ಕರ್ನಾಟಕ

karnataka

By

Published : Dec 31, 2022, 10:28 PM IST

ETV Bharat / state

ಕರ್ನಾಟಕ ಚುನಾವಣೆಯತ್ತ ಮೋದಿ - ಶಾ ಚಿತ್ತ.. ಕಾಂಗ್ರೆಸ್, ಜೆಡಿಎಸ್ ಮತ ಬ್ಯಾಂಕ್​ಗಳೇ ಟಾರ್ಗೆಟ್

ವಿಧಾನಸಭೆ ಚುನಾವಣೆಗೆ ಬಿಜೆಪಿ ಸಿದ್ಧತೆ- ರಾಜ್ಯಕ್ಕೆ ಅಮಿತ್​ ಶಾ ಭೇಟಿ- ಪಕ್ಷದ ಕಾರ್ಯಕರ್ತರು, ಮುಖಂಡರುಗಳಲ್ಲಿ ಚುನಾವಣಾ ಹುಮ್ಮಸ್ಸು ತುಂಬುವ ಕಾರ್ಯ

Etv Bharatbjp-targeting-congress-and-jds-vote-bank-for-next-election
ಕಾಂಗ್ರೆಸ್, ಜೆಡಿಎಸ್ ಮತ ಬ್ಯಾಂಕ್​ಗಳೇ ಟಾರ್ಗೆಟ್

ಬೆಂಗಳೂರು:ನಿರೀಕ್ಷೆಯಂತೆ ಗುಜರಾತ್ ಚುನಾವಣೆ ಬಳಿಕ ಪ್ರಧಾನಿ ನರೆಂದ್ರ ಮೋದಿ ಮತ್ತು ಬಿಜೆಪಿ ಚಾಣಕ್ಯ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕರ್ನಾಟಕ ವಿಧಾನಸಭೆ ಚುನಾವಣೆ ಮೇಲೆ ಕಣ್ಣಿಟ್ಟಿದ್ದಾರೆ. ರಾಜ್ಯದಲ್ಲಿ ಮರಳಿ ಬಿಜೆಪಿ ಸರ್ಕಾರ ಆಡಳಿತಕ್ಕೆ ತರಲು ತರಹೇವಾರಿ ತಂತ್ರಗಾರಿಕೆ ರೂಪಿಸತೊಡಗಿದ್ದಾರೆ. ಬಿಜೆಪಿಗೆ ಕಾಂಗ್ರೆಸ್ ಮತ್ತು ದಕ್ಷಿಣ ಕರ್ನಾಟಕದಲ್ಲಿ ಜೆಡಿಎಸ್ ಪ್ರಬಲ ಎದುರಾಳಿಯಾಗಿದ್ದು, ಇವೆರಡೂ ಪಕ್ಷಗಳ ಮತ ಬ್ಯಾಂಕ್ ಕಬಳಿಸಲು ಪ್ರಧಾನಿ ಮೋದಿ - ಶಾ ಜೋಡಿ ಹಲವು ಯೋಜನೆ ಸಿದ್ಧಪಡಿಸಿಟ್ಟುಕೊಂಡಿದೆ.

ವಿಧಾನಸಭೆ ಚುನಾವಣೆ ವೇಳಾಪಟ್ಟಿ ಘೋಷಣೆಗೆ ಮುನ್ನವೇ ಹಲವಾರು ಸರ್ಕಾರಿ ಕಾರ್ಯಕ್ರಮಗಳಿಗೆ ಅನುಮೋದನೆ ನೀಡಿ ಮತದಾರರ ಮನಗೆಲ್ಲುವುದು, ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ ಅದರ ಪ್ರಯೋಜನಗಳನ್ನು ಜನತೆಗೆ ತಲುಪಿಸುವುದು. ರಾಜ್ಯದ ಹಲವೆಡೆ ಪಕ್ಷದಿಂದ ರ‍್ಯಾಲಿಗಳನ್ನು ನಡೆಸಿ ಬಿಜೆಪಿ ಕಾರ್ಯಕರ್ತರಲ್ಲಿ ಹುಮ್ಮಸ್ಸು ತುಂಬುವುದು, ಬಿಜೆಪಿಯು ದುರ್ಬಲವಾಗಿರುವ ಪ್ರದೇಶಗಳಲ್ಲಿ ಹೆಚ್ಚಿನ ಶ್ರಮ ಹಾಕಿ ಪಕ್ಷಕ್ಕೆ ಶಕ್ತಿ ತುಂಬುವುದು ಸೇರಿದಂತೆ ಹತ್ತಾರು ಚುನಾವಣೆ ಪೂರ್ವ ಕಾರ್ಯಕ್ರಮಗಳ ಅನುಷ್ಟಾನಕ್ಕೆ ಮೋದಿ - ಶಾ ಜೋಡಿ ಮುಂದಾಗಿದೆ.

