ಕರ್ನಾಟಕ

karnataka

ETV Bharat / state

ಸಂಜೆ ರಾಜ್ಯ ಬಿಜೆಪಿ ಕಚೇರಿಯಲ್ಲಿ ಕೋರ್ ಕಮಿಟಿ ಸಭೆ; ನಾಳೆ ವಿಶೇಷ ಕಾರ್ಯಕಾರಿಣಿ - state BJP meeting

ಇಂದು ಸಂಜೆ 6 ಗಂಟೆಗೆ ಬೆಂಗಳೂರಿನ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಮಹತ್ವದ ಸಭೆ ನಡೆಯಲಿದೆ.

BJP meeting
ರಾಜ್ಯ ಬಿಜೆಪಿ ಸಭೆ

By

Published : Feb 3, 2023, 4:28 PM IST

ಬೆಂಗಳೂರು:ಇಂದು ಸಂಜೆ ರಾಜ್ಯ ಬಿಜೆಪಿ ಕೋರ್​ ಕಮಿಟಿ ಸಭೆ ನಡೆಯಲಿದೆ. ಫೆಬ್ರವರಿ 10ರ ಜಂಟಿ ಅಧಿವೇಶನ, 17ರ ಬಜೆಟ್ ಮಂಡನೆ ಮತ್ತು ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಸರಣಿ ರಾಜ್ಯ ಪ್ರವಾಸ (ಫೆಬ್ರವರಿ) ಕೈಗೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಸಭೆ ಮಹತ್ವ ಪಡೆದುಕೊಂಡಿದೆ.

ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ನಡೆಯುವ ಸಭೆಯಲ್ಲಿ ಭಾಗಿಯಾಗಲು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಕೋರ್ ಕಮಿಟಿ ಸದಸ್ಯರು ಸಭೆಯಲ್ಲಿ ಇರಲಿದ್ದಾರೆ.

ಕೇಂದ್ರದ ನಾಯಕರ ಭೇಟಿ, ಕಾರ್ಯಕ್ರಮಗಳು:ಪ್ರಮುಖವಾಗಿ ಕೇಂದ್ರ ನಾಯಕರ ರಾಜ್ಯ ಪ್ರವಾಸದ ವೇಳೆ ಆಯೋಜಿಸಬೇಕಿರುವ ಪಕ್ಷದ ಕಾರ್ಯಕ್ರಮಗಳ ಕುರಿತು ಸಮಾಲೋಚನೆ ನಡೆಸಲಾಗುತ್ತದೆ. ಫೆ.6 ರಂದು ಬೆಂಗಳೂರಿಗೆ ಆಗಮಿಸಲಿರುವ ಪ್ರಧಾನಿ ಮೋದಿ ತುಮಕೂರು ರಸ್ತೆಯಲ್ಲಿರುವ ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ನಡೆಯಲಿರುವ ಇಂಡಿಯಾ ಎನರ್ಜಿ ವೀಕ್ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ. ನಂತರ ತುಮಕೂರಿಗೆ ತೆರಳಿ ಹೆಚ್ಎಎಲ್ ಹೆಲಿಕಾಪ್ಟರ್ ತಯಾರಿಕಾ ಘಟಕ ಉದ್ಘಾಟನೆ ಮಾಡಲಿದ್ದು, ನಂತರ ಜಲಜೀವನ್ ಮಿಷನ್ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ.

ಫೆಬ್ರವರಿ 13ಕ್ಕೆ ಮತ್ತೆ ಬೆಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದು, ಯಲಹಂಕ ವಾಯುನೆಲೆಯಲ್ಲಿ ನಡೆಯಲಿರುವ ಏರೋ ಇಂಡಿಯಾ ವೈಮಾನಿಕ ಪ್ರದರ್ಶನವನ್ನು ಉದ್ಘಾಟನೆ ಮಾಡಲಿದ್ದಾರೆ. ಅಂದು ಪಕ್ಷದ ಕಾರ್ಯಕ್ರಮಕ್ಕೂ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಅದರ ನಂತರ ಮತ್ತೆ ಫೆಬ್ರವರಿ 27ರಂದು ಮೋದಿ ಮತ್ತೆ ರಾಜ್ಯಕ್ಕೆ ಆಗಮಿಸಲಿದ್ದಾರೆ. ಶಿವಮೊಗ್ಗ ವಿಮಾನ ನಿಲ್ದಾಣವನ್ನು ಉದ್ಘಾಟಿಸಲಿದ್ದಾರೆ. ಪಕ್ಷದ ಕಾರ್ಯಕ್ರಮದಲ್ಲಿಯೂ ಭಾಗಿಯಾಗಲಿದ್ದಾರೆ.

