ಥಿತಿ ಎದುರಾಗಿದೆ. ಮಾನಸಿಕವಾಗಿ ಜೆಡಿಎಸ್ ತೊರೆಯಲು ನಿರ್ಧರಿಸಿರುವ ಜಿಲ್ಲೆಯ ಮುಖಂಡರು ಹಾಗೂ ಶಾಸಕರು ಪ್ರಚಾರ ಕಾರ್ಯಕ್ಕೆ ಬಂದಿಲ್ಲ. ಇನ್ನು ಇಲ್ಲಿಯೂ ಜೆಡಿಎಸ್ ಪಾಳಯದಲ್ಲಿ ಇದ್ದ ಮುಖಂಡರು, ಕಾರ್ಯಕರ್ತರನ್ನು ಕಾಂಗ್ರೆಸ್ ಹಾಗೂ ಬಿಜೆಪಿ ಸೆಳೆದಿವೆ.

ಜೆಡಿಎಸ್ ಅಭ್ಯರ್ಥಿ ಜೊತೆ ಪ್ರಚಾರಕ್ಕೂ ಇಲ್ಲಿ ಕಾರ್ಯಕರ್ತರು ಸಿಗುತ್ತಿಲ್ಲ. ಜಿಲ್ಲೆಯ ಪ್ರಭಾವಿ ಜೆಡಿಎಸ್ ನಾಯಕರು ಪ್ರಚಾರಕ್ಕೆ ಬರುತ್ತಿಲ್ಲ. ಒಟ್ಟಾರೆ ಎರಡು ಉಪ ಚುನಾವಣೆ ಫಲಿತಾಂಶ ಜೆಡಿಎಸ್ ಪಾಲಿಗೆ ವ್ಯತಿರಿಕ್ತವಾಗಿ ಬಂದಲ್ಲಿ ಮುಂದಿನ ವಿಧಾನಸಭೆ ಚುನಾವಣೆಗೆ ಜೆಡಿಎಸ್​ನ ಕಾರ್ಯಕರ್ತರು ಹಾಗೂ ಮುಖಂಡರನ್ನು ಸೆಳೆಯುವ ಕಾರ್ಯವನ್ನು ಎರಡೂ ರಾಷ್ಟ್ರೀಯ ಪಕ್ಷಗಳು ತಮ್ಮ ಧ್ಯೇಯವಾಗಿಸಿಕೊಳ್ಳುವಲ್ಲಿ ಯಾವುದೇ ಸಂಶಯವಿಲ್ಲ.

ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಒಂದಿಷ್ಟು ನೆಲೆ ಕಂಡುಕೊಂಡಿದ್ದು, ಇದರ ನಂತರ ಪ್ರಬಲವಾಗಿರುವ ಪಕ್ಷ ಕಾಂಗ್ರೆಸ್ ಆಗಿದೆ. ಜೆಡಿಎಸ್ ಹಾಗೂ ಕಾಂಗ್ರೆಸ್​ ಭದ್ರಕೋಟೆಯನ್ನು ಮುರಿಯುವ ಯತ್ನದಲ್ಲಿ ಬಿಜೆಪಿ ತೊಡಗಿದ್ದು, ಮುಂದಿನ ವಿಧಾನಸಭೆ ಚುನಾವಣೆ ಹೊತ್ತಿಗೆ ಜೆಡಿಎಸ್​ನ ಸಾಕಷ್ಟು ನಾಯಕರನ್ನು ಕಾಂಗ್ರೆಸ್ ಹಾಗೂ ಬಿಜೆಪಿ ಸೆಳೆಯುವುದರಲ್ಲಿ ಯಾವುದೇ ಸಂಶಯವಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ABOUT THE AUTHOR

...view details