ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ವಿಧ್ವಂಸಕ ಕೃತ್ಯವೆಸಗಲು ಸಂಚು ರೂಪಿಸುತ್ತಿದ್ದ ಗಂಭೀರ ಆರೋಪದಡಿ ಐವರು ಶಂಕಿತ ಉಗ್ರರನ್ನು ನಗರ ಪೊಲೀಸರು ಇಂದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಸ್ ನಿಲ್ದಾಣ ಸೇರಿದಂತೆ ನಗರದ ಜನಸಂದಣಿ ಪ್ರದೇಶಗಳಲ್ಲಿ ಬಾಂಬ್ ಸ್ಫೋಟಿಸಲು ಹೊಂಚು ಹಾಕುತ್ತಿದ್ದ ಆರೋಪದಡಿ ಸುಹೇಲ್, ಉಮರ್, ಜಾಹಿದ್, ಮುದಾಸಿರ್ ಹಾಗೂ ಫೈಜರ್ ಎಂಬವರನ್ನು ಬಂಧಿಸಲಾಗಿದೆ. ಇವರಿಂದ 7 ಕಂಟ್ರಿಮೇಡ್ ಪಿಸ್ತೂಲ್ಗಳು, 45 ಜೀವಂತ ಗುಂಡುಗಳು, ವಾಕಿಟಾಕಿ ಸೆಟ್ಸ್, ಒಂದು ಡ್ರ್ಯಾಗರ್ ಹಾಗೂ 12 ಮೊಬೈಲ್ ಫೋನ್ಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ.
ಪ್ರಕರಣದಲ್ಲಿ ಶಾಮೀಲಾಗಿರುವ 2008ರ ಬೆಂಗಳೂರು ಸರಣಿ ಬಾಂಬ್ ಸ್ಫೋಟದ ಶಂಕಿತ ಉಗ್ರ ಟಿ. ನಜೀರ್ ಸದ್ಯ ಆತ ನ್ಯಾಯಾಂಗ ಬಂಧನಲ್ಲಿದ್ದಾನೆ. ಎರಡನೇ ಆರೋಪಿ ಜುನೈದ್ ಸದ್ಯ ತಲೆಮರೆಸಿಕೊಂಡಿದ್ದಾನೆ. ಹೆಚ್ಚಿನ ವಿಚಾರಣೆಗಾಗಿ ಬಂಧಿತ ಐವರನ್ನು ವಿಚಾರಣೆಗೊಳಪಡಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಮಾಹಿತಿ ನೀಡಿದ್ದಾರೆ.
ಯಾರು ಈ ಶಂಕಿತ ಉಗ್ರರು?: ಬಂಧಿತ ಶಂಕಿತ ಉಗ್ರರೆಲ್ಲರೂ ಹೆಬ್ಬಾಳ, ಆರ್.ಟಿ.ನಗರ ನಿವಾಸಿಗಳಾಗಿದ್ದಾರೆ. 2017ರಲ್ಲಿ ನೂರ್ ಅಹಮ್ಮದ್ ಎಂಬುವವರ ಕೊಲೆ ಪ್ರಕರಣದಲ್ಲಿ ಎರಡನೇ ಅರೋಪಿ ಜುನೈದ್ ಅಹಮದ್ (ಸದ್ಯ ವಿದೇಶದಲ್ಲಿ ತಲೆಮರೆಸಿಕೊಂಡಿರುವ) ಹಾಗೂ ಬಂಧಿತ ಆರೋಪಿಗಳನ್ನು ಆರ್.ಟಿ. ನಗರ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದರು. ಕಾರಾಗೃಹದಲ್ಲಿದ್ದಾಗ 2008ರ ಬೆಂಗಳೂರು ಸರಣಿ ಬಾಂಬ್ ಸ್ಫೋಟದ ಆರೋಪಿ ಟಿ. ನಜೀರ್ನ ಪರಿಚಯವಾಗಿದೆ. ಈತ ನಿಷೇಧಿತ ಲಷ್ಕರ್ ಎ ತೊಯ್ಬಾ (ಎಲ್ಇಟಿ) ಉಗ್ರ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ. ಈ ವಿಧ್ವಂಸಕ ಕೃತ್ಯಗಳ ಸಂಚಿಗೆ ಮಾಸ್ಟರ್‌ಮೈಂಡ್ ಅವನೇ ಆಗಿದ್ದರಿಂದ ಕಾಲಕ್ರಮೇಣ ಬಂಧಿತ ಆರೋಪಿಗಳಿಗೆ ಬ್ರೈನ್ ವಾಶ್ ಮಾಡಿದ್ದ. 18 ತಿಂಗಳ ಕಾಲ ಜೈಲಿನಲ್ಲಿರುವಾಗ ಮಾನಸಿಕವಾಗಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಪ್ರೇರಣೆ ನೀಡಿದ್ದ. 2019ರಲ್ಲಿ ಜಾಮೀನು ಪಡೆದು ಹೊರಬಂದ ಆರೋಪಿಗಳು, ನಗರದಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದರು.