ಬೆಂಗಳೂರು: ಬಿಪಿಎಲ್ ಪಡಿತರ ಚೀಟಿ ಕೋರಿ ಅರ್ಜಿ ಸಲ್ಲಿಸಿರುವವರಿಗೆ ಶೀಘ್ರದಲ್ಲಿ ಕಾರ್ಡ್ ವಿತರಿಸಲು ಸರ್ಕಾರ ನಿರ್ಧರಿಸಿದೆ. ವಿಧಾನಸೌಧದಲ್ಲಿ ಸುದ್ದಿಗಾರರಿಗೆ ಬಿಪಿಎಲ್ ಪಡಿತರ ಚೀಟಿ ವಿತರಿಸುವ ಕುರಿತಾಗಿ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಚಿವ ಕೆ ಎಚ್.ಮುನಿಯಪ್ಪ ಅವರು ಮಾಹಿತಿ ನೀಡಿದರು. ಕಾರ್ಡ್‌ಗಳನ್ನು ಆದಷ್ಟು ಬೇಗ ನೀಡುವ ಪ್ರಕ್ರಿಯೆ ನಡೆಸಲಿದ್ದು, ಎಲ್ಲ ಅರ್ಜಿಗಳನ್ನು ಪರಿಶೀಲಿಸಿ ಕಾರ್ಡ್ ವಿತರಿಸಲಾಗುವುದು ಎಂದು ತಿಳಿಸಿದರು.
ಹೊಸದಾಗಿ ಬಿಪಿಎಲ್ ಕಾರ್ಡ್ ಕೋರಿ 3 ಲಕ್ಷ ಅರ್ಜಿಗಳು ಬಂದಿವೆ. ಅದರಲ್ಲಿ ಕೆಲವರು ಪಡಿತರ ಬೇಡ ಆರೋಗ್ಯ ಯೋಜನೆಗಳ ಲಾಭಕ್ಕಾಗಿ ಪಡಿತರ ಚೀಟಿ ನೀಡಿ ಎಂದು ಕೋರಿದ್ದಾರೆ. ಹಾಗಾಗಿ, ಇಂತಹವರಿಗೆ ಆದಷ್ಟು ಬೇಗ ಕಾರ್ಡ್ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಆರೋಗ್ಯ ಯೋಜನೆಗಾಗಿ ಕಾರ್ಡ್ ಬಯಸುವವರಿಗೆ ಬಿಪಿಎಲ್ಎಬಿ ಎಂದು ನಮೂದಿಸಿ ಕಾರ್ಡ್ ನೀಡುವ ಚಿಂತನೆ ಇದೆ. ಇಂತಹವರಿಗೆ ಪಡಿತರ ಯೋಜನೆ ಲಾಭ ಇರುವುದಿಲ್ಲ. ಆದರೆ, ಆರೋಗ್ಯ ಯೋಜನೆಗೆ ಸಂಬಂಧಿಸಿದಂತೆ ಈ ಬಿಪಿಎಲ್ ಕಾರ್ಡ್ ಅನ್ನು ಬಳಸಿಕೊಳ್ಳಬಹುದು. ಆರೋಗ್ಯ ಯೋಜನೆಗಾಗಿಯೇ ಬಿಪಿಎಲ್ ಕಾರ್ಡ್ ವಿತರಿಸುವ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಆದಷ್ಟು ಬೇಗ ಕಾರ್ಡ್ ವಿತರಿಸಲು ಕ್ರಮ ಕೈಗೊಳ್ಳುವುದಾಗಿಯೂ ಅವರು ತಿಳಿಸಿದರು.
ರಾಜ್ಯದಲ್ಲಿ ಸದ್ಯ 1.28 ಕೋಟಿ ಬಿಪಿಎಲ್ ಪಡಿತರದಾರರಿದ್ದು, ಅವರಲ್ಲಿ 97 ಲಕ್ಷ ಪಡಿತರದಾರರಿಗೆ ಅನ್ನಭಾಗ್ಯ ಯೋಜನೆಯಡಿ 5 ಕೆಜಿ ಅಕ್ಕಿಯ ಹಣವನ್ನು ಅವರ ಖಾತೆಗೆ ವರ್ಗಾಯಿಸಲಾಗಿದೆ. ಉಳಿದ 30 ಲಕ್ಷ ಬಿಪಿಎಲ್ ಪಡಿತರದಾರರ ದತ್ತಾಂಶ ಮಾಹಿತಿಗಳು ಸರಿಯಿಲ್ಲ. ಅವೆಲ್ಲವನ್ನೂ ಸರಿಪಡಿಸಿ ಇವರಿಗೂ ಸಹ ಅನ್ನಭಾಗ್ಯ ಯೋಜನೆಯಡಿ ನಗದು ವರ್ಗಾವಣೆ ಯೋಜನೆಯ ಲಾಭ ಸಿಗುವಂತೆ ಕ್ರಮ ವಹಿಸಲಾಗುವುದು ಎಂದು ಸ್ಪಷ್ಟಪಡಿಸಿದರು.