ಬೆಂಗಳೂರು: ಜಾತಿಗಣತಿ ವರದಿ ವಿಚಾರದಲ್ಲಿ ಮಗುವನ್ನೂ ಚಿವುಟಿ, ತೊಟ್ಟಿಲು ತೂಗುವುದು ಎಂಬ ಗಾದೆಯಂತೆ ಈಗ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಮಗು ಚಿವುಟುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ, ಬಿಜೆಪಿ ಮುಖಂಡ ಸಿ.ಟಿ. ರವಿ ಟೀಕಿಸಿದ್ದಾರೆ.
ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಾಂತರಾಜು ವರದಿಗೆ ಸಂಬಂಧಿಸಿದಂತೆ ಅದರ ಪ್ರಿನ್ಸಿಪಲ್ ಸೆಕ್ರೇಟರಿಯೇ ಸಹಿ ಹಾಕಿಲ್ಲ. ನನಗೆ ಇರುವ ಮಾಹಿತಿ ಪ್ರಕಾರ ಒಂದೂವರೆ ಕೋಟಿ ಜನರ ಉಲ್ಲೇಖವೇ ಇಲ್ಲ. ಹಾಗಿರುವಾಗ ಎಷ್ಟರ ಮಟ್ಟಿಗೆ ಕಾಂತರಾಜು ವರದಿ ಇದೆ ಎಂದು ಹೇಳಿದರು. ನಮ್ಮ ಕಡೆ ಗಾದೆ ಇದೆ. ಮಗುವನ್ನು ಚಿವುಟಿ, ತೊಟ್ಟಿಲು ತೂಗುವುದು. ಹಾಗೆ ಕಾಂಗ್ರೆಸ್ ನಡೆ ಇದೆ. ಹಿಂದೆ ಅಧಿಕಾರದಲ್ಲಿದ್ದಾಗಲೇ ವರದಿ ಸಿಕ್ಕಿತ್ತು. ಆಗಲೇ ಯಾಕೆ ಮಾಡಲಿಲ್ಲ? ಡಿಸಿಎಂ ಡಿ.ಕೆ. ಶಿವಕುಮಾರ್ ಇಲ್ಲಿ ಸಹಿ ಹಾಕುವ ಅವಶ್ಯಕತೆ ಇರಲಿಲ್ಲ.
ವರದಿ ಬಗ್ಗೆ ವಿರೋಧ ಇದ್ದರೆ ಒಂದೇ ಸಾಲಲ್ಲಿ ರಾಜೀನಾಮೆ ಕೊಟ್ಟು ಹೊರಗೆ ಬಂದು ಹೋರಾಟದಲ್ಲಿ ಭಾಗಿಯಾಗಬೇಕು. ಈಗಾಗಲೇ ವೀರಶೈವ ಸಮಾಜ, ಒಕ್ಕಲಿಗ ಸಮಾಜ ವೈಜ್ಞಾನಿಕವಾಗಿ ಸರಿ ಇಲ್ಲ ಎಂದು ವರದಿಯನ್ನು ವಿರೋಧಿಸಿದೆ. ಜಾತಿ ಗಣತಿ ಅಲ್ಲ ಅಂತಾದ್ರೆ ವರದಿ ಎಲ್ಲಿ ಹೋಯ್ತು?. ಒಂದೂವರೆ ಕೋಟಿ ಜನ ಎಲ್ಲಿ ಹೋದ್ರು. ಆಯೋಗದ ಅಧ್ಯಕ್ಷರ ಸಹಿಯೇ ಇಲ್ಲ. ಜಾತಿ ಗಣತಿ, ಸಮೀಕ್ಷೆ ಆಗಬೇಕು. ತುಳಿತಕ್ಕೊಳಗಾದ ಜನರಿಗೆ ಅನ್ಯಾಯ ಆಗಬಾರದು. ಪೊಲಿಟಿಕಲ್ ಫುಟ್ ಬಾಲ್ ಆಗಬಾರದು ಎಂದರು.
ಮೂಲ ಕಡತ ನಾಪತ್ತೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ರಾಜ್ಯಪಾಲರ ಸಹಿ ಇಲ್ಲದ ಆದೇಶ ಅಂತ ಕೆ.ಎಸ್. ಈಶ್ವರಪ್ಪ ಹೇಳಿದ್ದರು. ಹಾಗೆ ಆಯೋಗದ ಅಧ್ಯಕ್ಷರ ಸಹಿ ಇಲ್ಲದ ವರದಿ ಇದಾಗಿದೆ. ರಿಸರ್ವ್ ಬ್ಯಾಂಕ್ ಅಧ್ಯಕ್ಷರ ಸಹಿ ಇಲ್ಲದ ನೋಟ್ ತರ ಈ ವರದಿ ಆಗಿದೆ. ತುಳಿತಕ್ಕೊಳಗಾದ ಜನರಿಗೆ ನ್ಯಾಯ ಸಿಗಬೇಕು ಅನ್ನೋದು ನಮ್ಮ ಪಕ್ಷದ ಆಶಯ. ಅವಕಾಶ ವಂಚಿತ ಸಮಾಜ ಇದೆ. ಅಂತ ಸಮಾಜಕ್ಕೆ ಶೇ.50 ರಷ್ಟು ಮೀಸಲಾತಿ ಸಿಗಬೇಕು ಅನ್ನೋದು ನನ್ನ ಅಭಿಪ್ರಾಯ ಎಂದು ಹೇಳಿದರು.