ಬೆಂಗಳೂರು : ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ ಒಬ್ಬರಿಗೆ ಮಾತ್ರ ನೋಟಿಸ್ ನೀಡಿದ್ದು, ಬಸನಗೌಡ ಪಾಟೀಲ್ ಯತ್ನಾಳ್, ಪ್ರತಾಪ್ ಸಿಂಹ ಸೇರಿದಂತೆ ಇತರ ಯಾರಿಗೂ ನೋಟಿಸ್ ನೀಡಿಲ್ಲ. ಶಾಸಕರು, ಸಂಸದರಿಗೆ ನೋಟಿಸ್ ನೀಡುವ ಅಧಿಕಾರ ಕೇಂದ್ರ ಶಿಸ್ತು ಸಮಿತಿಗೆ ಮಾತ್ರ ಇದೆ. ಹಾಗಾಗಿ ನಾವು ನೋಟಿಸ್ ನೀಡಿಲ್ಲ ಎಂದು ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಶಿಸ್ತು ಸಮಿತಿಯಿಂದ ಒಬ್ಬರಿಗೆ ಮಾತ್ರ ನೋಟಿಸ್ ನೀಡಲಾಗಿದೆ. ಹಾಲಿ ಶಾಸಕ ಮತ್ತು ಸಂಸದರಿಗೆ ನೋಟಿಸ್ ಕೊಡುವ ಅಧಿಕಾರ ನಮ್ಮ ಸಮಿತಿಗೆ ಇಲ್ಲ. ಅದು ಕೇಂದ್ರಿಯ ಶಿಸ್ತು ಸಮಿತಿ ವ್ಯಾಪ್ತಿಗೆ ಬರುತ್ತದೆ. ಹಾಗಾಗಿ ನಾವು ಮಾಜಿ ಶಾಸಕ ರೇಣುಕಾಚಾರ್ಯ ಅವರಿಗೆ ಮಾತ್ರ ನೋಟಿಸ್ ನೀಡಿದ್ದೇವೆ. ಅವರಿಗೆ ಇಂದಿನ ಸಭೆಗೆ ಹಾಜರಾಗಲು ತಿಳಿಸಲಾಗಿತ್ತು. ಆದರೆ ಇಂದು ಅವರು ಬರಲಿಲ್ಲ. ನಂತರ ಬಂದು ವಿವರಣೆ ಕೊಡುತ್ತೇನೆ ಎಂದು ಹೇಳಿದ್ದಾರೆ. ಅವರು ಬಂದು ವಿವರಣೆ ನೀಡದಿದ್ದರೆ ಮುಂದೆ ಏನು ಮಾಡಬೇಕು ಅನ್ನೋದನ್ನು ನೋಡುತ್ತೇವೆ ಎಂದು ಕ್ರಮದ ಎಚ್ಚರಿಕೆ ನೀಡಿದರು.
ಹೇಳಿಕೆಗಳಿಂದ ಪಕ್ಷಕ್ಕೆ ಮುಜುಗರ:ನಂತರ ಮಾತನಾಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್, ಪಕ್ಷ ಬಲವರ್ಧನೆಗೆ ನಾವು ಇದ್ದೇವೆ. ಆಗಾಗ ಸಭೆ ಕರೆದು ಮಾತುಕತೆ ನಡೆಸಿ ಎಂದು ವರಿಷ್ಠರು ಹೇಳಿದ್ದಾರೆ. ಅದರಂತೆ ಇಂದು ಸಭೆ ನಡೆಸಲಾಯಿತು. ಚುನಾವಣೆಯಲ್ಲಿ ಬಿಜೆಪಿ ಯಾಕೆ ಸೋತಿದೆ ಎಂದು ಕೆಲವರು ಬಹಿರಂಗ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆಗಳಿಂದ ಪಕ್ಷಕ್ಕೆ ಮುಜುಗರ ಉಂಟಾಗಿದೆ. ಪಕ್ಷದ ವಿರುದ್ಧ ಹೇಳಿಕೆ ನೀಡಿರುವ ಆಡಿಯೋ ವಿಡಿಯೋ ಮುಂದಿಟ್ಟಿಕೊಂಡು ಸಭೆ ಮಾಡಿದ್ದಾರೆ. ಪಕ್ಷದ ವಿರುದ್ಧ ಹೇಳಿಕೆ ನೀಡಿದವರನ್ನು ಸಭೆಗೆ ಕರೆಯಲಾಗಿತ್ತು.
