ಬೆಂಗಳೂರು: ಶನಿವಾರ ರಾತ್ರಿಯಿಂದ ಆರಂಭವಾಗಿರುವ ನೈಟ್ ಕರ್ಫ್ಯೂ ಮಹದೇವಪುರ ಮತ್ತು ಕೆ ಆರ್ ಪುರಂನಲ್ಲಿ ಉತ್ತಮ ಪ್ರತಿಕ್ರಿಯೆ ದೊರೆತಿದ್ದು ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿತ್ತು. ಮತ್ತು ಬೆಂಗಳೂರು ಹೊರವಲಯ ಹೆದ್ದಾರಿಗಳನ್ನು ಬಂದ್ ಮಾಡಲಾಗಿದ್ದು, ಎಲ್ಲ ವಾಹನಗಳು ಸರ್ವಿಸ್ ರಸ್ತೆಗಳಲ್ಲಿ ಹೊರಡುತ್ತಿದ್ದರಿಂದ ಕೆಲವು ಕಡೆ ಟ್ರಾಫಿಕ್ ಉಂಟಾಯ್ತು.
ಕೆ ಆರ್ ಪುರ ಮತ್ತು ಮಹದೇವಪುರದ ಎಲ್ಲಾ ಮೇಲ್ಸೇತುವೆಗಳನ್ನು ಬಂದ್ ಮಾಡಲಾಗಿತ್ತು. ರಸ್ತೆಯಲ್ಲಿ ಬೇರೆ ರಾಜ್ಯಗಳಿಗೆ ಹೊರಡುವ ಪ್ರಯಾಣಿಕರನ್ನು ಬಿಟ್ಟರೆ ಬೇರೆ ಯಾವ ಜನರು ರಸ್ತೆಯಲ್ಲಿ ಕಂಡು ಬರಲಿಲ್ಲ. ಕೆಲವು ವಾಹನಗಳು ಮಾತ್ರ ರಸ್ತೆಯಲ್ಲಿ ಓಡಾಡುತ್ತಿರುವುದು ಕಂಡುಬಂದ ಹಿನ್ನೆಲೆ ಕಾರು ಮತ್ತು ದ್ವಿಚಕ್ರ ವಾಹನ ಸವಾರರಿಗೆ ಪೊಲೀಸರು ಎಚ್ಚರಿಕೆ ನೀಡಿ ಮನೆಗೆ ಕಳಿಸಿದ್ರು.
ಬೀದಿ ವ್ಯಾಪಾರಿಗಳ ವಾಹನಗಳನ್ನು ಮತ್ತು ರಸ್ತೆ ಬದಿಯ ಹೋಟೆಲ್ಗಳನ್ನು ಮುಚ್ಚುವಂತೆ ತಿಳಿಸಿ ಕೆಲವು ಕಡೆ ಪೊಲೀಸರು ಸ್ಥಳದಲ್ಲಿ ನಿಂತು ಅಂಗಡಿಗಳಿಗೆ ಬೀಗ ಹಾಕಿಸಿದರು. ಪೊಲೀಸರು ಹೊಯ್ಸಳ ಮತ್ತು ದ್ವಿಚಕ್ರ ವಾಹನಗಳಲ್ಲಿ ಬೀದಿಬೀದಿಗಳಲ್ಲಿ ಸಂಚರಿಸಿ ಯಾರೂ ಮನೆ ಹೊರಗೆ ಬಾರದ ರೀತಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ರು.
