ಕರ್ನಾಟಕ

karnataka

ETV Bharat / state

ವಿಧಾನಸಭೆಯಲ್ಲಿ 2023-24ನೇ ಸಾಲಿನ ಬಜೆಟ್, ಪಿಟಿಸಿಎಲ್ ತಿದ್ದುಪಡಿ ಮಸೂದೆ ಅಂಗೀಕಾರ - PTCL Amendment Bill Passed

ಸಿಎಂ ಸಿದ್ದರಾಮಯ್ಯ ಮಂಡಿಸಿದ 2023 24ನೇ ಸಾಲಿನ 3.41 ಲಕ್ಷ ಕೋಟಿ ರೂ. ಮೊತ್ತದ ಬಜೆಟ್‍ ಮತ್ತು ಪಿಟಿಸಿಎಲ್ ತಿದ್ದುಪಡಿ ಮಸೂದೆಗೆ ವಿಧಾನಸಭೆಯಲ್ಲಿ ಅನುಮೋದನೆ ದೊರೆಯಿತು.

Assembly
ವಿಧಾನಸಭೆ

By

Published : Jul 21, 2023, 9:38 AM IST

ಬೆಂಗಳೂರು : ಅನುಸೂಚಿತ ಜಾತಿ ಮತ್ತು ಅನುಸೂಚಿತ ಬುಡಕಟ್ಟುಗಳ ಕೆಲವು ಭೂಮಿಗಳ ವರ್ಗಾವಣೆ ನಿಷೇಧ ತಿದ್ದುಪಡಿ ವಿಧೇಯಕ 2023 (ಪಿಟಿಸಿಎಲ್ ತಿದ್ದುಪಡಿ ಮಸೂದೆ) ಮತ್ತು 2023-24 ನೇ ಸಾಲಿನ ಬಜೆಟ್ ವಿಧಾನಸಭೆಯಲ್ಲಿ ಗುರುವಾರ ಅಂಗೀಕಾರಗೊಂಡಿತು.

ಪಿಟಿಸಿಎಲ್ ತಿದ್ದುಪಡಿ ವಿಧೇಯಕದಡಿ ಪರಿಶಿಷ್ಟರ ಭೂಮಿ ಅಕ್ರಮ ಪರಭಾರೆ ಪ್ರಶ್ನಿಸಿ ನ್ಯಾಯಾಲಯದಲ್ಲಿ ಮನವಿ ಸಲ್ಲಿಸುವುದಕ್ಕೆ ಹಿಂದೆ ವಿಧಿಸಿದ್ದ ಕಾಲಮಿತಿಯನ್ನು ರದ್ದುಪಡಿಸಲಾಗಿದೆ. ಪರಿಶಿಷ್ಟ ಸಮುದಾಯದವರಿಗೆ ಸರ್ಕಾರ ಮಂಜೂರು ಮಾಡಿದ ಜಮೀನನ್ನು ಅನುಮತಿ ಇಲ್ಲದೇ ಮಾರಾಟ ಮಾಡುವುದಕ್ಕೆ ಹಾಲಿ ಪಿಟಿಸಿಎಲ್‌ ಕಾಯ್ದೆಯಲ್ಲಿ ನಿರ್ಬಂಧವಿತ್ತು. ಅಕ್ರಮ ಪರಭಾರೆ ಪ್ರಶ್ನಿಸಿ ವಾರಸುದಾರರು ಅರ್ಜಿ ಸಲ್ಲಿಸುವುದಕ್ಕೆ ಪಿಟಿಸಿಎಲ್‌ ಕಾಯ್ದೆಯಲ್ಲಿ ಕಾಲಮಿತಿ ನಿಗದಿಪಡಿಸಿರಲಿಲ್ಲ. ಕಾಲಮಿತಿ ನಿಗದಿಪಡಿಸದಿದ್ದರೆ ಅರ್ಜಿಗಳು ಮಾನ್ಯವಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿತ್ತು. ಹಾಗಾಗಿ, ಕಾಯ್ದೆ ಬಲ ಕಳೆದುಕೊಂಡಿತ್ತು.

