ಅಶಾಂತಿ, ಹಿಂಸೆಯನ್ನು ಮುಂದುವರಿಸುವುದು ಬಿಜೆಪಿಯ ಧೋರಣೆ: ಸುರ್ಜೇವಾಲಾ - ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ ಸಿಂಗ್ ಸುರ್ಜೇವಾಲಾ
ಸಿದ್ದರಾಮಯ್ಯರ ವಿಚಾರವಾಗಿ ಅಶ್ವತ್ಥ ನಾರಾಯಣ್ ಹೇಳಿಕೆಗೆ ಕಾಂಗ್ರೆಸ್ ಆಕ್ರೋಶ - ಸಿಎಂ ಬಸವರಾಜ್ ಬೊಮ್ಮಾಯಿಗೆ ನೈತಿಕತೆ ಇದ್ದರೆ ಅಶ್ವತ್ಥ ನಾರಾಯಣ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿ, ಕಾನೂನು ಕ್ರಮ ಜರುಗಿಸಲು ಆಗ್ರಹ.
ಕಾಂಗ್ರೆಸ್ ಉಸ್ತುವಾರಿ ರಣದೀಪ ಸಿಂಗ್ ಸುರ್ಜೇವಾಲಾ
By
Published : Feb 17, 2023, 6:23 AM IST
ಬೆಂಗಳೂರು: ಪ್ರತಿ ಪಕ್ಷ ನಾಯಕ ಸಿದ್ದರಾಮಯ್ಯ ಅವರ ವಿಚಾರವಾಗಿ ಸಚಿವ ಅಶ್ವತ್ಥ ನಾರಾಯಣ್ ಅವರು ನೀಡಿದ ಹೇಳಿಕೆಗೆ ಕಾಂಗ್ರೆಸ್ನಲ್ಲಿ ದೊಡ್ಡ ಮಟ್ಟದ ಆಕ್ರೋಶ ಮೂಡಿಸಿದ್ದು, ಪ್ರತಿಯೊಬ್ಬ ನಾಯಕರೂ ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸುತ್ತಿದ್ದಾರೆ.
ನಗರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಮಾತನಾಡಿ, ಸಚಿವ ಡಾ ಅಶ್ವತ್ಥ ನಾರಾಯಣ್ ಟಿಪ್ಪು ಸುಲ್ತಾನ್ ವಿಚಾರ ಪ್ರಸ್ತಾಪ ಮಾಡಿರುವುದಕ್ಕೆ ಪ್ರತಿಕ್ರಿಯೆ ನೀಡಿ, ಬಿಜೆಪಿಯವರು ಮಹಾತ್ಮ ಗಾಂಧಿಯನ್ನೇ ಕೊಂದವರು. ಹಿಂಸೆ ಅನ್ನೋದು ಇಂದಿರಾಗಾಂಧಿ, ರಾಜೀವ್ ಗಾಂಧಿ ಅವರನ್ನು ಬಿಟ್ಟಿಲ್ಲ. ಬಿಜೆಪಿ ಅಶಾಂತಿ ಹಾಗೂ ಹಿಂಸೆಯನ್ನು ಮುಂದುವರಿಸುವ ಧೋರಣೆ ಹೊಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಟ್ವೀಟ್
ಅಶ್ವತ್ಥ ನಾರಾಯಣ್, ನಳಿನ್ ಕುಮಾರ್ ಕಟೀಲ ಅವರಿಂದ ಅವರ ಕಂಪನಿಗೆ ಆತಂಕ ಇದೆ. ರಾಜ್ಯದಲ್ಲಿ ಬಿಜೆಪಿ ಎದುರಿಸುತ್ತಿರುವ ಆತಂಕ ಈ ರೀತಿ ಅವರ ಬಾಯಲ್ಲಿ ಹೊರ ಬಂದಿದೆ. ನಾಯಕರ ಮಾತುಗಳಲ್ಲಿ ಆತಂಕ ಮೂಡಿಬರುತ್ತಿದೆ. ಮುಂದಿನ 50 ರಿಂದ 60 ದಿನಗಳಲ್ಲಿ ಎದುರಾಗುವ ರಾಜ್ಯದ ವಿಧಾನಸಭೆ ಚುನಾವಣೆಯಲ್ಲಿ ಸೋಲುವ ಆತಂಕ ಇದೆ. ಈ ಹಿನ್ನೆಲೆಯಲ್ಲಿ ಇಂತಹ ಪದಗಳನ್ನು ಬಳಸಿ ಮಾತನಾಡುತ್ತಿದ್ದಾರೆ. ಇದು ಅವರ ಮಾನಸಿಕ ಸ್ಥಿತಿಯನ್ನು ತೋರಿಸುತ್ತದೆ. ರಾಜ್ಯದ ಜನರ ಗಮನವನ್ನು ಬೇರೆ ಸೆಳೆಯುವ ಪ್ರಯತ್ನವಾಗಿದೆ ಎಂದು ಆರೋಪಿಸಿದರು.
