ಬಿಎಸ್ವೈ ನೇತೃತ್ವದಲ್ಲಿ ಮಹತ್ವದ ಸಭೆ ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿಚಾರದ ವಿರುದ್ಧ ಕಾವೇರಿ ರಕ್ಷಣಾ ಯಾತ್ರೆ ನಡೆಸಲು ಪ್ರತಿಪಕ್ಷ ಬಿಜೆಪಿ ಮುಂದಾಗಿದ್ದು, ಈ ಸಂಬಂಧ ರಾಜ್ಯ ಬಿಜೆಪಿ ಕಚೇರಿಯಲ್ಲಿ ಮಹತ್ವದ ಸಭೆ ನಡೆಸಲಾಗುತ್ತಿದೆ. ಈಗಾಗಲೇ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಬಿಜೆಪಿ ಹೋರಾಟಕ್ಕೆ ರೂಪುರೇಷೆ ತಯಾರಿಸುತ್ತಿದೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಮಹತ್ವದ ಸಭೆ ಆರಂಭಗೊಂಡಿದೆ. ಕಾವೇರಿ ಕೊಳ್ಳದ ಜಿಲ್ಲೆಗಳಲ್ಲಿ ಕಾವೇರಿ ರಕ್ಷಣಾ ಯಾತ್ರೆ ನಡೆಸುವ ಸಂಬಂಧ ಚರ್ಚೆ ನಡೆಸಲಾಗುತ್ತಿದೆ. ಕಾವೇರಿ ಕೊಳ್ಳದ 6 ಜಿಲ್ಲೆಗಳ ಬಿಜೆಪಿ ಸಂಸದರು, ಶಾಸಕರು, ಪಕ್ಷದ ಮುಖಂಡರ ಸಭೆಯಲ್ಲಿ ಭಾಗಿಯಾಗಿದ್ದಾರೆ. ಬೆಂಗಳೂರು ಗ್ರಾಮಾಂತರ, ಮಂಡ್ಯ, ಮೈಸೂರು, ಚಾಮರಾಜನಗರ, ರಾಮನಗರ ಮತ್ತು ಹಾಸನ ಜಿಲ್ಲೆಗಳ ಜನಪ್ರತಿನಿಧಿಗಳು, ಮುಖಂಡರು ಹೋರಾಟದ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಮೂರು ತಂಡಗಳಲ್ಲಿ ಬಿಜೆಪಿ ನಾಯಕರು ಪ್ರವಾಸ ಮಾಡಲಿದ್ದು, ಇದಕ್ಕೆ ಪೂರಕವಾಗಿ ಕೈಗೊಳ್ಳಬೇಕಾದ ಸಿದ್ಧತೆ ಕುರಿತು ಸಭೆಯಲ್ಲಿ ಸಮಾಲೋಚನೆ ನಡೆಸಲಾಗುತ್ತಿದೆ.
ಸಭೆಯ ಆರಂಭದಲ್ಲಿ ಮಾತನಾಡಿದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ ಗೌಡ, ಕಾವೇರಿಯಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವ ವಿಚಾರದ ಕುರಿತು ವಿಸ್ತೃತವಾದ ಮಾಹಿತಿಯನ್ನು ಸಭೆಗೆ ವಿವರಿಸಿದರು. ಮಳೆ ಅಭಾವವಿದ್ದು, ಜಲಾಶಯಗಳಲ್ಲಿ ನೀರಿಲ್ಲದಿದ್ದರೂ ನಾಲ್ಕು ಜಲಾಶಯಗಳಿಂದ ತಮಿಳುನಾಡಿಗೆ 10 ಸಾವಿರ ಕ್ಯೂಸೆಕ್ ನೀರು ಹರಿಸಿದ್ದು, ಈಗ ಐದು ಸಾವಿರ ಕ್ಯೂಸೆಕ್ಸ್ ಹರಿಸುತ್ತಿರುವುದು, ಕಾವೇರಿ ಕೊಳ್ಳದ ರೈತರ ಬೆಳೆಗಳಿಗೆ ಸರಿಯಾದ ನೀರು ಕೊಡದಿರುವುದು, ನೀರಿನ ಕೊರತೆ ಸೇರಿದಂತೆ ಎಲ್ಲ ವಿಚಾರಗಳ ಕುರಿತು ವಿವರ ನೀಡಿದರು. ಕಾನೂನು ಹೋರಾಟದಲ್ಲಿನ ನ್ಯೂನತೆಗಳ ಬಗ್ಗೆಯೂ ಬೆಳಕು ಚೆಲ್ಲಿದರು. ಆರು ಜಿಲ್ಲೆಗಳ ಭಾಗದಲ್ಲಿ ರೈತರು ಎದುರಿಸುತ್ತಿರುವ ಸಮಸ್ಯೆಗಳ ವಿವರ ನೀಡಿದರು.
ನಂತರ ಕಾವೇರಿ ರಕ್ಷಣಾ ಯಾತ್ರೆ ಕೈಗೊಳ್ಳುವ ಕುರಿತು ನಾಯಕರು ಚರ್ಚಿಸಿದರು. ಕಾವೇರಿಗಾಗಿ ಬಿಜೆಪಿ ಯಾವ ರೀತಿ ಹೋರಾಟ ನಡೆಸಬೇಕು, ಸರ್ಕಾರದ ವಿರುದ್ಧ ನಡೆಸಬೇಕಾದ ಹೋರಾಟದ ಕುರಿತು ಸಮಾಲೋಚನೆ ನಡೆಸಿದರು. ಸಭೆಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಪರಿಷತ್ ಸದಸ್ಯ ಸಿ ಪಿ ಯೋಗೀಶ್ವರ್, ಶಾಸಕ ಸಿ.ಎನ್. ಅಶ್ವಥ್ ನಾರಾಯಣ, ಮಾಜಿ ಶಾಸಕ ಎನ್ ಮಹೇಶ್, ಸಂಸದ ಪಿ ಸಿ ಮೋಹನ್, ಸಂಸದ ಡಿವಿಎಸ್, ಗೋವಿಂದ ಕಾರಜೋಳ ಸೇರಿ ಹಲವರು ಭಾಗಿಯಾಗಿದ್ದರು.
ಇದನ್ನೂ ಓದಿ :Cauvery water issue: ಅನ್ಯ ವಿಚಾರಗಳನ್ನು ಪಕ್ಕಕ್ಕಿಟ್ಟು ರಾಜ್ಯದ ಹಿತಾಸಕ್ತಿ ರಕ್ಷಣೆಗೆ ಸಲಹೆ ನೀಡಿ: ತುರ್ತು ಸಭೆಯಲ್ಲಿ ಮನವಿ ಮಾಡಿದ ಡಿಸಿಎಂ