ಬೆಂಗಳೂರು: ನಗರದ ಬನಶಂಕರಿ, ಜಯನಗರ ಮತ್ತು ಬೆಂಗಳೂರು ದಕ್ಷಿಣ ಭಾಗಗಳಲ್ಲಿ ಕುಖ್ಯಾತ ರೌಡಿಯಾಗಿದ್ದ ಅಲ್ಯೂಮಿನಿಯಂ ಬಾಬು ಶವ ತಮಿಳುನಾಡಿನ ತಳಿ - ಡೆಂಕಣಿಕೋಟೆ ಕಾಡಿನಲ್ಲಿ ಸಿಕ್ಕಿದೆ. ಪ್ಲಾಸ್ಟಿಕ್ ಚೀಲದಲ್ಲಿ ಅರೆಸುಟ್ಟ ದೇಹವನ್ನು ತಾಳೆ ಪೊದೆಯಲ್ಲಿ ಬಚ್ಚಿಟ್ಟು ಕೊಲೆಗಾರರು ಪರಾರಿಯಾಗಿದ್ದಾರೆ. ಬಾಬುವನ್ನು ಕಾರಿನಲ್ಲೇ ಕಿಡ್ನ್ಯಾಪ್ ಮಾಡಿದ್ರಾ ಅಥವಾ ಬಾಬುವಿನ ಬೈಕ್ ಅಪಘಾತ ಮಾಡಿ ಕೊಲೆ ಮಾಡಿದರಾ ಎಂಬುದನ್ನು ಪೊಲೀಸರೇ ಪತ್ತೆ ಹಚ್ಚಬೇಕಿದೆ.
ಬೆಂಗಳೂರಿನ ಪಾತಕ ಲೋಕದ ಅರಸಯ್ಯ - ಜಲ್ಲಿ ವೆಂಕಟೇಶ್ ಸಿಂಡಿಕೇಟ್ನಲ್ಲಿ ಗುರುತಿಸಿಕೊಂಡಿದ್ದ ರೌಡಿ, ಅಲ್ಯೂಮಿನಿಯಂ ರೌಡಿ ಎಂದೇ ಕುಖ್ಯಾತಿಯಾಗಿದ್ದ. ಈಗ ಅರಸಯ್ಯ-ಜಲ್ಲಿ ವೆಂಕಟೇಶ್ ಇಲ್ಲವಾಗಿದ್ದರಿಂದ ಇತ್ತೀಚೆಗೆ ಐದಾರು ವರ್ಷಗಳಿಂದ ಕೊತ್ತನೂರು ದಿನ್ನೆಯಲ್ಲಿ ಸಿಮೆಂಟ್ ಹಾಲೋ ಬ್ಲಾಕ್ ಇಟ್ಟಿಗೆ ಕಾರ್ಖಾನೆ ನಡೆಸುತ್ತಾ ಬದುಕು ಸಾಗಿಸುತ್ತಿದ್ದ. ಇಂದು ತಮಿಳುನಾಡು ತಳಿ ಪೊಲೀಸರಿಗೆ ಕಾಡಿನಲ್ಲಿ ಅರೆ ಸುಟ್ಟ ಸ್ಥಿತಿಯಲ್ಲಿ ಶವವೊಂದು ಪತ್ತೆಯಾಗಿರುವ ಕುರಿತು ಮಾಹಿತಿ ದೊರಕಿದ್ದರಿಂದ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು.
ಬೈಕ್ನಲ್ಲಿ ಬಾಬು ಹೋಗುವ ವೇಳೆ ಕಾರಿನಲ್ಲಿ ಹಿಂಬದಿಯಿಂದ ಡಿಕ್ಕಿ ಹೊಡೆದು ಕೊಲೆ ಮಾಡಿ ತಮಿಳುನಾಡಿನ ಕಾಡಿನಲ್ಲಿ ತಂದು ಸುಳಿವಿಲ್ಲದಂತೆ ಸುಡಲು ಇನ್ನಿಲ್ಲದ ಪ್ರಯತ್ನ ನಡೆಸಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ ಎಂದು ಮೂಲಗಳು ತಿಳಿಸಿವೆ. ಬಾಬು ಸಹಚರ ವಲಯದಲ್ಲಿ ಬೆಂಗಳೂರಿನ ಶಾಸಕರೊಬ್ಬರ ಕೈವಾಡ ಕೊಲೆಯ ಹಿಂದಿದೆ ಎಂಬ ಗುಸು-ಗುಸು ಸಹ ಕೇಳಿ ಬರುತ್ತಿದೆ. ಕೊಲೆಯನ್ನು ತಮಿಳುನಾಡು ತಳಿ ಪೊಲೀಸರು ಪ್ರಕರಣ ಬೇಧಿಸಿ ಸತ್ಯ ಹೊರಹಾಕಬೇಕಿದೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಇದನ್ನೂ ಓದಿ:ಸೋಷಿಯಲ್ ಮೀಡಿಯಾಗಳಲ್ಲಿ ಪ್ರಚೋದನಾಕಾರಿ ಪೋಸ್ಟ್ ಮಾಡಿದ್ರೆ ಕಠಿಣ ಕ್ರಮ: ಮಂಗಳೂರು ಪೊಲೀಸ್ ಕಮಿಷನರ್ ಎಚ್ಚರಿಕೆ