ರಾಜ್ಯ ಸರ್ಕಾರ ಯಾವುದೇ ರೀತಿಯಲ್ಲೂ ಜನಪರ ಆಡಳಿತ ನೀಡಿಲ್ಲ. ಕಾಂಗ್ರೆಸ್ ಪಕ್ಷ 200 ಯೂನಿಟ್ ಫ್ರೀ ವಿದ್ಯುತ್ ನೀಡಿಕೆ. ಮಹಿಳೆಯರಿಗೆ ಎರಡು ಸಾವಿರ ರೂಪಾಯಿ ಗೌರವ ಧನ ನೀಡುವ ಪ್ರಸ್ತಾಪವನ್ನು ಮಾಡಿರುವುದು ಸಹ ಬಿಜೆಪಿಯವರಿಗೆ ಆತಂಕ ತರಿಸಿದೆ. ಅವರ ಅಜೆಂಡಾವನ್ನೂ ಬದಲಿಸುವ ಪ್ರಯತ್ನವನ್ನು ಸಹ ಮಾಧ್ಯಮದವರು ಮಾಡಬೇಡಿ. ಅವರ ಪಾಡಿಗೆ ಮಾತನಾಡಲು ಬಿಡಿ. ನಾವು ಅಶ್ವಥ್ ನಾರಾಯಣ್ ನಳೀನ್ ಕುಮಾರ್ ಕಟೀಲ್, ಬಸವರಾಜ್ ಬೊಮ್ಮಾಯಿ ಹಾಗೂ ಇತರ ಬಿಜೆಪಿ ನಾಯಕರನ್ನು ಪ್ರೀತಿಸುತ್ತೇವೆ ಮತ್ತು ಗೌರವಿಸುತ್ತೇವೆ. ಅವರು ಇದೇ ರೀತಿ ಮಾತನಾಡಿಕೊಂಡು ಹೋಗಲಿ ಬಿಡಿ ಎಂದರು.
ಅಶ್ವತ್ಥ ನಾರಾಯಣ್ ಹೇಳಿಕೆಗೆ ಕಾಂಗ್ರೆಸ್ ಕೆಂಡಾಮಂಡಲ:ಸಿದ್ದರಾಮಯ್ಯ ವಿಚಾರವಾಗಿ ಅಶ್ವತ್ಥ ನಾರಾಯಣ್ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಕಾಂಗ್ರೆಸ್ ಈ ಸಂಬಂಧ ಟ್ವೀಟ್ ಮಾಡಿದ್ದು, ಸಿದ್ದರಾಮಯ್ಯ ಅವರನ್ನು ಕೊಲೆ ಮಾಡುವಂತೆ ಕರೆ ನೀಡಿದ ಡಾ ಅಶ್ವತ್ಥ ನಾರಾಯಣ್ ಅವರು ಬಿಜೆಪಿಯ ಕೊಲೆಗಡುಕ ಮನಸ್ಥಿತಿಯನ್ನು ಅನಾವರಣಗೊಳಿಸಿದ್ದಾರೆ. ಬಹುಶಃ ರಾಜ್ಯ ಬಿಜೆಪಿ ಹೇಳುತ್ತಿದ್ದ ಯುಪಿ ಮಾಡೆಲ್ ಇದೇ ಇರಬಹುದು. ಬಸವರಾಜ್ ಬೊಮ್ಮಾಯಿ ಅವರಿಗೆ ಕನಿಷ್ಠ ನೈತಿಕತೆ ಇದ್ದರೆ ಅಶ್ವಥ್ ನಾರಾಯಣರನ್ನು ವಜಾಗೊಳಿಸಿ, ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದೆ.
ಅಶ್ವತ್ಥ ನಾರಾಯಣ್ ಬಂಧನಕ್ಕೆ ಆಗ್ರಹ:ಇಷ್ಟು ದಿನ ವಿಪಕ್ಷಗಳ ನಾಯಕರಿಗೆ ಐಟಿ, ಇಡಿಗಳ ದಾಳಿ ಮೂಲಕ ಮಣಿಸಲು ಯತ್ನಿಸುತ್ತಿತ್ತು. ಈಗ ಸೋಲಿನ ಹತಾಶೆಯಲ್ಲಿ ಈಗ ಕೊಲೆ ಮಾಡುವ ಹಂತಕ್ಕೆ ಇಳಿದಿದೆ. ಇತಿಹಾಸದುದ್ದಕ್ಕೂ ಕೊಲೆ ರಾಜಕೀಯವನ್ನೇ ದಾಳ ಮಾಡಿಕೊಂಡು ಬಂದಿರುವ ಬಿಜೆಪಿ ಈಗಲೂ ಅದನ್ನೇ ಮುಂದುವರೆಸಿದೆ. ನಿಜಕ್ಕೂ ಕಾನೂನು ಪಾಲನೆಯಾಗುತ್ತಿದ್ದರೆ ಸಚಿವ ಅಶ್ವಥ್ ನಾರಾಯಣ್ ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದೆ.