ಬೆಂಗಳೂರು:ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನ ಕಡೆಗಣಿಸಿ ಪಕ್ಷ ಸಂಘಟನೆಗೆ ಮುಂದಾದರೆ, ಉತ್ತರ ಕರ್ನಾಟಕದ 13 ಜಿಲ್ಲೆಗಳ ಸಾವಿರಾರು ಸಂಖ್ಯೆಯ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಸಾಮೂಹಿಕ ರಾಜೀನಾಮೆ ನೀಡಿ ಪಕ್ಷಕ್ಕೆ ಸರಿಯಾದ ಪಾಠ ಕಲಿಸಬೇಕಾಗುತ್ತದೆ ಎಂದು ನೂತನ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ಗೆ ಬಿಜೆಪಿ ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ಭೀಮಾಶಂಕರ ಪಾಟೀಲ್ ಪತ್ರ ಬರೆದಿದ್ದಾರೆ.
ಬಿಎಸ್ವೈ ಕಡೆಗಣಿಸಿದ್ರೆ ಸಾಮೂಹಿಕ ರಾಜೀನಾಮೆ: ರಾಜ್ಯಾಧ್ಯಕ್ಷರಿಗೆ ಪತ್ರ ಬರೆದ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಭಾರತೀಯ ಜನತಾ ಪಕ್ಷವನ್ನು ಕರ್ನಾಟಕದಲ್ಲಿ ತಳ ಮಟ್ಟದಿಂದ ಕಟ್ಟಿ ಪಕ್ಷವನ್ನು ಅಧಿಕಾರಕ್ಕೆ ತಂದ ಜನ ನಾಯಕ ಯಡಿಯೂರಪ್ಪ ಅವರನ್ನು ಪಕ್ಷ ಸಂಘಟನೆ, ಆಡಳಿತಾತ್ಮಕ ವಿಚಾರ ಸೇರಿದಂತೆ ಇನ್ನಿತರ ವಿಷಯಗಳಲ್ಲಿ ನೀವು ಸೇರಿದಂತೆ ಅನೇಕರು ಕಡೆಗಣಿಸುತ್ತಿರುವ ವಿಚಾರವನ್ನು ಬಲವಾಗಿ ಖಂಡಿಸುತ್ತೇನೆ. ವೀರಶೈವ ಲಿಂಗಾಯತ ಸಮಾಜದ ಪ್ರಶ್ನಾತೀತ ಜನ ನಾಯಕರಾಗಿ, ರೈತ, ಕಾರ್ಮಿಕ, ಬಡವ-ಬಲ್ಲಿದರಾದಿಯಾಗಿ ಸರ್ವ ಜನಾಂಗದ, ಸರ್ವ ಸಮುದಾಯದ ಜನರು ಯಡಿಯೂರಪ್ಪ ಅವರನ್ನು ಅಭಿಮಾನದಿಂದ ನೋಡುತ್ತಾರೆ. ಅವರ ಜನಪರ ಸಾಮಾಜಿಕ ಕಳಕಳಿ ಮೆಚ್ಚಿ ಬಿಎಸ್ವೈ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಪಕ್ಷಕ್ಕೆ ಮತ ಹಾಕಿ, ರಾಜ್ಯದಲ್ಲಿ ಬಿಜೆಪಿ ಆಡಳಿತ ಚುಕ್ಕಾಣಿ ಹಿಡಿಯುವಂತೆ ಮಾಡಿದ್ದಾರೆ. ಮನೆ,ಮಠ ಬಿಟ್ಟು ತಮ್ಮ ಆರೋಗ್ಯವನ್ನು ಲೆಕ್ಕಿಸದೆ, ಇಳಿ ವಯಸ್ಸಿನಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡು ರಾಜ್ಯ ಸುತ್ತಿ ಪಕ್ಷ ಕಟ್ಟಿದವರು. ನಮ್ಮ ಹೆಮ್ಮೆಯ ನಾಯಕ ಯಡಿಯೂರಪ್ಪನವರು ಜಾತಿ ಧರ್ಮದ ಎಲ್ಲೆ ಮೀರಿ, ರಾಜ್ಯದ ಜನರ ನಾಡಿ ಮಿಡಿತವಾಗಿ ಇಂದು ಅವರ ಹೃದಯದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಇಂತಹ ನಾಯಕರ ಕಡೆಗಣನೆ ಸಲ್ಲದು ಎಂದು ಭೀಮಾಶಂಕರ್ ಪತ್ರದಲ್ಲಿ ಉಲ್ಲೇಖಿದ್ದಾರೆ.
