ಪರಿಶಿಷ್ಟ ಎಡಗೈ ಸಮುದಾಯದವರು ಈ ಸಾರಿ ಕಾಂಗ್ರೆಸ್ ಕೈಹಿಡಿಯಲಿದ್ದಾರೆ: ಸುಧಾಮ್ ದಾಸ್ ಭವಿಷ್ಯ ಬೆಂಗಳೂರು: ಕಳೆದ ಚುನಾವಣೆಯಲ್ಲಿ ತಮಗೆ ಮತ ನೀಡಿದ ಪರಿಶಿಷ್ಟ ಎಡಗೈ ಸಮುದಾಯಕ್ಕೆ ಬಿಜೆಪಿ ಯಾವುದೇ ಕೊಡುಗೆ ನೀಡಿಲ್ಲ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಕಾರ್ಯಾಧ್ಯಕ್ಷ ಸುಧಾಮ್ ದಾಸ್ ತಿಳಿಸಿದ್ದಾರೆ.
ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಅಧಿಕಾರಕ್ಕೆ ಬಂದ ಬಿಜೆಪಿ ನಂತರದ ಮೂರುವರೆ ವರ್ಷಗಳ ಕಾಲ ಪರಿಶಿಷ್ಟ ಎಡಗೈ ಸಮುದಾಯದ ಮನವಿ, ಹೋರಾಟ ಸೇರಿದಂತೆ ಎಲ್ಲಾ ರೀತಿಯ ಕೂಗಿಗೆ ಸ್ಪಂದಿಸಿಲ್ಲ. ಆ ಪಕ್ಷದ ಮುಖಂಡರು ನಿರಂತರವಾಗಿ ಸಂವಿಧಾನ ಬದಲಾವಣೆ ಕುರಿತು ಮಾತನಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಪರಿಶಿಷ್ಟ ಎಡಗೈ ಸಮುದಾಯದವರು ಬಿಜೆಪಿಗೆ ಈ ಸಮುದಾಯದ ಬಗ್ಗೆ ಆಸಕ್ತಿ ಇಲ್ಲ ಎಂಬುದನ್ನು ಅರಿತು ಬಿಜೆಪಿ ಸೋಲಿಸಲು ಕಾಂಗ್ರೆಸ್ ಪಕ್ಷವನ್ನು ಸೇರಿದ್ದಾರೆ ಎಂದರು.
ಈ ಸಮುದಾಯದವರು ಕಾಂಗ್ರೆಸ್ ಪಕ್ಷ ಸೇರಿದ ನಂತರ ಚುನಾವಣೆಗೆ ಮುಂಚಿತವಾಗಿ ಸದಾಶಿವ ಆಯೋಗದ ಶಿಫಾರಸು ಬದಿಗಿರಿಸಿ, ತಮ್ಮದೇ ಮೇಧಾವಿಗಳ ಸಚಿವ ಸಂಪುಟ ಉಪಸಮಿತಿ ರಚಿಸಿ, ಆ ಸಮಿತಿಯ ಶಿಫಾರಸ್ಸಿನ ಆಧಾರದಲ್ಲಿ ಕೇಂದ್ರಕ್ಕೆ ಒಳ ಮೀಸಲಾತಿ ಕುರಿತು ಪ್ರಸ್ತಾವನೆ ಸಲ್ಲಿಸಿದೆ. ಪರಿಶಿಷ್ಟರ ಒಳಮೀಸಲಾತಿ ಕುರಿತು ಕಾನೂನು ತೊಡಕಿರುವುದರಿಂದ ಸರ್ಕಾರ ಸಾಲಿಸಿಟರ್ ಜನರಲ್ ಅವರ ಮೂಲಕ ಸುಪ್ರೀಂ ಕೋರ್ಟ್ ನಲ್ಲಿ ಮೇ 9ರವರೆಗೆ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ.
ಇಂತಹ ಪರಿಸ್ಥಿತಿಯಲ್ಲಿ ಬಿಜೆಪಿ ಸರ್ಕಾರ ತಮ್ಮ ಸುಳ್ಳಿನ ಮಾರ್ಗದಲ್ಲಿ ಮುಂದುವರಿದು ಮೀಸಲಾತಿ ಏರಿಕೆ ಹಾಗೂ ಒಳಮೀಸಲಾತಿ ಬಗ್ಗೆ ಆದೇಶ ಹೊರಡಿಸಲಾಗಿದೆ ಎಂಬ ಭಾವನೆ ಮೂಡಿಸಲು ಕನ್ನಡದ ಪತ್ರಿಕೆಗಳಲ್ಲಿ ಜಾಹೀರಾತು ಹೊರಡಿಸಿದೆ. ಈ ರೀತಿ ದಿಕ್ಕು ತಪ್ಪಿಸುವ ಜಾಹೀರಾತುಗಳನ್ನು ನೀಡಿ ಪರಿಶಿಷ್ಟರ ಮನಗೆಲ್ಲುವ ಪ್ರಯತ್ನ ಖಂಡನೀಯ. ಈ ಸಂಬಂಧ ರಾಜ್ಯ ಚುನಾವಣಾ ಆಯೋಗದಲ್ಲಿ ದೂರು ಸಲ್ಲಿಸಲಾಗಿದೆ. ಪರಿಶಿಷ್ಟರ ಎಡಗೈ ಸಮುದಾಯಕ್ಕೆ ಸೇರಿದ ಯುವಕರು ಬಿಜೆಪಿ ಸರ್ಕಾರದ ಮೋಸದ ಜಾಲಕ್ಕೆ ಬಲಿಯಾಗಬೇಡಿ. ಸಂವಿಧಾನದ ಬಗ್ಗೆ ಅವಹೇಳನ ಮಾಡುತ್ತಿರುವ ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಿ ಎಂದು ಒತ್ತಾಯಿಸಿದ್ದಾರೆ.
