ಬೆಂಗಳೂರು: ಬರೀ ಬೂಟಾಟಿಕೆ ಪಾರ್ಟಿ (ಬಿಜೆಪಿ) ಸುಳ್ಳುಕೋರರ ಸಂತೆ ಎನ್ನುವುದಕ್ಕೆ ಮಂಡ್ಯದಲ್ಲಿ ಸುಖಾಸುಮ್ಮನೆ ಅಲವತ್ತುಕೊಂಡ ನಿಮ್ಮ ಅಸತ್ಯದ ಹಾಹಾಕಾರದ ವರಸೆಯೇ ಸಾಕ್ಷಿ. ಸ್ಥಳಕ್ಕೊಂದು ವೇಷ ಕ್ಷಣಕ್ಕೊಂದು ಸುಳ್ಳು ಇದು ನಿಮ್ಮ ಬಿಜೆಪಿ ಪಕ್ಷದ ನಿಜ ಸ್ವರೂಪ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಟೀಕಾ ಪ್ರಹಾರ ನಡೆಸಿದ್ದಾರೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ನೀವು ಸರ್ವಾಧಿಕಾರಿ ಹಿಟ್ಲರ್ನ ಸಂಪುಟದ ಗೊಬೆಲ್ಲನ ಹೊಸ ಅವತಾರ. ಸುಳ್ಳು ಹೇಳಿ ಪ್ರಚಾರ ಗಿಟ್ಟಿಸಿಕೊಳ್ಳಬೇಕಾದ ಕರ್ಮ ನಿಮಗೇಕೆ ಬಂತು ಅಮಿತ್ ಶಾ ಅವರೇ? ಎಂದು ಪ್ರಶ್ನೆ ಮಾಡಿದ್ದಾರೆ.
ಜೆಡಿಎಸ್ ಗೆದ್ದರೆ ಕರ್ನಾಟಕ ಒಂದು ಕುಟುಂಬದ ಎಟಿಎಂ ಆಗುತ್ತದೆಂದು ಜಾಗಟೆ ಹೊಡೆದಿದ್ದೀರಿ. ಜೆಡಿಎಸ್ ಸರ್ಕಾರ ಬಂದರೆ, ಅದು ಆರೂವರೆ ಕೋಟಿ ಕನ್ನಡಿಗರ ಎಟಿಎಂ ಆಗುತ್ತದೆ. ರೈತರ, ಕಾರ್ಮಿಕರ, ದೀನ ದಲಿತರ, ಅಶಕ್ತರ, ವಿಕಲಚೇತನರ ಎಟಿಎಂ ಆಗುತ್ತದೆ. ಜೆಡಿಎಸ್ ಜನರ ಎಟಿಎಂ. ನಮ್ಮ ಪಾಲಿಗೆ ಎಟಿಎಂ ಎಂದರೆ ಎನಿ ಟೈಮ್ ಮನುಷ್ಯತ್ವ ಎಂದು. ನಿಮ್ಮ ಪಾಲಿಗೆ ಅದು ಎನಿ ಟೈಮ್ ಮೋಸ. ಸುಳ್ಳಿನ ಜಾಗಟೆ ಹೊಡೆದೇ ದೇಶವನ್ನು ಅಧೋಗತಿಗೆ ತಳ್ಳಿದ್ದೀರಿ. ಶಾ ಅವರೇ, ದೇಶದ ಮಾತು ಹಾಗಿರಲಿ, ಕರ್ನಾಟದಲ್ಲಿ ನಿಮ್ಮ ಪಕ್ಷದ ಎಟಿಎಂಗಳ ಪಟ್ಟಿ ಮೂಡಿದೆ ನೋಡಿ ಎಂದು ತಿರುಗೇಟು ನೀಡಿದ್ದಾರೆ.
55 60%ರ ಬಿಜೆಪಿ ಸರಕಾರ:ಕರ್ನಾಟಕದ ನಿಮ್ಮ ಬಿಜೆಪಿ ಸರಕಾರ ಕೇವಲ 40% ಸರಕಾರ ಅಲ್ಲವೇ ಅಲ್ಲ. ಅದು 55-60% ಸರಕಾರ. ನಿಮಗೂ ಮಾಹಿತಿ ಇರುತ್ತದೆ. ಕರ್ನಾಟಕ ನಿಮ್ಮ ಪಕ್ಷಕ್ಕೂ ಎಟಿಎಂ ಹೌದಲ್ಲವೇ? ಈ ಸತ್ಯ ಯಾಕೆ ಮರೆಮಾಚಿದಿರಿ? ಮಂಡ್ಯ ಜನರ ಮುಂದೆ ನಿಮ್ಮ ದಮ್ಮು ತಾಕತ್ತು ನಡೆಯಲ್ಲ. ಅರಿತುಕೊಳ್ಳಿ. ಇನ್ನು ಕುಟುಂಬದ ವಿಷಯ, ನಿಮ್ಮ ಪಕ್ಷದ ಕುಟುಂಬ ರಾಜಕಾರಣದ ಲೆಕ್ಕ ಗೊತ್ತಿಲ್ಲವೇ. ನಿಮ್ಮ ಸುಪುತ್ರ ಜಯ್ ಶಾ ಯಾವ ಸೀಮೆ ಕ್ರಿಕೆಟ್ ಪಂಡಿತರು ಎಂದು ಬಿಸಿಸಿಐನಲ್ಲಿ ಕೂತಿದ್ದಾರೆ? ಬಿಸಿಸಿಐನಲ್ಲಿ ಯಾರು ಇರಬೇಕು, ಇರಬಾರದೆಂದು ಸುಪ್ರೀಂ ಕೋರ್ಟಿನ ಸ್ಪಷ್ಟ ಆದೇಶವಿದೆ. ಆ ಆದೇಶಕ್ಕೆ ನಿಮ್ಮ ಮಗ ಅತೀತರೇ? ಈಗ ಹೇಳಿ, ಬಿಸಿಸಿಐ ಯಾರ ಪಾಲಿನ ಎಟಿಎಂ? ಎಂದು ಕುಮಾರಸ್ವಾಮಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪ್ರಶ್ನಿಸಿದ್ದಾರೆ.