ಕರ್ನಾಟಕ

karnataka

ETV Bharat / state

10 ಲಕ್ಷ ಮಕ್ಕಳು ಶಾಲೆ ಬಿಟ್ಟು ಭಿಕ್ಷಾಟನೆ: ಸಚಿವ ನಾಗೇಶ್‌ ರಾಜೀನಾಮೆಗೆ ಭಾಸ್ಕರ್‌ ರಾವ್‌ ಆಗ್ರಹ! - Bhaskar Rao on education

ಮಕ್ಕಳು ಶಿಕ್ಷಣದಿಂದ ದೂರ ಉಳಿದು ಭಿಕ್ಷಾಟನೆಯಲ್ಲಿ ತೊಡಗಿಕೊಳ್ಳುವಂತೆ ಮಾಡಿದ ಶಿಕ್ಷಣ ಸಚಿವರು ರಾಜೀನಾಮೆ ನೀಡಬೇಕೆಂದು ಭಾಸ್ಕರ್‌ ರಾವ್‌ ಆಗ್ರಹಿಸಿದ್ದಾರೆ.

Bhaskar Rao urging for resignation of Minister Nagesh
ಸಚಿವ ನಾಗೇಶ್‌ ರಾಜೀನಾಮೆಗೆ ಭಾಸ್ಕರ್‌ ರಾವ್‌ ಆಗ್ರಹ

By

Published : Jul 8, 2022, 6:36 PM IST

ಬೆಂಗಳೂರು: ಸರ್ಕಾರಿ ಶಾಲೆಗಳ ಬಗ್ಗೆ ತೀವ್ರ ನಿರ್ಲಕ್ಷ್ಯ ವಹಿಸಿ 10 ಲಕ್ಷ ಮಕ್ಕಳು ಶಿಕ್ಷಣದಿಂದ ದೂರ ಉಳಿದು ಭಿಕ್ಷಾಟನೆಯಲ್ಲಿ ತೊಡಗಿಕೊಳ್ಳುವಂತೆ ಮಾಡಿದ ಶಿಕ್ಷಣ ಸಚಿವ ಬಿ.ಸಿ ನಾಗೇಶ್‌ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಆಮ್‌ ಆದ್ಮಿ ಪಕ್ಷದ ರಾಜ್ಯ ಉಪಾಧ್ಯಕ್ಷ ಭಾಸ್ಕರ್‌ ರಾವ್‌ ಆಗ್ರಹಿಸಿದರು.

ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 14 ವರ್ಷದೊಳಗಿನ 10.12 ಲಕ್ಷ ಮಕ್ಕಳು ಶಾಲೆ ಮತ್ತು ಅಂಗನವಾಡಿಯಿಂದ ಹೊರಗುಳಿದಿದ್ದಾರೆ ಎಂಬ ಆತಂಕಕಾರಿ ವರದಿಯನ್ನು ವಿವಿಧ ಇಲಾಖೆಗಳು ಹೈಕೋರ್ಟ್‌ಗೆ ಸಲ್ಲಿಸಿವೆ. ರಾಜಧಾನಿ ಬೆಂಗಳೂರಿನಲ್ಲಿ ಭಿಕ್ಷಾಟನೆ ಮಾಡುತ್ತಿರುವ 534 ಮಕ್ಕಳು ಹಾಗೂ ವ್ಯಾಪಾರದಲ್ಲಿ ತೊಡಗಿಕೊಂಡಿರುವ 186 ಮಕ್ಕಳು ಸೇರಿದಂತೆ ಒಟ್ಟು 720 ಮಕ್ಕಳು ಶಿಕ್ಷಣದಿಂದ ವಂಚಿತರಾಗಿರುವುದನ್ನು ಬಿಬಿಎಂಪಿ ಗುರುತಿಸಿದೆ.

ಮಕ್ಕಳನ್ನು ಆಕರ್ಷಿಸಲು ಶಿಕ್ಷಣ ಇಲಾಖೆ ಸಂಪೂರ್ಣ ವಿಫಲವಾಗುತ್ತಿದ್ದು, ಶಿಕ್ಷಣ ಸಚಿವ ಬಿ.ಸಿ ನಾಗೇಶ್‌ ಈ ಬಗ್ಗೆ ಜಾಣಕುರುಡು ತೋರುತ್ತಿದ್ದಾರೆ. ನಾಗೇಶ್‌ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿ, ಸಚಿವ ಸಂಪುಟದಿಂದ ವಜಾ ಮಾಡುವಂತೆ ಮನವಿ ಮಾಡಲು ನಿರ್ಧರಿಸಿದ್ದೇವೆ ಎಂದು ಹೇಳಿದರು.

