ಕರ್ನಾಟಕ

karnataka

ETV Bharat / state

ಶಿವಮೊಗ್ಗದ ಕಲ್ಲು ತೂರಾಟ ಪ್ರಕರಣದಲ್ಲಿ ತಪ್ಪಿತಸ್ಥರು ಯಾರೇ ಇದ್ದರೂ ಕಾನೂನು ರೀತಿ ಕ್ರಮ ಕೈಗೊಳ್ಳಿ: ಬಿಜೆಪಿ ಒತ್ತಾಯ - ಸಿಟಿ ರವಿ ವಾಗ್ದಾಳಿ

ಶಿವಮೊಗ್ಗದ ಕಲ್ಲು ತೂರಾಟ ಪ್ರಕರಣ ಸೇರಿದಂತೆ ಹಲವು ವಿಚಾರಗಳನ್ನು ಸುದ್ದಿಗೋಷ್ಠಿಯಲ್ಲಿ ಹಂಚಿಕೊಂಡಿರುವ ಬಿಜೆಪಿ ನಾಯಕರು, ಆಡಳಿತಾರೂಢ ರಾಜ್ಯ ಕಾಂಗ್ರೆಸ್​ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್​ ಸರ್ಕಾರದ ವಿರುದ್ಧ ವಾಗ್ದಾಳಿ
ಕಾಂಗ್ರೆಸ್​ ಸರ್ಕಾರದ ವಿರುದ್ಧ ವಾಗ್ದಾಳಿ

By ETV Bharat Karnataka Team

Published : Oct 4, 2023, 5:12 PM IST

Updated : Oct 4, 2023, 5:23 PM IST

ಬೆಂಗಳೂರು:ರಾಜ್ಯದಲ್ಲಿ ಅರಾಜಕತೆ ಮನೆ ಮಾಡಿದೆ ಎಂದು ಕಾಂಗ್ರೆಸ್​ ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ. ಆರ್.ಟಿ ನಗರದಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿಯಲ್ಲಿ ಸಿ ಟಿ ರವಿ ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾಧ್ಯಮಗೋಷ್ಟಿ ನಡೆಸಿ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಹಿಂದಿನ ಕೆಲವು ಪ್ರಕರಣಗಳಲ್ಲಿ ಸಿಲುಕಿದವರನ್ನು ಬಿಡುಗಡೆಗೊಳಿಸುವಂತೆ ಮಂತ್ರಿಗಳೇ ಪತ್ರ ಬರೆಯುತ್ತಾರೆ ಅಂದರೆ ಏನು ಹೇಳಬೇಕು? ಪಿಎಫ್ಐ, ಎಸ್‌ಡಿ‌ಪಿಐ ನವ್ರು ಭಾಗವಹಿಸಿರುವ ಪ್ರಕರಣಗಳಲ್ಲಿ ಬಿಡುಗಡೆಗೆ ಪತ್ರ ಬರೆದಿದ್ದಾರೆ. ಹುಬ್ಬಳ್ಳಿ ಪ್ರಕರಣದಲ್ಲೂ ಬಂಧಿತರ ಬಿಡುಗಡೆಗೆ ಡಿಸಿಎಂ ಪತ್ರ ಬರೆದಿದ್ದಾರೆ ಎಂದು ಮಾಜಿ ಸಿಎಂ ಬೊಮ್ಮಾಯಿ ಆರೋಪಿಸಿದ್ದಾರೆ.

ಶಿವಮೊಗ್ಗದ ಕಲ್ಲು ತೂರಾಟ ಪ್ರಕರಣದಲ್ಲಿ ತಪ್ಪಿತಸ್ಥರು ಯಾರೇ ಇದ್ದರೂ ಅವರನ್ನು ಹಿಡಿದು ಕಾನೂನು ರೀತಿ ಕ್ರಮ ತೆಗೆದುಕೊಳ್ಳಬೇಕು. ಕಾಂಗ್ರೆಸ್​ನ ಒಬ್ಬೊಬ್ಬ ಸಚಿವರು ಒಂದೊಂದು ರೀತಿ ಹೇಳಿಕೆ ನೀಡುತ್ತಿದ್ದಾರೆ. ಇದು ಕಾಂಗ್ರೆಸ್​ ಸರ್ಕಾರದ ವೈಫಲ್ಯವೆಂದು ಬೊಮ್ಮಾಯಿ ವಾಗ್ದಾಳಿ ನಡೆಸಿದರು.

ಗೃಹಲಕ್ಷ್ಮಿ ಯೋಜನೆ ತಲುಪದ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಮಾಜಿ ಸಿಎಂ, ಒಂದು ತಿಂಗಳು ಕಾದು ನೋಡಿ. ಈಗಾಗಲೇ ಬ್ಯಾಂಕ್ ಮುಂದೆ ಗೃಹಲಕ್ಷ್ಮಿ ಯೋಜನೆಗೆ ಕ್ಯೂ ನಿಂತಿದ್ದಾರೆ. ಮುಂದೆ ಏನಾಗಲಿದೆ ಅಂತ ಗೊತ್ತಾಗಲಿದೆ ಎಂದರು.