11 ಜನ ಪಕ್ಷದ ವಿರುದ್ಧ ಹೇಳಿಕೆ ನೀಡಿದ್ದಾರೆ. ಸಭೆಗೆ 11 ಜನರಿಗೂ ಕರೆದಿದ್ದೆವು. ಅದರಲ್ಲಿ ಪ್ರಭು ಚೌಹಾಣ್, ಮುರುಗೇಶ ನಿರಾಣಿ, ಈಶ್ವರ್ ಸಿಂಗ್ ಠಾಕೂರ್, ರಮೇಶ್ ಜಿಗಜಿಣಗಿ, ರೇಣುಕಾಚಾರ್ಯ ಇಂದಿನ ಸಭೆ ಮುಂದೆ ಬಂದಿಲ್ಲ. ಬಳಿಕ ಬಂದು ವಿವರಣೆ ಕೊಡುತ್ತೇವೆ ಎಂದು ಹೇಳಿದ್ದಾರೆ. ಇತರರು ಬಂದು ವಿವರಣೆ ಕೊಟ್ಟರು. ಪಕ್ಷಕ್ಕೆ ಮುಜುಗರ ಉಂಟಾಗುವ ಹೇಳಿಕೆ ನೀಡಿದ್ದೇವೆ ಎಂದು ಅವರು ಒಪ್ಪಿಕೊಂಡಿದ್ದಾರೆ ಎಂದರು.
ಇಂತಹ ಸಭೆಗಳು ಪಕ್ಷದಲ್ಲಿ ನಡೆಯಬೇಕು ಅಂತ ಅವರು ಕೂಡ ಹೇಳಿದ್ದಾರೆ. ಇನ್ಮುಂದೆ ಪಕ್ಷದ ಚಟುವಟಿಕೆಗಳಲ್ಲಿ ನಾವು ಕೂಡ ಭಾಗಿ ಆಗುತ್ತೇವೆ ಎಂದು ಹೇಳಿದ್ದಾರೆ. ಅವರೆಲ್ಲರಿಗೂ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ ಎಸ್ ಯಡಿಯೂರಪ್ಪ ಹೊರಗಡೆ ಮಾತನಾಡದಂತೆ ಸೂಚಿಸಿದ್ದಾರೆ. ಉಳಿದ ಐವರು ಸದ್ಯದಲ್ಲೇ ಬಂದು ವಿವರಣೆ ನೀಡುವುದಾಗಿ ಮಾಹಿತಿ ಕಳಿಸಿದ್ದಾರೆ ಎಂದು ತಿಳಿಸಿದರು.
ಕಳೆದ ಕೆಲ ದಿನಗಳಿಂದ ರಾಜ್ಯ ಬಿಜೆಪಿಯಲ್ಲಿ ನಾಯಕರ ನಡುವೆ ಆರೋಪ ಪ್ರತ್ಯಾರೋಪಗಳು ನಡೆಯುತ್ತಿದೆ. ಇದರಿಂದ ಪಕ್ಷಕ್ಕೆ ತೀವ್ರ ಮುಜುಗರವಾಗುತ್ತಿತ್ತು. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಸಂಸದ ಪ್ರತಾಪ್ ಸಿಂಹ, ನಳಿನ್ ಕುಮಾರ್ ಕಟೀಲ್, ಬಿ. ಎಲ್ ಸಂತೋಷ್ ವಿರುದ್ಧ ರೇಣುಕಾಚಾರ್ಯ, ನಿರಾಣಿ ವಿರುದ್ಧ ಯತ್ನಾಳ್, ಯತ್ನಾಳ್ ವಿರುದ್ಧ ನಿರಾಣಿ ಹೀಗೆ ಸಾಲು ಸಾಲು ಆರೋಪಗಳು ಪಕ್ಷದ ವರ್ಚಸ್ಸಿಗೆ ಧಕ್ಕೆ ತರುವ ರೀತಿಯಲ್ಲಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಬಿಜೆಪಿ ಹೈಕಮಾಂಡ್ ಶಿಸ್ತು ಉಲ್ಲಂಘಿಸಿದವರನ್ನು ಕರೆದು ಮಾತನಾಡಿ ಎಚ್ಚರಿಕೆ ನೀಡಿ ಎನ್ನುವ ಸಂದೇಶ ರವಾನಿಸಿತ್ತು. ಅದರಂತೆ ಇಂದು ಪಕ್ಷದ ಕಚೇರಿಯಲ್ಲಿ ಸಭೆ ನಡೆಸಿ ಶಿಸ್ತು ಉಲ್ಲಂಘಿಸಿದವರಿಂದ ವಿವರಣೆ ಪಡೆದುಕೊಳ್ಳಲಾಯಿತು.
ಇದನ್ನೂ ಓದಿ:ರಾಜ್ಯ ನಾಯಕರ ವಿರುದ್ಧ ಗುಟುರು : ರೇಣುಕಾಚಾರ್ಯಗೆ ನೋಟಿಸ್ ಜಾರಿಗೊಳಿಸಿದ ಬಿಜೆಪಿ