ಪಕ್ಷದ ಸಂಘಟನೆ ಹಳಿ ತಪ್ಪಿದೆ. ಯೋಗ್ಯತೆ ಇಲ್ಲದವರು ಪಕ್ಷದ ಹೆಸರನ್ನು ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿರುವಾಗ ಯಾವ ಮುಲಾಜಿಲ್ಲದೆ, ಅಂತವರನ್ನು ಪಕ್ಷದ ಸಂಘಟನೆ ಚಟುವಟಿಕೆಗಳಿಂದ ದೂರ ಇಟ್ಟು ಪಕ್ಷವನ್ನು ಸಮರ್ಥವಾಗಿ ಕಟ್ಟಿದವರು ಯಡಿಯೂರಪ್ಪನವರು. ಗ್ರಾಮ ಪಂಚಾಯತ್ ಚುನಾವಣೆ ಗೆದ್ದು ಬರುವ ಸಾಮರ್ಥ್ಯ ಇಲ್ಲದವರೆಲ್ಲ, ಅಂದು ಯಡಿಯೂರಪ್ಪನವರ ಸಂಘಟನೆ ನಿರ್ಣಯಗಳನ್ನು ಟೀಕಿಸಿದ್ದರು. ಅಂಥವರ ಯಾವ ಟೀಕೆಗಳಿಗೆ ಗಮನ ಕೊಡದೆ, ರಾಜ್ಯದ 25 ಲೋಕಸಭಾ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿರುವುದರ ಹಿಂದೆ ಯಡಿಯೂರಪ್ಪ ಎನ್ನುವ ಹೆಸರಿನ ಪಾತ್ರ ತುಂಬಾ ದೊಡ್ಡದಿದೆ ಎನ್ನುವುದನ್ನು ಯಾರೂ ಮರೆಯಬಾರದು. ನಿಮ್ಮ ಗೆಲುವಿನ ಹಿಂದಿನ ಶಕ್ತಿಯೂ ಯಡಿಯೂರಪ್ಪನವರು ಎನ್ನುವುದು ನೀವೂ ಸಹ ಮರೆಯಬಾರದು ಕಟೀಲ್ಗೆ ರಾಜ್ಯ ಯುವ ಮೋರ್ಚಾ ಉಪಾಧ್ಯಕ್ಷ ಎಚ್ಚರಿಕೆ ನೀಡಿದ್ದಾರೆ.
ಇತ್ತೀಚೆಗೆ ಅವರು ಮುಖ್ಯಮಂತ್ರಿ ಹುದ್ದೆಗೆ ಬಂದಾಗಿನಿಂದ ಮತ್ತೆ ಅವರ ವಿರುದ್ಧ ಷಡ್ಯಂತ್ರ, ಪಿತೂರಿಗಳು ಎಗ್ಗಿಲ್ಲದೆ ನಡೆಯುತ್ತಿವೆ. ಪಕ್ಷ ಅಧಿಕಾರಕ್ಕೆ ತರಲು ಯಡಿಯೂರಪ್ಪ ಬೇಕು. ಅಧಿಕಾರ ಸಿಕ್ಕ ನಂತರ ಯಡಿಯೂರಪ್ಪ ಬೇಡ ಎನ್ನುವ ಮನಸ್ಥಿತಿಯಲ್ಲಿ ನಮ್ಮ ಪಕ್ಷದ ಕೆಲ ಬುದ್ಧಿವಂತಿಕೆಯ ಮುಖವಾಡ ಧರಿಸಿರುವವರು ಮಾಡುತ್ತಿದ್ದಾರೆ. ಇಂತಹ ಬುದ್ಧಿವಂತ ನಾಯಕರು ಇಂತಹ ಕನಿಷ್ಠ ಯೋಚನೆ, ಪಕ್ಷಕ್ಕೆ ನಿಜಕ್ಕೂ ಅಪಾಯ. ಇದರಿಂದ ನೀವು ಸಹ ಹೊರಬರಬೇಕು ಎಂದು ಪತ್ರದ ಮೂಲಕ ಭೀಮಾಶಂಕರ್ ಮನವಿ ಮಾಡಿದ್ದಾರೆ.
ಯಡಿಯೂರಪ್ಪ ಅವರಿಗೆ ಇಲ್ಲಿಯವರೆಗೆ ಕೊಟ್ಟ ಕಾಟ ಸಾಕು. ಮುಂದೆ ಪಕ್ಷ ಅಧಿಕಾರಕ್ಕೆ ಬರಬೇಕು ಎನ್ನುವುದಾದರೆ, ನೀವೂ ಸೇರಿದಂತೆ ಇನ್ನೂ ಅನೇಕ ನಾಯಕರು ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಇಲ್ಲವಾದರೆ ಉತ್ತರ ಕರ್ನಾಟಕ ಭಾಗ ಸೇರಿದಂತೆ ಹಲವು ಕಡೆ ಪಕ್ಷ ಉಳಿಸಿಕೊಳ್ಳುವುದು ಮುಂದಿನ ದಿನಗಳಲ್ಲಿ ನಿಮಗೆ ಕಷ್ಟವಾಗಬಹುದು ಎಂದು ತಿಳಿಸಲು ಇಚ್ಛಿಸುವೆ ಎಂದು ಪತ್ರದಲ್ಲಿ ಯುವ ಮೋರ್ಚಾ ಉಪಾಧ್ಯಕ್ಷ ಭೀಮಾಶಂಕರ್ ಅವರು ಉಲ್ಲೇಖಿಸಿದ್ದಾರೆ.