ಬೆಂಗಳೂರಿನಲ್ಲಿ ನೈಟ್ಕರ್ಫ್ಯೂ ಪೊಲೀಸ್ ಆಯುಕ್ತರ ಎಚ್ಚರಿಕೆ:
ರಾತ್ರಿ 10 ಗಂಟೆ ನಂತರ ಪಬ್, ಬಾರ್ ಅಂಡ್ ರೆಸ್ಟೋರೆಂಟ್, ಹೋಟೆಲ್ ಚಟುವಟಿಕೆ ಮೇಲೆ ನಿಯಂತ್ರಣ ಹೇರಲಾಗಿತ್ತು. ಈ ಮಧ್ಯೆ, ಕೊರೊನಾ ಕರ್ಫ್ಯೂ ಹಿನ್ನೆಲೆಯಲ್ಲಿ ಅನಾವಶ್ಯಕವಾಗಿ ವಾಹನದಲ್ಲಿ ತಿರುಗಾಡಿದರೆ, ವಾಹನ ಸೀಜ್ ಮಾಡಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ವಾಹನ ಸವಾರರಿಗೆ ಎಚ್ಚರಿಕೆ ನೀಡಿದ್ದರು. ನಗರದಾದ್ಯಂತ 180 ಕಡೆ ಚೆಕ್ ಪಾಯಿಂಟ್‌ಗಳನ್ನು ನಿರ್ಮಾಣ ಮಾಡಲಾಗಿದ್ದು, ಕೊರೊನಾ ಕರ್ಫ್ಯೂ ಮಾರ್ಗಸೂಚಿ ಉಲ್ಲಂಘನೆ ಮಾಡಿದರೆ, ವಾಹನಗಳನ್ನು ಜಪ್ತಿ ಮಾಡಲಾಗುವುದು ಎಂದು ವಾಹನ ಸವಾರರಿಗೆ ಎಚ್ಚರಿಸಿದ್ದರು.
ರಾತ್ರಿ ವೇಳೆ ಕಾರಣ ಇಲ್ಲದೆ ಅನಗತ್ಯವಾಗಿ ಓಡಾಟ ಮಾಡುವ ಸಾರ್ವಜನಿಕರು ಹಾಗೂ ವಾಹನಗಳ ಬಗ್ಗೆ ನಿಗಾ ವಹಿಸಿ ಕ್ರಮ ಕೈಗೊಳ್ಳಬೇಕು. ಕಾನೂನು ಮೀರಿದವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ನಿರ್ದೇಶನ ಕೊಟ್ಟಿದ್ದರು.
ರಾತ್ರಿ ಎಲ್ಲೆಲ್ಲಿ ಪ್ರಮುಖ ಮೇಲ್ಸೇತುವೆಗಳು ಬಂದ್.? ಯಾವ ಪ್ರಮುಖ ಸ್ಥಳಗಳಲ್ಲಿ ಪೊಲೀಸ್ ನಾಕಾಬಂಧಿ..?
ನಗರದಲ್ಲಿ ಕೊರೊನಾ ಕರ್ಫ್ಯೂ ನಿನ್ನೆಯಿಂದ ಆರಂಭವಾಗಿದ್ದು, ಈ ಹಿನ್ನೆಲೆ ರಾತ್ರಿ 9.30ರ ನಂತರ ನಗರದ ಪ್ರಮುಖ ರಸ್ತೆಗಳು, ಮೇಲ್ಸೇತುವೆಗಳು ಬಂದ್ ಆಗಿವೆ.
ಬಂದ್ ಆಗಿರುವ ಸ್ಥಳಗಳಲ್ಲಿ ನಾಕಬಂದಿ ಹಾಕಿ ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿದೆ. ರಾತ್ರಿ 10 ಗಂಟೆ ಮೇಲೆ ಯಾರಾದರೂ ಅನಗತ್ಯವಾಗಿ ಓಡಾಡುತ್ತಿರುವುದು ಕಂಡು ಬಂದರೆ ಅಂತವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಾಹನಗಳನ್ನ ಸೀಜ್ ಮಾಡುತ್ತಿರುವುದು ಕಂಡುಬಂತು. ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ಕರ್ಫ್ಯೂ ಇತ್ತು.