ದಕ್ಷಿಣ ಕರ್ನಾಟಕದಲ್ಲಿ ಅಮಿತ್ ಶಾ ಶಾಕ್:ಹಳೇ ಮೈಸೂರು ಭಾಗದಲ್ಲಿ ಬಿಜೆಪಿಗಿಂತ ಜೆಡಿಎಸ್ ಮತ್ತು ಕಾಂಗ್ರೆಸ್ ಉತ್ತಮ ಸ್ಥಿತಿಯಲ್ಲಿವೆ. ಈ ಎರಡೂ ಪಕ್ಷಗಳ ಮತಬ್ಯಾಂಕ್​ನ್ನು ಭಾರತೀಯ ಜನತಾ ಪಕ್ಷದ ಕಡೆ ಆಕರ್ಷಿಸಲು ಬಿಜೆಪಿ ಚಾಣಕ್ಯ ಅಮಿತ್ ಶಾ ರಾಜ್ಯ ಬಿಜೆಪಿ ಮುಖಂಡರಿಗೆ ಕೆಲವು ಟಾಸ್ಕ್ ನೀಡಿ ಒಂದು ತಿಂಗಳ ಗಡುವು ನೀಡಿದ್ದಾರೆ.

ರಾಜ್ಯದಲ್ಲಿ ಪ್ರಬಲ ಸಮುದಾಯಗಳಲ್ಲಿ ಒಂದಾದ ಹಾಗೂ ಒಕ್ಕಲಿಗ ಮತದಾರರೇ ನಿರ್ಣಾಯಕರಾಗಿರುವ ದಕ್ಷಿಣ ಕರ್ನಾಟಕದಲ್ಲಿ ಒಕ್ಕಲಿಗ ಮತಗಳನ್ನು ಬಿಜೆಪಿಗೆ ಸೆಳೆಯುವ ಯತ್ನ ನಡೆದಿದೆ. ಹೆಚ್ಚಿನ ಸ್ಥಾನ ಗೆದ್ದು ಸ್ವಂತ ಶಕ್ತಿ ಮೇಲೆ ವಿಧಾನಸಭೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಬೇಕೆನ್ನುವ ಸಂಕಲ್ಪ ಅಮಿತ್ ಶಾ ಅವರದ್ದಾಗಿದೆ.

ಸಿಎಂ ಬಸವರಾಜ ಬೊಮ್ಮಾಯಿ ಜೊತೆ ಕಾರ್ಯಕ್ರಮದಲ್ಲಿ ಗೃಹ ಸಚಿವ ಅಮಿತ್​ ಶಾ

ಜೆಡಿಎಸ್​​ನ ಭದ್ರಕೋಟೆಯಾಗಿರುವ ಮಂಡ್ಯ ಜಿಲ್ಲೆಯಲ್ಲಿ ಮೆಗಾ ಡೇರಿಗೆ ಚಾಲನೆ ನೀಡಿರುವುದು. ಮೈಸೂರು, ಮಂಡ್ಯ ಭಾಗಗಳ ಕಾರ್ಯಕರ್ತರನ್ನು ಸೇರಿಸಿ ಬೃಹತ್ ಸಮಾವೇಶ ನಡೆಸಿ ಶಕ್ತಿ ಪ್ರದರ್ಶನ ಮಾಡಿರುವುದು. ಒಕ್ಕಲಿಗರಿಗೆ ಹೊಸದಾಗಿ ಪ್ರತ್ಯೇಕ ಪ್ರವರ್ಗ ಸೃಷ್ಟಿಸಿ ಹೆಚ್ಚಿನ ಪ್ರಮಾಣದ ಮೀಸಲಾತಿ ನೀಡುವುದು, ಜೆಡಿಎಸ್ ಮತ್ತು ಕಾಂಗ್ರೆಸ್ ತೆಕ್ಕೆಯಲ್ಲಿರುವ ಮತಗಳನ್ನು ಬಿಜೆಪಿ ಕಡೆ ಸೆಳೆಯುವುದು ಚುನಾವಣಾ ರಾಜಕೀಯವಾಗಿದೆ.

ದಕ್ಷಿಣ ಕರ್ನಾಟಕದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್‌ಗೆ ಸ್ಪರ್ಧೆಯೊಡ್ಡುವ ನಿಟ್ಟಿನಲ್ಲಿ ಹೆಚ್ಚಿನ ಕ್ಷೇತ್ರಗಳನ್ನು ಗೆಲ್ಲುವ ಸಂಬಂಧ ಕೇಂದ್ರ ಸಚಿವ ಅಮಿತ್ ಶಾ, ದಕ್ಷಿಣ ಕರ್ನಾಟಕದವರಾದ ಬಿಜೆಪಿ ಸರ್ಕಾರದ ಸಚಿವರು ಮತ್ತು ಪ್ರಮುಖ ನಾಯಕರುಗಳ ಸಭೆ ನಡೆಸಿ ಚುನಾವಣೆ ಗೆಲ್ಲಲು ಅಮೂಲ್ಯ ಸಲಹೆ ನೀಡಿದ್ದಾರೆ. ಹಿಂದೂ ಅಜೆಂಡಾ ಮತ್ತು ಅಭಿವೃದ್ಧಿ ಹೆಸರಿನ ರಾಜಕೀಯ ಚಟಟುವಟಿಕೆಗಳ ಬಗ್ಗೆ ಮಾರ್ಗದರ್ಶನ ಮಾಡಿದ್ದಾರೆಂದು ಬಿಜೆಪಿಯ ಉನ್ನತ ಮೂಲಗಳು ತಿಳಿಸಿವೆ.