ಫೆಬ್ರವರಿಯಲ್ಲಿ ಮೂರು ಬಾರಿ ಪಿಎಂ ರಾಜ್ಯಕ್ಕೆ ಆಗಮಿಸುತ್ತಿದ್ದು, ಅಮಿತ್ ಶಾ ಪ್ರವಾಸಕ್ಕೂ ಸಮಯ ನಿಗದಿಪಡಿಸಲಾಗುತ್ತಿದೆ. ಇವರ ಜೊತೆಗೆ ಜೆ.ಪಿ.ನಡ್ಡಾ, ರಾಜನಾಥ್​ ಸಿಂಗ್, ಯೋಗಿ ಆದಿತ್ಯನಾಥ್ ಸೇರಿ ಹಲವು ನಾಯಕರೂ ಕೂಡ ರಾಜ್ಯಕ್ಕೆ ಬರಲಿದ್ದಾರೆ. ಕೇಂದ್ರ ನಾಯಕರ ಪ್ರವಾಸದ ವೇಳೆ ನಡೆಸಬೇಕಿರುವ ಸಮಾವೇಶಗಳು, ಪಕ್ಷದ ಕಾರ್ಯಕ್ರಮಗಳ ಕುರಿತು ಇಂದಿನ ಸಭೆಯಲ್ಲಿ ಮಹತ್ವದ ಚರ್ಚೆ ನಡೆಯಲಿದೆ.

ಇದನ್ನೂ ಓದಿ:ನಟ ಸುದೀಪ್ ಮನೆಯಲ್ಲಿ ಡಿಕೆಶಿ ಡಿನ್ನರ್: ರಾಜಕೀಯ ವಲಯದಲ್ಲಿ ಗರಿಗೆದರಿದ ಕುತೂಹಲ

ಫೆಬ್ರವರಿ 10ರಂದು ಜಂಟಿ ಅಧಿವೇಶನ ನಡೆಯಲಿದ್ದು, ರಾಜ್ಯಪಾಲರು ಭಾಷಣ ಮಾಡಲಿದ್ದಾರೆ. ಫೆಬ್ರವರಿ 17ರಂದು ಬಸವರಾಜ ಬೊಮ್ಮಾಯಿ ಸರ್ಕಾರದ ಕೊನೆಯ ಬಜೆಟ್ ಮಂಡನೆಯಾಗಲಿದೆ. ಬಜೆಟ್ ಅಧಿವೇಶನದ ನಂತರ ರಾಜ್ಯದ ನಾಲ್ಕು ದಿಕ್ಕುಗಳಿಂದ ಹಮ್ಮಿಕೊಳ್ಳಲು ಉದ್ದೇಶಿಸಿರುವ ರಥಯಾತ್ರೆಯ ರೂಪುರೇಷೆ ಬಗ್ಗೆ ಚರ್ಚೆ ಆಗಲಿದೆ. ರಥಯಾತ್ರೆಯ ವೇಳಾಪಟ್ಟಿಯನ್ನು ಅಂತಿಮಗೊಳಿಸಿ ತಂಡಗಳನ್ನು ರಚಿಸುವ ಸಾಧ್ಯತೆಯೂ ಇದೆ. ಪಕ್ಷ ಸಂಘಟನೆ ಬಲಪಡಿಸುವ ಕಾರ್ಯಕ್ರಮಗಳ ಬಗ್ಗೆಯೂ ತೀರ್ಮಾನಿಸುವ ನಿರೀಕ್ಷೆ ಇದೆ. ಕೋರ್ ಕಮಿಟಿ ಸಭೆ ನಂತರ ನಾಳೆ ಬೆಳಗ್ಗೆ ಪಕ್ಷದ ಕಚೇರಿ ಜಗನ್ನಾಥ ಭವನದಲ್ಲಿಯೇ ರಾಜ್ಯ ಬಿಜೆಪಿಯ ವಿಶೇಷ ಕಾರ್ಯಕಾರಿಣಿ ಇದ್ದು, ಕೋರ್ ಕಮಿಟಿಯಲ್ಲಿ ಕೈಗೊಂಡ ತೀರ್ಮಾನಗಳ ಅನುಷ್ಠಾನದ ಬಗ್ಗೆ ಸಮಾಲೋಚಿಸುವ ನಿರೀಕ್ಷೆ ಇದೆ .

ಇದನ್ನೂ ಓದಿ:ಸರ್ಕಾರಿ ವೈದ್ಯರ ಪ್ರೈವೇಟ್​ ಪ್ರ್ಯಾಕ್ಟೀಸ್‌ಗೆ ಕಡಿವಾಣ ಹಾಕಿ: ಆಡಳಿತ ಸುಧಾರಣಾ ಆಯೋಗದ ವರದಿ ಶಿಫಾರಸು

ABOUT THE AUTHOR

...view details