ಬೆಂಗಳೂರು:ಪಾಸಿಟಿವ್ ವಿಷಯಗಳನ್ನು ಇಟ್ಟುಕೊಂಡು ಜನರ ಮುಂದೆ ಹೋಗಬೇಕು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾರ್ಯಕ್ರಮಗಳ ಮಾಹಿತಿ ಜನರಿಗೆ ತಲುಪಬೇಕು, ತೀರಾ ವೈಯಕ್ತಿಕ ವಿಷಯಗಳನ್ನಾಧರಿಸಿ ಟಾರ್ಗೆಟ್ ಮಾಡುವುದು ಬೇಡ ಕೇವಲ ಆಡಳಿತಾತ್ಮಕವಾಗಿ ಟಾರ್ಗೆಟ್ ಮಾಡಬೇಕು ಎಂದು ರಾಜ್ಯ ಬಿಜೆಪಿ ನಾಯಕರಿಗೆ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಸಲಹೆ ನೀಡಿದ್ದಾರೆ.
ತೀರಾ ವೈಯಕ್ತಿಕ ಟಾರ್ಗೆಟ್ ಬೇಡ : ಖಾಸಗಿ ಹೋಟೆಲ್ ನಲ್ಲಿ ನಡೆದ ಪಕ್ಷದ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಹಳೆ ಮೈಸೂರು ಭಾಗದ ಅಮಿತ್ ಶಾ ಟಾಸ್ಕ್ ನಲ್ಲಿ ಯಾವುದೇ ವ್ಯತ್ಯಾಸ ಆಗುವಂತಿಲ್ಲ, ಚುನಾವಣಾ ಹಿನ್ನೆಲೆ ಆರಂಭವಾಗುವ ಪಕ್ಷದ ಯಾತ್ರೆ, ಮೋರ್ಚಾ ಸಮಾವೇಶಗಳಲ್ಲಿ ಆದಷ್ಟೂ ಪಾಸಿಟಿವ್ ವಿಷಯಗಳನ್ನು ಇಟ್ಟುಕೊಂಡು ಹೋಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾರ್ಯಕ್ರಮಗಳು ತಲುಪಬೇಕು ಆದಷ್ಟು ತೀರಾ ವೈಯಕ್ತಿಕ ಟಾರ್ಗೆಟ್ ಬೇಡ ಆಡಳಿತಾತ್ಮಕವಾಗಿ ಟಾರ್ಗೆಟ್ ಇರಲಿ, ಹಿಂದೂ - ಮುಸ್ಲಿಂ ಎಂಬ ರೀತಿಯಲ್ಲಿ ಬೇಡ, ಮುಸ್ಲಿಂ ಭಾವನೆಗಳಿಗೆ ಧಕ್ಕೆಯಾಗುವ ರೀತಿಯಲ್ಲಿ ಟಾರ್ಗೆಟ್ ಬೇಡ, ಟಿಪ್ಪು ವಿಚಾರ ಇರಲಿ ಆದರೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಏನಾಗಬಹುದು ಎಂಬುದನ್ನೂ ಹೇಳಿ ಎಂದು ಸಲಹೆ ನೀಡಿದರು.
ಪ್ರಯತ್ನ ಹಾಕಿದರೆ ಆ ರೆಕಾರ್ಡ್ ಬ್ರೇಕ್ ಮಾಡುವ ಅವಕಾಶ ಇದೆ: ಬೆಂಗಳೂರಿನಲ್ಲಿ ನಮಗೆ ಅತಿ ಹೆಚ್ಚು ಸ್ಥಾನ ಗೆಲ್ಲುವ ಎಲ್ಲ ಅವಕಾಶಗಳೂ ಇವೆ, ನಾವು ಸರಿಯಾದ ದಿಕ್ಕಿನಲ್ಲಿ ಪ್ರಯತ್ನ ಮಾಡಬೇಕು ಅಷ್ಟೇ, ಸರಿಯಾದ ಪ್ರಯತ್ನ ಮಾಡಿದರೆ ರಿಸಲ್ಟ್ ಖಂಡಿತಾ ಸಿಗಲಿದೆ. ಈ ಹಿಂದೆ ನಾವು 18 ಸೀಟು ಗೆದ್ದಿದ್ದೆವು. ಈ ಬಾರಿ ಪ್ರಯತ್ನ ಹಾಕಿದರೆ ಆ ರೆಕಾರ್ಡ್ ಬ್ರೇಕ್ ಮಾಡುವ ಅವಕಾಶ ಇದೆ. ಬೆಂಗಳೂರಿನಲ್ಲಿ ಕೆಲಸ ಮಾಡಿದರೆ ಹೆಚ್ಚು ಸ್ಥಾನ ಗೆಲ್ಲುವ ಮಾಹಿತಿ ನಮಗೆ ಇದೆ. ಬೆಂಗಳೂರಿನ ನೀವೆಲ್ಲರೂ ಸಮರ್ಥರು ಸಾಮರ್ಥ್ಯಕ್ಕೆ ತಕ್ಕಂತೆ ಕೆಲಸ ಮಾಡಿ ಬೆಂಗಳೂರಿನ ಸುತ್ತಮುತ್ತಲಿನ ಕ್ಷೇತ್ರಗಳತ್ತಲೂ ಗಮನ ಇರಲಿ ಎಂದು ಸೂಚಿಸಿದರು.