ಬೆಂಗಳೂರು: 15 ಶಾಸಕರ ರಾಜೀನಾಮೆ ಅಂಗೀಕಾರ ವಿಚಾರವಾಗಿ ಸುಪ್ರೀಂಕೋರ್ಟ್ ಮಧ್ಯಂತರ ತೀರ್ಪು ಹೊರಬಿದ್ದ ಬೆನ್ನಲ್ಲೆ ಬಿಜೆಪಿ ಸರ್ಕಾರ ರಚಿಸಲು ಸಕಲ ಸಿದ್ಧತೆ ನಡೆಸಿದ್ದು ರಮಡ ರೆಸಾರ್ಟ್ ನಲ್ಲಿ ಮುಂದಿನ ರಾಜಕೀಯ ನಡೆ ಬಗ್ಗೆ ರಣತಂತ್ರಗಳ ರೂಪಿಸಲಾಗುತ್ತಿದೆ.
ಸರ್ಕಾರ ರಚಿಸಲು ಕೇಸರಿಪಡೆ ರಣತಂತ್ರ: ರಮಡಾ ರೆಸಾರ್ಟ್‌ನಲ್ಲಿ ಮಹತ್ವದ ಸಭೆ
ಮೈತ್ರಿ ಸರ್ಕಾರದ ಅತೃಪ್ತ ಶಾಸಕರ ರಾಜೀನಾಮೆ ವಿಚಾರವಾಗಿ ಸುಪ್ರೀಂ ಕೋರ್ಟ್ ತೀರ್ಪು ಹೊರಬಿದ್ದ ಬೆನ್ನಲ್ಲೆ ಬಿಜೆಪಿ ಸರ್ಕಾರ ರಚಿಸಲು ಸಕಲ ಸಿದ್ಧತೆ ನಡೆಸಿದ್ದು, ಈ ಸಂಬಂಧ ಮಹತ್ವದ ಸಭೆ ನಡೆಸಿದೆ.
ರಮಡ ರೆಸಾರ್ಟ್‌ನಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರರಾವ್, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ,ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ನೇತೃತ್ವದಲ್ಲಿ ಸಭೆ ನಡೆಸುತ್ತಿದ್ದಾರೆ. ಯಾವ ಶಾಸಕರು ಭಯಪಡುವ ಅವಶ್ಯಕತೆ ಇಲ್ಲ. ಇನ್ನೆರಡು ದಿನಗಳಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂದು ಅಭಯ ನೀಡಿದ್ದಾರೆ ಎನ್ನಲಾಗಿದೆ.
ಇನ್ನು ಯಾವೊಬ್ಬ ಶಾಸಕರು ಪಕ್ಷ ವರಿಷ್ಠರ ಅನುಮತಿ ಇಲ್ಲದೆ ಮಾಧ್ಯಮಗಳಿಗೆ ಹೇಳಿಕೆ ನೀಡಬಾರದು. ಸರ್ಕಾರ ರಚನೆಯಾಗುವವರೆಗೂ ರೂಪಿಸಿದ ಕಾರ್ಯತಂತ್ರಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ನಿರ್ದೇಶನ ನೀಡಿದ್ದು, ನಾಳಿನ ಅಧಿವೇಶನ ಹೇಗೆಲ್ಲಾ ನಿಭಾಯಿಸಬೇಕೆಂದು ಕೂಲಂಕಷವಾಗಿ ವಿವರಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.