ವಿಧಾನಸಭೆಯಲ್ಲಿ ಮಸೂದೆ ಮಂಡಿಸಿ ಮಾತನಾಡಿದ ಕಂದಾಯ ಸಚಿವ ಕೃಷ್ಣ ಭೈರೇಗೌಡ, 1978ರಲ್ಲಿ ಈ ಕಾನೂನನ್ನು ಇದೇ ಸದನ ಮಂಜೂರು ಮಾಡಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡ ಸಮುದಾಯದವರು ಸರ್ಕಾರದಿಂದ ಮಂಜೂರಾತಿಯಾಗಿರುವ ಜಮೀನುಗಳನ್ನು ಪರಭಾರೆ ಮಾಡಬೇಕಾದರೆ ಸರ್ಕಾರದ ಅನುಮತಿ ತೆಗೆದುಕೊಂಡಿರಬೇಕು. ಒಂದು ವೇಳೆ ಅನುಮತಿಯಿಲ್ಲದೇ ಮಾರಿದ್ದರೆ ಅಂತಹ ಜಮೀನುಗಳನ್ನು ಮೂಲ ಮಂಜೂರುದಾರರಿಗೆ ಮತ್ತೆ ಜಮೀನಿನ ಹಕ್ಕನ್ನು ನೀಡಬೇಕು ಎಂದು ಕಾನೂನು ತಂದಿತ್ತು. ಅಂದು ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಇಂದಿರಾಗಾಂಧಿಯವರು ಪ್ರಧಾನಿಯಾಗಿದ್ದಾಗ ದೇಶದಲ್ಲಿ ಬಡವರಾಗಿದ್ದ ದಲಿತರು ತಿಳುವಳಿಕೆಯ ಕೊರತೆಯಿಂದ ಅವರ ಜಮೀನುಗಳನ್ನು ಸರ್ಕಾರದ ಅನುಮತಿಯಿಲ್ಲದೇ ಬೇರೆಯವರು ಕೊಂಡುಕೊಳ್ಳುವುದನ್ನು ಕಡಿವಾಣ ಹಾಕಲು ಮುಂದಾಗಿದ್ದರು ಎಂದರು.

ಈ ಕಾನೂನಿನ ಅನ್ವಯ ನಮ್ಮ ಜಮೀನು ವಾಪಸ್ ಕೊಡಬೇಕೆಂದು ಪರಿಶಿಷ್ಟ ಜಾತಿಯ ಒಬ್ಬರು ದಾವೆ ಹೂಡಿದ್ದರು. ಆದರೆ ಎಸಿಯವರು ನಿಮ್ಮ ಜಮೀನು ಮಾರಿ ಬಹಳ ವರ್ಷಗಳಾಗಿವೆ. ಹಾಗಾಗಿ, ಈಗ ಕೇಳಲು ಬರುವುದಿಲ್ಲ ಎಂದು ತೀರ್ಪು ನೀಡಿದ್ದರು. ಕೊನೆಗೆ ಅದೇ ಕೇಸು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಆಗ ಸುಪ್ರೀಂ ಕೋರ್ಟ್ ಸೆಕ್ಷನ್ 5ರಲ್ಲಿ ಕಾಲಮಿತಿ ನಿಗದಿ ಮಾಡಿಲ್ಲ ಅನ್ನುವ ನ್ಯೂನತೆಯನ್ನು ಗುರುತಿಸಿ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಇದ್ದ ಹಕ್ಕನ್ನು ಕೊಡಲಾಗಿಲ್ಲ ಎಂದು ವಿವರಿಸಿದರು.

ಕಾನೂನಿನಲ್ಲಿ ಕಾಲಮಿತಿಯ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ಸುಪ್ರೀಂ ಹೇಳಿದೆ. ಹಾಗಾಗಿ, ಎಸಿಗಳು ಸುಪ್ರೀಂ ಕೋರ್ಟ್‌ನ ಈ ಆದೇಶ ಇಟ್ಟುಕೊಂಡು ಕಾಲಮಿತಿ ಮೀರಿದೆ ಎಂಬ ನೆಪ ಹೇಳಿ ಅರ್ಜಿಗಳನ್ನು ತಳ್ಳಿಹಾಕುವುದು ನಡೆಯುತ್ತಿದೆ. 2017 ರಿಂದ ದಲಿತ ಸಮುದಾಯಗಳು ಈ ಕಾನೂನಿನ ನ್ಯೂನತೆ ಸರಿಪಡಿಸಲು ತಿದ್ದುಪಡಿ ತರಲು ಹೋರಾಟ, ಧರಣಿ ಮಾಡುತ್ತಾ ಬಂದಿದ್ದಾರೆ. ಎಲ್ಲಾ ರಾಜಕೀಯ ಪಕ್ಷಗಳಿಗೂ ಮನವಿ ಮಾಡಿದ್ದಾರೆ ಎಂದರು.

