ಬೆಂಗಳೂರು:ವಿಶ್ವಾಸಮತ ಸಾಬೀತುಪಡಿಸುವಲ್ಲಿ ಯಶಸ್ವಿಯಾದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಸ್ಪೀಕರ್ ಸ್ಥಾನದ ಚುನಾವಣೆಗೆ ಕೆ.ಜಿ.ಬೋಪಯ್ಯ ಅವರನ್ನು ನಿಲ್ಲಿಸುತ್ತಿದೆ.
ಸ್ಪೀಕರ್ ಸ್ಥಾನಕ್ಕೆ ಕೆ.ಜಿ.ಬೋಪಯ್ಯ ಅವರನ್ನು ಆಡಳಿತ ಪಕ್ಷದ ಅಭ್ಯರ್ಥಿಯಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಯ್ಕೆ ಮಾಡಿದ್ದಾರೆ. ಸಿಎಂ ಸೂಚನೆ ಮೇರೆಗೆ ನಾಳೆ ಬೆಳಗ್ಗೆ 10.30ಕ್ಕೆ ಬೋಪಯ್ಯ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ.
ಬುಧವಾರ ಬೆಳಿಗ್ಗೆ 11ಕ್ಕೆ ಸ್ಪೀಕರ್ ಆಯ್ಕೆಗೆ ಚುನಾವಣೆ ನಿಗದಿಯಾಗಿದ್ದು, ನಾಳೆ ಬೆಳಿಗ್ಗೆ 12 ಗಂಟೆಯೊಳಗೆ ನಾಮಪತ್ರ ಸಲ್ಲಿಸಬೇಕು. ಅದರಂತೆ ಬಿಜೆಪಿಯಿಂದ ಬೋಪಯ್ಯ ಕಣಕ್ಕಿಳಿಯುತ್ತಿದ್ದಾರೆ.
ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಗದೀಶ್ ಶೆಟ್ಟರ್ ನಂತರ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ್ದ ಬೋಪಯ್ಯ, ಶಾಸಕರ ಅನರ್ಹದಂತಹ ಸನ್ನಿವೇಶವನ್ನು ಎದುರಿಸಿದ್ದರು. ಜೊತೆಗೆ 2018ರಲ್ಲಿ ಮೂರು ದಿನದ ಮುಖ್ಯಮಂತ್ರಿ ಆಗಿ ಯಡಿಯೂರಪ್ಪ ಕಾರ್ಯನಿರ್ವಹಿಸಿದ ವೇಳೆಯಲ್ಲಿಯೂ ಹಂಗಾಮಿ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ್ದರು. ಅವರ ಅನುಭವದ ಆಧಾರದಲ್ಲಿ ಮತ್ತೊಮ್ಮೆ ಸ್ಪೀಕರ್ ಹುದ್ದೆ ನೀಡಲು ಸಿಎಂ ಯಡಿಯೂರಪ್ಪ ನಿರ್ಧರಿಸಿದ್ದಾರೆ.
ಸದ್ಯ ಶಾಸಕರ ಅನರ್ಹ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಲಿದ್ದು ಮತ್ತು ಸ್ಪೀಕರ್ ಅಂಗಳಕ್ಕೆ ಬಂದರೂ ಬರಬಹುದು. ಅಂತಹ ಸನ್ನಿವೇಶ ಎದುರಾದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಬೋಪಯ್ಯ ಸಮರ್ಥರಿದ್ದಾರೆ ಎನ್ನುವ ಕಾರಣವೂ ಇದರ ಹಿಂದಿದೆ ಎನ್ನಲಾಗಿದೆ.