ಕೆಪಿಸಿಸಿ ಮಾಧ್ಯಮ ವಿಭಾಗದ ಅಂಬಣ್ಣ ಆರೋಳಿಕರ್ ಮಾತನಾಡಿ, ಬಿಜೆಪಿ ತನ್ನ ಸುಳ್ಳಿನ ತಂತ್ರ ಮುಂದುವರಿಸಿದೆ. ಮೀಸಲಾತಿ ಹೆಚ್ಚಳದ ಬಗ್ಗೆ ಕೇಂದ್ರಕ್ಕೆ ಪ್ರಸ್ತಾವನೆಯನ್ನು ಈ ಸರ್ಕಾರ ಕಳುಹಿಸಿರಲಿಲ್ಲ. ಇಂತಹ ಹಸಿ ಸುಳ್ಳುಗಳನ್ನು ಹೇಳುವ ಮೂಲಕ ಬಿಜೆಪಿ ಯಾಮಾರಿಸುತ್ತಿದೆ. ಒಳಮೀಸಲಾತಿ ಜಾರಿಯಾಗಿಲ್ಲ. ಮೀಸಲಾತಿ ವಿಚಾರದಲ್ಲಿ ಸರ್ಕಾರಕ್ಕೆ ಆಸಕ್ತಿ ಇದ್ದಿದ್ದರೆ ಅದನ್ನು ತ್ವರಿತ ಗತಿಯಲ್ಲಿ ಜಾರಿ ಮಾಡಬೇಕಿತ್ತೇ ಹೊರತು, ಕೇವಲ ಶಿಫಾರಸ್ಸಿಗೆ ಸುಮ್ಮನಾಗುತ್ತಿರಲಿಲ್ಲ ಎಂದರು.
ಕೇಂದ್ರದ ವಿಚಾರದಲ್ಲಿ ನಾಗಪುರದಿಂದ ಆದೇಶ ಬರಬೇಕು ಹೀಗಾಗಿ ಪರಿಶಿಷ್ಟ ಎಡಗೈ ಸಮುದಾಯದವರು ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಆ ಮೂಲಕ ಸಂವಿಧಾನಕ್ಕೆ ಅಪಮಾನ ಮಾಡುವ ಕೋಮುವಾದಿ, ಮನುವಾದಿಗಳ ಕುರಿತು ಜನರು ಜಾಗೃತರಾಗಬೇಕಿದೆ ಎಂದು ವಿವರಿಸಿದರು. ಕೆಪಿಸಿಸಿ ವಕ್ತಾರ ರಮೇಶ್ ಬಾಬು ಮಾತನಾಡಿ, ಇಂದು ಕೆಪಿಸಿಸಿ ಪಕ್ಷದ ವತಿಯಿಂದ ಚುನಾವಣಾ ಆಯೋಗಕ್ಕೆ ಬಿಜೆಪಿ ವಿರುದ್ಧ ಎರಡು ದೂರು ದಾಖಲಿಸಲಾಗಿದೆ. ಬಿಜೆಪಿ ದಾರಿ ತಪ್ಪಿಸುವ ಜಾಹೀರಾತಿನ ವಿರುದ್ಧ ಕ್ರಮಕೈಗೊಳ್ಳಬೇಕು, ಈ ಮೂಲಕ ಬಿಜೆಪಿ ಎಸಗಿರುವ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ಸುಧಾಮ್ ದಾಸ್ ಅವರು ದೂರು ನೀಡಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ:ಎಲೆಕ್ಷನ್, ಸೆಲೆಕ್ಷನ್, ಕರೆಕ್ಷನ್ ನಮ್ಮ ಸೂತ್ರ.. 110 ಕ್ಷೇತ್ರದಲ್ಲಿ ಪ್ರಜಾಕೀಯ ಸ್ಪರ್ಧೆ - ಉಪೇಂದ್ರ ಮಾಹಿತಿ