ಬೆಂಗಳೂರು: ನಗರದ ಹೆಬ್ಬಾಳ ಸಮೀಪದ ಆ್ಯಸ್ಟರ್ ಸಿಎಂಐ ಆಸ್ಪತ್ರೆಯಲ್ಲಿ ರಕ್ತ ಕಾಂಡಕೋಶ ದಾನಿಗಳ ನೋಂದಣಿ ಆಂದೋಲನ ಹಮ್ಮಿಕೊಳ್ಳಲಾಗಿತ್ತು.
ಕ್ಯಾನ್ಸರ್ ರೋಗಿಗಳಿಗೆ ನೆರವಾಗಲು ರಕ್ತ ಕಾಂಡಕೋಶ ದಾನಕ್ಕೆ ಮುಂದಾಗಿ: ವೈದ್ಯರ ಕರೆ
ಬೆಂಗಳೂರಿನ ಆ್ಯಸ್ಟರ್ ಸಿಎಂಐ ಆಸ್ಪತ್ರೆಯಲ್ಲಿ ರಕ್ತ ಕಾಂಡಕೋಶ ದಾನಿಗಳ ನೋಂದಣಿ ಆಂದೋಲನ ಹಮ್ಮಿಕೊಳ್ಳಲಾಗಿತ್ತು.
ಭಾರತದಲ್ಲಿ ರಕ್ತ ಕ್ಯಾನ್ಸರ್ ರೋಗಿಗಳಿಗೆ ರಕ್ತ ಕಾಂಡಕೋಶಗಳ ಕಸಿ ಅಗತ್ಯತೆ ಹೆಚ್ಚಾಗಿದ್ದು, ಹೆಚ್ಚಿನ ಯುವಕರು ರಕ್ತಕಾಂಡ ಕೋಶ ದಾನಕ್ಕೆ ಮುಂದೆ ಬರಬೇಕು. ಪಾಶ್ಚಾತ್ಯ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ರಕ್ತಕಾಂಡ ಕೋಶ ದಾನಿಗಳ ಸಂಖ್ಯೆ ಕಡಿಮೆ ಇರುವುದರಿಂದ ಹೊಂದಿಕೆಯಾಗಬಲ್ಲ ದಾನಿಗಳನ್ನು ಪಡೆಯುವ ಅವಕಾಶ ಶೇ.10ರಿಂದ 15% ಮಾತ್ರ ಇದೆ. ಈ ನಿಟ್ಟಿನಲ್ಲಿ ಯುವಕರು ರಕ್ತಕಾಂಡ ಕೋಶ ದಾನ ಪ್ರಕ್ರಿಯೆಲ್ಲಿ ತಮ್ಮನ್ನು ಹೆಚ್ಚು ತೊಡಗಿಸಿ ಕೊಳ್ಳಬೇಕೆಂದು ಅರಿವು ಮೂಡಿಸಲಾಯಿತು.
ಆ್ಯಸ್ಟರ್ ಆಸ್ಪತ್ರೆಯ ಕ್ಯಾನ್ಸರ್ ತಜ್ಞ ಡಾ.ಆದಿತ್ಯ ಮಾತನಾಡಿ, ಹೊಸ ತಂತ್ರಜ್ಞಾನ ಬಳಸಿ ರಕ್ತ ಕ್ಯಾನ್ಸರ್ ಗೆ ರಕ್ತ ಕಾಂಡ ಕೋಶ ಬಳಸಿ ಚಿಕಿತ್ಸೆ ನೀಡಿ ಕ್ಯಾನ್ಸರ್ ಕಾಂಡಕೋಶ ನಾಶ ಮಾಡುವ ಮೂಲಕ ರೋಗ ಗುಣಪಡಿಸಬಹುದು. ರಕ್ತದಾನದಂತೆ ಇದೂ ಸಹ ಒಂದು ಪುಣ್ಯ ಕಾರ್ಯವಾಗಿದ್ದು, ಕಾಂಡಕೋಶ ದಾನದಿಂದ ಕಾಂಡಕೋಶದ ಕೊರತೆ ಇರುವ ಮತ್ತು ಕೆಟ್ಟ ರಕ್ತಕಾಂಡ ಕೋಶಗಳನ್ನು ಹೊಂದಿರುವ ಸಹಸ್ರಾರು ರೋಗಿಗಳ ಜೀವ ಉಳಿಸಬಹುದು ಎಂದರು. ಕಾರ್ಯಕ್ರಮದಲ್ಲಿ ಅರ್ಜುನ ಪ್ರಶಸ್ತಿ ವಿಜೇತ ಖ್ಯಾತ ಅಥ್ಲೆಟ್ ಕ್ರೀಡಾಪಟು ರೀತ್ ಅಬ್ರಾಹಂ, ಖ್ಯಾತ ವೈದ್ಯ ಡಾ.ಸ್ಟಾಲಿನ್, ಡಾ.ಆದಿತ್ಯ ಮುರಳಿ ಸೇರಿದಂತೆ ರಕ್ತಕಾಂಡ ಕೋಶ ದಾನಿಗಳು ಹಾಗೂ ಇನ್ನಿತರ ಗಣ್ಯರಿದ್ದರು.