ಬೆಂಗಳೂರು: ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಇಂದು ತಮ್ಮ ಸರ್ಕಾರಿ ನಿವಾಸದಲ್ಲಿ ಸಚಿವರಿಗೆ ಉಪಹಾರ ಕೂಟ ಆಯೋಜನೆ ಮಾಡಿದ್ದಾರೆ.
ಸಂಪುಟ ಪುನಾರಚನೆ ಕಸರತ್ತು ನಡೆದಿರುವ ಹಿನ್ನೆಲೆ ಈ ಉಪಹಾರ ಕೂಟ ಆಯೋಜಿಸಲಾಗಿದೆ. ರಾಜ್ಯ ಸಮ್ಮಿಶ್ರ ಸರ್ಕಾರಕ್ಕೆ ಬಿಜೆಪಿ ಆಪರೇಷನ್ನಿಂದ ಎದುರಾಗಿರುವ ಆತಂಕ ನಿವಾರಣೆಗೆ ಮುಂದಾಗಿರುವ ನಾಯಕರು, ಈ ಉಪಹಾರ ಕೂಟದ ನೆಪದಲ್ಲಿ ಪರಿಹಾರ ಹುಡುಕಲು ಮುಂದಾಗಿದ್ದಾರೆ ಎನ್ನಲಾಗಿದೆ.
ಸಚಿವರ ಕೈ ಬಿಡುವ ಪ್ರಸ್ತಾಪ
ಸಿದ್ದರಾಮಯ್ಯ ಸಿಎಂ ಆಗಿದ್ದ ಸಂದರ್ಭದಲ್ಲಿ ಐದು ವರ್ಷ ಪೂರ್ಣಾವಧಿ ಸಚಿವರಾಗಿದ್ದ ಹಾಗೂ ಕಳೆದ ಒಂದು ವರ್ಷದಿಂದ ಮೈತ್ರಿ ಸರ್ಕಾರದಲ್ಲಿ ಸಚಿವರಾಗಿರುವ ಆರ್.ವಿ.ದೇಶಪಾಂಡೆ, ಕೃಷ್ಣ ಬೈರೇಗೌಡ, ಯು.ಟಿ.ಖಾದರ್, ಎಂ.ಬಿ.ಪಾಟೀಲ್, ಕೆ.ಜೆ.ಜಾರ್ಜ್ ಅವರ ಮನವೊಲಿಸಿ ಸಚಿವ ಸ್ಥಾನದಿಂದ ಕೈ ಬಿಟ್ಟು ಈ ಜಾಗಕ್ಕೆ ಅತೃಪ್ತ ಶಾಸಕರಿಗೆ ಅವಕಾಶ ನೀಡುವ ಮೂಲಕ ಆಪರೇಷನ್ ಕಮಲವನ್ನು ತಡೆಯುವ ಯತ್ನ ನಡೆಸಲು ಕೈ ನಾಯಕರು ಮುಂದಾಗಿದ್ದಾರೆ. ಶಾಸಕಾಂಗ ಪಕ್ಷದ ಸಭೆಯಲ್ಲಿಯೂ ಈ ವಿಚಾರ ಪ್ರಸ್ತಾಪವಾಗಿದ್ದು, ಉಪಹಾರ ಕೂಟದಲ್ಲಿಯೂ ಈ ವಿಷಯ ಪ್ರಸ್ತಾಪವಾಗುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.
ಡಿಸಿಎಂ ಪರಮೇಶ್ವರ್ ಮನೆಯಲ್ಲಿ ಸಚಿವರಿಗೆ ಇಂದು ಉಪಹಾರ ಕೂಟ ಶಾಸಕರಿಗೆ ಸಿದ್ದರಾಮಯ್ಯ ಕಿವಿಮಾತು
ಶಾಸಕರ ಅಹವಾಲು ಸ್ವೀಕರಿಸಲು ಜಿಲ್ಲಾವಾರು ಸಿಎಂ ಮೀಟಿಂಗ್ ಮಾಡಲು ಹೇಳಿರುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ. ಯಾರೂ ಬಿಜೆಪಿಗೆ ಹೋಗಬಾರದು. ಅವರು ಎಲ್ಲರನ್ನೂ ಆಹ್ವಾನಿಸುತ್ತಾರೆ. ಯಾರೂ ಅವರ ಆಮಿಷಕ್ಕೆ ಬಲಿಯಾಗಬೇಡಿ ಎಂದು ಮೈತ್ರಿ ನಾಯಕರಿಗೆ ಹೇಳಲಾಗಿದೆ. ಈ ಬಗ್ಗೆ ಮಾತನಾಡಿರುವ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಈ ಸಭೆ ನಮ್ಮ ನೋವನ್ನು ತೋಡಿಕೊಳ್ಳುವ ವೇದಿಕೆಯಲ್ಲ. ಮುಂದಿನ ಬೆಳವಣಿಗೆಗಳ ಬಗ್ಗೆ ಸೂಕ್ತ ಅವಕಾಶ ಕಲ್ಪಿಸಿ ನಾಯಕರಿಂದ ಅಹವಾಲು ಸ್ವೀಕರಿಸಲಾಗುವುದು ಎಂದು ಹೇಳಿದರು.
ಒಟ್ಟಾರೆ ರಾಜ್ಯದಲ್ಲಿ ಸಂಪುಟ ಪುನಾರಚನೆ ಕಸರತ್ತು ಜೋರಾಗಿಯೇ ನಡೆದಿದೆ. ಸಮಸ್ಯೆ ಇರುವ ಶಾಸಕರನ್ನು ಮತ್ತೊಮ್ಮೆ ಕರೆಯುವುದಾಗಿ ಸಿದ್ದರಾಮಯ್ಯ ಹೇಳಿದ್ದು, ಯಾವ ಶಾಸಕರೂ ಮಾಧ್ಯಮಗಳ ಮುಂದೆ ಹೋಗದಂತೆ ತಾಕೀತು ಮಾಡಿದ್ದಾರೆ ಎನ್ನಲಾಗಿದೆ.