ಇದನ್ನೂ ಓದಿ :ನಾಗಮಂಗಲ KSRTC ಬಸ್​ ಚಾಲಕನ ಆತ್ಮಹತ್ಯೆ ಯತ್ನದ ಹಿಂದೆ ರಾಜಕೀಯ ಒತ್ತಡವಿಲ್ಲ: ಸಿಐಡಿ ವರದಿ

ನಮ್ಮ ಸರ್ಕಾರ ಮಾತು ಕೊಟ್ಟಂತೆ ಮುಖ್ಯಮಂತ್ರಿಗಳು ಬಜೆಟ್‌ನಲ್ಲಿ ಘೋಷಣೆ ಮಾಡಿದ್ದರು. ಮೊದಲನೇ ಅಧಿವೇಶನದಲ್ಲಿಯೇ ನಾವು ಪಿಟಿಸಿಎಲ್ ಕಾಯ್ದೆಗೆ ತಿದ್ದುಪಡಿ ಮಂಡಿಸುತ್ತಿದ್ದೇವೆ. "ಸೆಕ್ಷನ್ 5(1)ಸಿ ನಲ್ಲಿ ಯಾವುದೇ ಕಾನೂನಿನಲ್ಲಿ ಏನೇ ಒಳಗೊಂಡಿದ್ದರೂ ಈ ಅಧಿನಿಯಮದ ಉಪಬಂಧಗಳನ್ನು ರದ್ದುಪಡಿಸಲು ಯಾವುದೇ ಕಾಲಮಿತಿ ಇರತಕ್ಕದ್ದಲ್ಲ ಎಂಬ ತಿದ್ದುಪಡಿ ಸೇರಿಸಿದ್ದೇವೆ ಎಂದು ಹೇಳಿದರು.

ಪ್ರಕರಣಗಳು ಯಾವ ನ್ಯಾಯಾಲಯದಲ್ಲಿ ಇರಲಿ, ಎಸಿ, ಡಿಸಿ, ಹೈಕೋರ್ಟ್, ಸುಪ್ರೀಂ ಕೋರ್ಟ್‌ ಎಲ್ಲೇ ಇರಲಿ, ಪೆಂಡಿಂಗ್ ಇದ್ದರೂ ಸಹ ಅವುಗಳಿಗೆ ಈ ಕಾಯ್ದೆ ಜಾರಿಯಾಗುತ್ತದೆ. ಯಾವುದಾದರೂ ಪ್ರಕರಣಗಳು ನ್ಯಾಯಸಮ್ಮತವಾಗಿ ವಿಲೇ ಆಗಿಹೋಗಿದ್ದರೆ ಅವು ಇದರ ವ್ಯಾಪ್ತಿಗೆ ಬರುವುದಿಲ್ಲ. ಆದರೆ, ಈ ಕಾನೂನು ಜಾರಿಗೆ ಬಂದ ನಂತರ ಪೆಂಡಿಂಗ್ ಇರುವ ಕೇಸ್‌ಗಳಿಗೂ ಅನ್ವಯವಾಗುತ್ತದೆ ಎಂದು ತಿಳಿಸಿದರು.

2023-24ನೇ ಸಾಲಿನ ಬಜೆಟ್​ಗೆ ಅನುಮೋದನೆ : ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ 2023-24ನೇ ಸಾಲಿನ ಬಜೆಟ್‍ಗೆ ವಿಧಾನಸಭೆಯಲ್ಲಿ ಅನುಮೋದನೆ ಲಭಿಸಿತು. ಕರ್ನಾಟಕ ಧನವಿನಿಯೋಗ (ಸಂಖ್ಯೆ 2) ವಿಧೇಯಕ 2023 ಅಂಗೀಕೃತಗೊಂಡಿತು.‌ 2023-24ನೇ ಹಣಕಾಸು ವರ್ಷಕ್ಕಾಗಿ ಒಟ್ಟು 3.41 ಲಕ್ಷ ಕೋಟಿ ರೂ. ಮೊತ್ತದ ಧನವಿನಿಯೋಗ ವಿಧೇಯಕ ಅಂಗೀಕೃತವಾಗಿದೆ. ಇದರಲ್ಲಿ ಸಂಚಿತ ನಿಧಿಯಿಂದ ಪಡೆದ ವೆಚ್ಚವೂ ಸೇರಿದೆ.‌ ಸುಮಾರು 14,000 ಕೋಟಿ ರೂ. ಸಂಚಿತ ನಿಧಿಯಿಂದ ಪಡೆಯಲಾಗಿದೆ.

ಇದನ್ನೂ ಓದಿ :ಮೋಟಾರು ವಾಹನಗಳ ತೆರಿಗೆ ಪರಿಷ್ಕರಣೆ ತಿದ್ದುಪಡಿ ವಿಧೇಯಕ ಅಂಗೀಕಾರ: ಇನ್ಮುಂದೆ ತೆರಿಗೆ ಹೆಚ್ಚಳ, ಯಾವ ವಾಹನಕ್ಕೆ ಎಷ್ಟು?

ABOUT THE AUTHOR

...view details