ಜಾತಿ ಗಣತಿ ವರದಿ ಬಿಡುಗಡೆ ವಿಚಾರ ಚರ್ಚೆಯಾಗುತ್ತಿದೆ. ನಾವು ಬಿಡುಗಡೆಗೆ ವಿರೋಧ ಮಾಡಿಲ್ಲ. ಉತ್ತರ ಭಾರತದ ವರದಿ ಬೇರೆ, ದಕ್ಷಿಣ ಭಾರತ ರಾಜ್ಯದ ವರದಿಯೇ ಬೇರೆ. ಸುಪ್ರೀಂ ಕೋರ್ಟ್ ಸಂಪೂರ್ಣ ಡೇಟಾ ಇರಬೇಕು ಅಂತ ಹೇಳಿದೆ. ಈಗ ಇರೋದು ಸೋಶಿಯಲ್ ಎಕನಾಮಿಕ್ ಸರ್ವೆ. ಸರ್ಕಾರದ ವರದಿಯಲ್ಲೂ ಹಾಗೆಯೇ ಇದೆ. ಸಿದ್ದರಾಮಯ್ಯ ಅವರೂ ಸ್ಪಷ್ಟೀಕರಣ ಕೊಟ್ಟಿದ್ದಾರೆ. ಹಿಂದೆ ಅವರ ಸರ್ಕಾರ ವರದಿ ಕೊಡಲಿಲ್ಲ. ಈಗ ಅವರದ್ದೇ ಸರ್ಕಾರ ಇದೆ. ಏನು ಮಾಡುತ್ತಾರೆ ನೋಡೋಣ ಎಂದರು.

ಸಿ ಟಿ ರವಿ ವಾಗ್ದಾಳಿ:ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 140 ದಿನಗಳಾಗಿವೆ. ಕೋಮುವಾದಿ ಶಕ್ತಿಗಳು ಸಾರ್ವಜನಿಕ ರೂಪದಲ್ಲಿ ವಿಜೃಂಭಿಸಲು ಅವಕಾಶ ಮಾಡಿಕೊಟ್ಟಿದ್ದೇ ಕಾಂಗ್ರೆಸ್ ಸರ್ಕಾರದ ಸಾಧನೆಯಾಗಿದೆ ಎಂದು ವಾಗ್ದಾಳಿ ನಡೆಸಿದರು. ಇದಕ್ಕೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೂಡ ದನಿಗೂಡಿಸಿದರು.

ಶಿವಮೊಗ್ಗ ಗಲಭೆ ವೇಳೆ ಎಸ್ಪಿಯೇ ಸ್ಥಳಕ್ಕೆ ಬರಬೇಕಾದ ಸ್ಥಿತಿ ಬಂದರೂ ಗೃಹ ಸಚಿವರು ಲಘುವಾದ ಹೇಳಿಕೆ ನೀಡಿದ್ದಾರೆ, ಡಿಜೆ ಹಳ್ಳಿ, ಕೆಜಿ ಹಳ್ಳಿ ಘಟನೆಯ ಆರೋಪಿಗಳ ಕೇಸ್ ವಾಪಸ್​ಗೆ ತನ್ವೀರ್ ಸೇಠ್​ ಪತ್ರ ಬರೆದರು. ಇದರ ಬೆನ್ನಲ್ಲೇ ಹುಬ್ಬಳ್ಳಿ ಗಲಭೆ ಆರೋಪಿಗಳ ಮೇಲಿನ ಕೇಸ್ ವಾಪಸ್​ಗೆ ಡಿಸಿಎಂ ಡಿಕೆ ಶಿವಕುಮಾರ್ ಗೃಹ ಸಚಿವರಿಗೆ ಪತ್ರ ಬರೆದಿದ್ದಾರೆ. ಇದು ಮತಾಂಧರಿಗೆ ಕುಮ್ಮಕ್ಕು ನೀಡುತ್ತಿರುವುದಕ್ಕೆ ನಿದರ್ಶನ ಎಂದು ಕಿಡಿಕಾರಿದ್ದಾರೆ.

ಪುನೀತ್ ಕೆರೆಹಳ್ಳಿ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿ, ನ್ಯಾಯಾಂಗ ತನಿಖೆಗೆ ಆಗ್ರಹ ಮಾಡಿದ್ದೇವೆ. ಹಿಂದೂಪರ ಕಾರ್ಯಕರ್ತರ ಮೇಲಿನ ಸುಳ್ಳು ಮೊಕದ್ದಮೆ ವಾಪಸ್​ಗೆ ಆಗ್ರಹಿಸಿದ್ದೇವೆ. ಪುನೀತ್ ಕೆರೆಹಳ್ಳಿ ವಿರುದ್ಧ ಸುಳ್ಳು ಆರೋಪಕ್ಕೆ ಉತ್ತರ ಕೊಡಿ, ಇಲ್ಲವೇ ಆರೋಪಕ್ಕೆ ಆಧಾರ ಕೊಡಿ. ಇಲ್ಲದಿದ್ದಲ್ಲಿ ಕ್ಷಮೆ ಕೇಳಿ ಎಂದು ಎಂದು ಆಗ್ರಹಿಸಿದರು. ಇದೇ ವೇಳೆ ಸಚಿವ ರಾಮಲಿಂಗಾರೆಡ್ಡಿ ಹೇಳಿಕೆಗೂ ಕಿಡಿಕಾರಿದರು.

ಇದನ್ನೂ ಓದಿ:ಮೈಸೂರಲ್ಲಿ ಮಹಿಷ ದಸರಾ ಆಚರಣೆಗೆ ಸಂಸದ ಪ್ರತಾಪ್ ಸಿಂಹ ಆಕ್ಷೇಪ

Last Updated : Oct 4, 2023, 5:23 PM IST

ABOUT THE AUTHOR

...view details