ಬೆಂಗಳೂರು :ಸಂಚಾರ ನಿಯಮ ಉಲ್ಲಂಘನೆಗೆ ದಂಡ ಪಾವತಿಸುವವರಿಗೆ ಶೇ 50ರಷ್ಟು ರಿಯಾಯಿತಿ ಇರುವುದರಿಂದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ತನ್ನ ಎಲ್ಲಾ ಪ್ರಕರಣಗಳ ದಂಡ ಪಾವತಿಸಿದೆ. ಬಾಕಿ ಇರುವ ಬರೋಬ್ಬರಿ 66 ಲಕ್ಷ ಅಂದರೆ ರಿಯಾಯಿತಿ ದರದಲ್ಲಿ 33 ಲಕ್ಷ ರೂ ದಂಡದ ಮೊತ್ತವನ್ನ ಬಿಎಂಟಿಸಿ ಪಾವತಿಸಿದೆ.
ನಗರದಲ್ಲಿನ ಸಂಚಾರ ಉಲ್ಲಂಘನೆ ಪ್ರಕರಣಗಳಲ್ಲಿ ಸಿಗ್ನಲ್ ಜಂಪ್, ನೋ ಪಾರ್ಕಿಂಗ್ ಸೇರಿದಂತೆ ಅನೇಕ ಪ್ರಕರಣಗಳು ಬಿಎಂಟಿಸಿ ಬಸ್‌ಗಳ ಮೇಲಿದ್ದವು. ಸಂಚಾರಿ ದಂಡ ಪಾವತಿಗೆ ಅರ್ಧದಷ್ಟು ರಿಯಾಯಿತಿ ನೀಡಲಾಗಿರುವುದರಿಂದ ಬಿಎಂಟಿಸಿ ತನ್ನೆಲ್ಲಾ ಪ್ರಕರಣಗಳ ದಂಡ ಪಾವತಿಸಿದೆ. ಅನೇಕ ಪ್ರಕರಣಗಳನ್ನ ತಪ್ಪಾಗಿ ವಿಧಿಸಲಾಗಿದ್ದು, ಅಂತಿಮವಾಗಿ ಸರಿ ಸುಮಾರು 16 ಸಾವಿರ ಪ್ರಕರಣಗಳ ದಂಡವನ್ನ ಪಾವತಿಸಲಾಗಿದೆ ಎಂದು ಬಿಎಂಟಿಸಿ ಮೂಲಗಳು ತಿಳಿಸಿವೆ. ಸಂಚಾರ ನಿಯಮ ಉಲ್ಲಂಘಿಸದಂತೆ ಮತ್ತು ಸುರಕ್ಷತಾ ಕ್ರಮಗಳನ್ನ ಪಾಲಿಸುವಂತೆ ಚಾಲಕರು ಹಾಗೂ ನಿರ್ವಾಹಕರಿಗೆ ಎಚ್ಚರಿಸಲಾಗಿದೆ ಎಂದು ಬಿಎಂಟಿಸಿ ಮೂಲಗಳಿಂದ ತಿಳಿದು ಬಂದಿದೆ.
ಬಿಎಂಟಿಸಿ ಬಸ್‌ನಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ :ಇನ್ನೊಂದೆಡೆವಿಶ್ವ ಮಹಿಳಾ ದಿನಾಚರಣೆ ಮಾರ್ಚ್ 8 ರಂದು ಆಚರಿಸಲಾಗುತ್ತಿದೆ. ಈ ನಿಮಿತ್ತ ಬಿಎಂಟಿಸಿ ಬಸ್‌ಗಳಲ್ಲಿ ಮಹಿಳೆಯರು ಒಂದು ದಿನದ ಮಟ್ಟಿಗೆ ಉಚಿತವಾಗಿ ಪ್ರಯಾಣಿಸಲು ಬಿಎಂಟಿಸಿ ಸಾರಿಗೆ ಸಂಸ್ಥೆ ಅವಕಾಶ ಕಲ್ಪಿಸಲಿದೆ. ಉಚಿತ ಪ್ರಯಾಣದ ಕುರಿತು ಈಗಾಗಲೇ ರಾಜ್ಯ ಸರ್ಕಾರಕ್ಕೆ ಬಿಎಂಟಿಸಿ ಸಾರಿಗೆ ಸಂಸ್ಥೆ ಪ್ರಸ್ತಾವನೆ ಸಲ್ಲಿಸಿದ್ದು, ಅಧಿಕೃತ ಆದೇಶ ಹೊರ ಬೀಳಬೇಕಿದೆ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸತ್ಯವತಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ 40 ಲಕ್ಷಕ್ಕೂ ಹೆಚ್ಚು ಮಹಿಳೆಯರಿದ್ದು, ಅದರಲ್ಲಿ ನಿತ್ಯ 10 ಲಕ್ಷಕ್ಕೂ ಹೆಚ್ಚು ಮಂದಿ ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣ ಮಾಡುವವರಿದ್ದಾರೆ ಎಂದು ಅಂದಾಜಿಸಲಾಗಿದೆ. ಮಾರ್ಚ್ 8 ರಂದು ಮಹಿಳಾ ದಿನವಾದ್ದರಿಂದ ಉಚಿತ ಬಸ್ ಸಂಚಾರಕ್ಕೆ ಅನುವು ಮಾಡಿಕೊಟ್ಟರೆ ಮುಂದಿನ ದಿನಗಳಲ್ಲಿ ಬಿಎಂಟಿಸಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.