ರಾಜಧಾನಿಯ ಯಾವ ವಿಭಾಗದಲ್ಲಿ ಎಲ್ಲೆಲ್ಲಿ ಪ್ರಮುಖ ನಾಕಾಬಂದಿ ವಿವರ:
ಆಗ್ನೆಯ ವಿಭಾಗ:
1. ವೀರಸಂದ್ರ ಚೆಕ್ಪೋಸ್ಟ್
2. ಬೊಮ್ಮನಹಳ್ಳಿ ಚೆಕ್ಪೋಸ್ಟ್
3. ಸಿಲ್ಕ್ ಬೋರ್ಡ್
4. ಮಡಿವಾಳ
5. ಸೇಂಟ್ ಜಾನ್ಸ್
6. ಆಡುಗೋಡಿ ಜಂಕ್ಷನ್
7. ಕೋರಮಂಗಲ ಎನ್ ಜಿವಿ ಕಾಂಪ್ಲೆಕ್ಸ್
ಪಶ್ಚಿಮ ವಿಭಾಗ:
1. ಮಾರುಕಟ್ಟೆ ಮೇಲ್ಸೇತುವೆ
2. ಮಾರುಕಟ್ಟೆ ಸರ್ಕಲ್
3. ಮೈಸೂರು ರಸ್ತೆ
4. ಕೆಂಗೇರಿ ಮುಖ್ಯರಸ್ತೆ
5. ಕೆ. ಪಿ. ಅಗ್ರಹಾರ
6. ಮಾಗಡಿ ರೋಡ್
ಈಶಾನ್ಯ ವಿಭಾಗ:
1. ಏರ್ಪೋರ್ಟ್ ರೋಡ್
2. ಹೆಬ್ಬಾಳ ಮೇಲ್ಸೇತುವೆ
3. ಸಂಪಿಗೆ ಹಳ್ಳಿ
4. ವಿದ್ಯಾರಣ್ಯಪುರ ಸರ್ಕಲ್
5. ಬಿಇಎಲ್ ಸರ್ಕಲ್
6. ಯಲಹಂಕ ಮುಖ್ಯರಸ್ತೆ
ಪೂರ್ವ ವಿಭಾಗ:
1. ಟ್ರಿನಿಟಿ ಸರ್ಕಲ್
2. ಬಿಆರ್ವಿ ಜಂಕ್ಷನ್
3. ನಾಗವಾರ ಜಂಕ್ಷನ್
4. ಬಾಣಸವಾಡಿ
5. ಕಮ್ಮನಹಳ್ಳಿ ರೋಡ್
6. ಮಣಿಪಾಲ್ ಹಾಸ್ಪಿಟಲ್ ಜಂಕ್ಷನ್
7. ಒಲ್ ಏರ್ಪೋರ್ಟ್ ರೋಡ್
ಕೇಂದ್ರ ವಿಭಾಗ:
1. ಕೆ.ಆರ್ ಸರ್ಕಲ್
2. ಟೌನ್ ಹಾಲ್
3. ಚಿನ್ನಸ್ವಾಮಿ ಸ್ಟೇಡಿಯಂ
4. ಕಾರ್ಪೋರೇಷನ್ ಸರ್ಕಲ್
ಉತ್ತರ ವಿಭಾಗ:
1. ಯಶವಂತಪುರ ಸರ್ಕಲ್
2. ತುಮಕೂರು ರಸ್ತೆ
3. ಗಂಗಮ್ಮಗುಡಿ ಸರ್ಕಲ್
4. ಗೊರಗುಂಟೆ ಪಾಳ್ಯ
5. ಪೀಣ್ಯ
ಏಪ್ರಿಲ್ 10ರಿಂದ ಪ್ರಾರಂಭವಾಗಿರುವ ಈ ನೈಟ್ ಕರ್ಫ್ಯೂ ಏಪ್ರಿಲ್ 20ರ ವರೆಗೆ ರಾಜ್ಯಾದ್ಯಂತ ರಾತ್ರಿ 10 ರಿಂದ ಬೆಳಗ್ಗೆ 5 ಗಂಟೆವರೆಗೆ ಜಾರಿಯಲ್ಲಿರಲಿದೆ.