ಹಿಜಾಬ್‌-ಕೇಸರಿಶಾಲು ವಿವಾದ, ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ ಮುಂತಾದುವುಗಳಲ್ಲೇ ಶಿಕ್ಷಣ ಸಚಿವರು ಕಾಲಹರಣ ಮಾಡುತ್ತಿದ್ದಾರೆ. ಶಾಲಾ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ನೀಡಲಾಗುತ್ತಿದ್ದ ಸೈಕಲ್‌, ಶೂ, ಸಾಕ್ಸ್‌ ಮುಂತಾದವುಗಳನ್ನು ಈ ಬಾರಿ ನೀಡದಿರುವಂತೆ ಬಿಜೆಪಿ ಸರ್ಕಾರದ ನಿರ್ಧಾರ ಖಂಡನೀಯ. ಬಹುತೇಕ ಸರ್ಕಾರಿ ಶಾಲೆಗಳ ಕಟ್ಟಡಗಳು ದುಃಸ್ಥಿತಿಯಲ್ಲಿದ್ದು, ವಿದ್ಯಾರ್ಥಿಗಳು ಆತಂಕದಿಂದ ತರಗತಿಗಳಲ್ಲಿ ಕೂರಬೇಕಾಗಿದೆ. ಶಾಲೆಗಳಲ್ಲಿ ಶೌಚಾಲಯ, ಶುದ್ಧ ಕುಡಿವ ನೀರು, ಆಟದ ಮೈದಾನ ಮುಂತಾದ ಮೂಲಸೌಕರ್ಯಗಳು ತೀವ್ರ ನಿರ್ಲಕ್ಷ್ಯಕ್ಕೆ ಒಳಗಾಗಿವೆ. ವಿದ್ಯಾಸಿರಿ, ಕ್ಷೀರಭಾಗ್ಯ, ಬಿಸಿಯೂಟ ಮುಂತಾದ ಯೋಜನೆಗಳನ್ನೂ ಸರ್ಕಾರ ಸರಿಯಾಗಿ ನಿರ್ವಹಿಸುತ್ತಿಲ್ಲ ಎಂದು ಭಾಸ್ಕರ್‌ ರಾವ್‌ ಆರೋಪಿಸಿದರು.

ಇದನ್ನೂ ಓದಿ:ಬೆಂಗಳೂರು: ಪಾಲಿಕೆ ವ್ಯಾಪ್ತಿಯ 19 ಕೆರೆಗಳು ಕಣ್ಮರೆ

ವಿದ್ಯಾರ್ಥಿಗಳಿಗೆ ಕನ್ನಡ ಪುಸ್ತಕ ಸಿಕ್ಕಿಲ್ಲ:ಈ ಸಂದರ್ಭದಲ್ಲಿ ಆಮ್‌ ಆದ್ಮಿ ಪಾರ್ಟಿಯ ಮಹಿಳಾ ಘಟಕದ ಅಧ್ಯಕ್ಷೆ ಕುಶಲ ಸ್ವಾಮಿ ಮಾತನಾಡಿ, ತರಗತಿಗಳು ಆರಂಭವಾಗಿ ಎರಡು ತಿಂಗಳಾದರೂ ವಿದ್ಯಾರ್ಥಿಗಳಿಗೆ ಕನ್ನಡ ಪುಸ್ತಕ ಇನ್ನೂ ಸಿಕ್ಕಿಲ್ಲ. ಕಳೆದ ಸೆಮಿಸ್ಟರ್‌ನಲ್ಲಿ ಪರೀಕ್ಷೆಗೆ ಕೇವಲ ಎರಡು ವಾರಗಳು ಇರುವಾಗ ಪುಸ್ತಕ ನೀಡಲಾಗಿತ್ತು.

ಈ ಬಾರಿಯೂ ಅದೇ ರೀತಿಯ ಅವ್ಯವಸ್ಥೆಯಾಗುವ ಲಕ್ಷಣಗಳು ಗೋಚರಿಸುತ್ತಿವೆ. ಪಠ್ಯಕ್ರಮದ ಪಿಡಿಎಫ್‌ ಕೂಡ ನೀಡದೇ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರನ್ನು ಗೊಂದಲದಲ್ಲಿ ಸಿಲುಕಿಸಲಾಗಿದೆ. ಅಂಗನವಾಡಿ, ಶಾಲೆ, ಕಾಲೇಜು ಎಂಬ ಭೇದವಿಲ್ಲದೇ ಇಡೀ ಶೈಕ್ಷಣಿಕ ವಲಯವೇ ಬಿಜೆಪಿ ಸರ್ಕಾರದಿಂದ ಶೋಚನೀಯ ಸ್ಥಿತಿಗೆ ತಲುಪಿದೆ ಎಂದು ಹೇಳಿದರು.

ABOUT THE AUTHOR

...view details