ರಾಜ್ಯಕ್ಕೆ ಭೇಟಿ ನೀಡಿದ 3 ದಿನಗಳ ಪ್ರವಾಸ ಸಂದರ್ಭದಲ್ಲಿ ಅಮಿತ್ ಶಾ ಬಿಡುವಿಲ್ಲದೇ ಬಿಜೆಪಿ ಮುಖಂಡರ ಸಭೆ, ಸರ್ಕಾರಿ ಕಾರ್ಯಕ್ರಮಗಳಿಗೆ ಚಾಲನೆ, ಪಕ್ಷದ ಸಮಾವೇಶಗಳಲ್ಲಿ ಭಾಗವಹಿಸಿದ್ದಾರೆ. ಈ ಮೂಲಕ ಪಕ್ಷದ ಕಾರ್ಯಕರ್ತರು, ಮುಖಂಡರುಗಳಲ್ಲಿ ಚುನಾವಣಾ ಹುಮ್ಮಸ್ಸು ತುಂಬಿದ್ದಾರೆ. ಅಷ್ಟೇ ಅಲ್ಲ, ಪ್ರತಿ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ನಿದ್ದೆಗೆಡಿಸಿದ್ದಾರೆ.

ಉತ್ತರ ಕರ್ನಾಟಕದಲ್ಲಿ ಮೋದಿ ಮೋಡಿ:ದಕ್ಷಿಣ ಕರ್ನಾಟಕ ಭಾಗದಲ್ಲಿ ಅಮಿತ್ ಶಾ ಪ್ರವಾಸ ಮಾಡಿದ ಕೇವಲ 12 ದಿನಗಳ ಅಂತರದಲ್ಲಿಯೇ ಪ್ರಧಾನಿ ನರೆಂದ್ರ ಮೋದಿ ಉತ್ತರ ಕರ್ನಾಟಕಕ್ಕೆ ಭೇಟಿ ನೀಡುತ್ತಿದ್ದಾರೆ. ಜನವರಿ 12ರಂದು ಧಾರವಾಡದಲ್ಲಿ ರಾಷ್ಟ್ರೀಯ ಯುವ ಜನೋತ್ಸವಕ್ಕೆ ಪ್ರದಾನಿಯವರು ಚಾಲನೆ ನೀಡಲಿದ್ದಾರೆ. ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಯುವಜನತೆ ಆಕರ್ಷಿಸುವ ಉದ್ದೇಶದಿಂದಲೇ ಧಾರವಾಡದಲ್ಲಿ ಯುವ ಜನೋತ್ಸವ ಸಮಾರಂಭ ಆಯೋಜಿಸಲಾಗಿದೆ ಎಂದು ಹೇಳಲಾಗುತ್ತಿದೆ.

ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಇರುವ ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸರ್ಕಾರದ ಯೋಜನೆಗಳ ನೆಪದಲ್ಲಿ ರಾಜ್ಯಕ್ಕೆ ಭೇಟಿ ನೀಡಿ ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಜೊತೆಗೆ ಚುನಾವಣೆಗೆ ಸಂಬಂಧಿಸಿದ ಸಭೆ, ಸಮಾವೇಶಗಳ್ಲಿ ಪಾಲ್ಗೊಂಡು ವಿಧಾನಸಭೆ ಅಖಾಡಕ್ಕೆ ಭೂಮಿಕೆ ಸಿದ್ಧಪಡಿಸತೊಡಗಿದ್ದಾರೆ.

ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪ್ರತಿ ತಿಂಗಳಲ್ಲಿ ಒಂದೆರಡು ಬಾರಿಯಾದರೂ ಕರ್ನಾಟಕ ರಾಜ್ಯಕ್ಕೆ ಭೇಟಿ ನೀಡಿ, ಬಿಜೆಪಿ ಪರವಾದ ಅಲೆ ನಿರ್ಮಿಸಲು ತಮ್ಮ ಚುನಾವಣಾ ರಾಜಕೀಯ ಅನುಭವವನ್ನು ಧಾರೆಯೆರೆಯುತ್ತಿದ್ದಾರೆ.

ಇದನ್ನೂ ಓದಿ:ಆದಿಚುಂಚನಗಿರಿ ಮಠಕ್ಕೆ ಭೇಟಿ.. ನಿರ್ಮಲಾನಂದ ಶ್ರೀಗಳ ಆಶೀರ್ವಾದ ಪಡೆದ ಅಮಿತ್ ಶಾ

ABOUT THE AUTHOR

...view details