ಕರ್ನಾಟಕ

karnataka

ETV Bharat / state

ಬೆಂಗಳೂರು: ಕೌಟುಂಬಿಕ ಕಲಹ ಸರಿಪಡಿಸುವುದಾಗಿ ಮಾಂಗಲ್ಯ ಸರ ಕದ್ದೊಯ್ದ ನಕಲಿ ಸ್ವಾಮೀಜಿ! - Bengaluru Crime

ಪೂಜೆಯ ನೆಪದಲ್ಲಿ ಆಗಮಿಸಿದ್ದ ಸ್ವಾಮೀಜಿಯೊಬ್ಬ ಮಹಿಳೆಯ ಮಾಂಗಲ್ಯ ಸರವನ್ನು ಕಳ್ಳತನ ಮಾಡಿದ್ದಾನೆ. ಬೆಂಗಳೂರಿನಲ್ಲಿ ಘಟನೆ ನಡೆದಿದೆ.

ಮಾಂಗಲ್ಯ ಕದ್ದೊಯ್ದ ಕಳ್ಳ ಸ್ವಾಮೀಜಿ
ಮಾಂಗಲ್ಯ ಕದ್ದೊಯ್ದ ಕಳ್ಳ ಸ್ವಾಮೀಜಿ

By ETV Bharat Karnataka Team

Published : Aug 25, 2023, 6:09 PM IST

ಬೆಂಗಳೂರು : ಕೌಟುಂಬಿಕ ಕಲಹ ಸರಿಪಡಿಸಲು ಪೂಜೆ ಮಾಡುವ ನೆಪದಲ್ಲಿ ತಮಿಳುನಾಡಿನಿಂದ ಬಂದ ನಕಲಿ ಸ್ವಾಮೀಜಿಯೊಬ್ಬ 2.40 ಲಕ್ಷ ರೂ. ಮೌಲ್ಯದ ಮಾಂಗಲ್ಯ ಸರ ಕದ್ದೊಯ್ದಿರುವ ಘಟನೆ ಇಂದಿರಾನಗರ ಪೊಲೀಸ್​ ಠಾಣಾ ವ್ಯಾಪ್ತಿಯ ಕದಿರಯ್ಯನಪಾಳ್ಯದಲ್ಲಿ ನಡೆದಿದೆ. ಮಾಂಗಲ್ಯ ಸರ ಕಳೆದುಕೊಂಡ ಸುಗುಣಾ ಎಂಬವರು ನೀಡಿರುವ ದೂರಿನನ್ವಯ ಇಂದಿರಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೌಟುಂಬಿಕ ಕಲಹದಿಂದ ಬೇಸತ್ತಿದ್ದ ಸುಗುಣ, ತಮಿಳುನಾಡು ಮೂಲದ ರಾಜ ಎಂಬ ಸ್ವಾಮೀಜಿಯನ್ನು ಫೋನ್ ಮೂಲಕ ಸಂಪರ್ಕಿಸಿದ್ದರು. "ಮನೆಗೆ ಬಂದು ಪೂಜೆ ಸಲ್ಲಿಸಿ ಸಮಸ್ಯೆ ನಿವಾರಣೆ ಮಾಡುತ್ತೇನೆ" ಎಂದಿದ್ದ ಆರೋಪಿ, ಆಗಸ್ಟ್ 13ರಂದು ಸುಗುಣಾರ ಮನೆಗೆ ಬಂದಿದ್ದಾನೆ. ಸಂಜೆ 4ರಿಂದ 4:45ರವರೆಗೂ ಮನೆಯೊಳಗೆ ಪೂಜೆ ಮಾಡಿ, ಬಳಿಕ ಪೂಜೆ ಸಲ್ಲಿಸಿದ್ದ ಸ್ಥಳದಲ್ಲಿ ಮಾಂಗಲ್ಯ ಸರವನ್ನು ಬಿಚ್ಚಿಡುವಂತೆ ಸೂಚಿಸಿದ್ದ. ಅದರಂತೆ ಸುಗುಣಾ ಸರವನ್ನು ಬಿಚ್ಚಿಟ್ಟಿದ್ದರು. ಬಳಿಕ ಮನೆಯ ಹೊರಗಡೆ ಪೂಜೆ ಸಲ್ಲಿಸಲು ಮಹಿಳೆ ಹೋದಾಗ ಆರೋಪಿ ಸರದ ಸಮೇತ ಪರಾರಿಯಾಗಿದ್ದಾನೆ. ಇಂದಿರಾನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ :ಮಂಗಳೂರು: ಲೋನ್ ಆ್ಯಪ್​ನಲ್ಲಿ ಸಾಲ ಪಡೆದ ಮಹಿಳೆಗೆ ನಗ್ನ ಫೋಟೋ ಹರಿಬಿಡುವ ಬೆದರಿಕೆ

ವೃದ್ಧೆ ಹಿಂಬಾಲಿಸಿ ಸರಗಳ್ಳತನ: ಆಗಸ್ಟ್ 9ರ ರಾತ್ರಿ 8:30ರ ವೇಳೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೃದ್ಧೆಯನ್ನು ಹಿಂಬಾಲಿಸಿದ ಖದೀಮನೊಬ್ಬ ಸರ ಕಸಿದುಕೊಂಡು ಪರಾರಿಯಾದ ಘಟನೆ ನಗರ ಎನ್ಆರ್​ಐ ಬಡಾವಣೆಯ 5ನೇ ಕ್ರಾಸ್​ನ ಮಾರುತಿ ಪ್ರತೀಕ್ ಅಪಾರ್ಟ್​ಮೆಂಟ್ ಮುಂಭಾಗದಲ್ಲಿ ನಡೆದಿತ್ತು. ಮೊಮ್ಮಗಳ ಜೊತೆ ನಡೆದುಕೊಂಡು ಹೋಗುತ್ತಿದ್ದ ವೃದ್ಧೆಯನ್ನು ಫಾಲೋ ಮಾಡಿದ ಸರಗಳ್ಳ, ಹಿಂಬದಿಯಿಂದ ಕೈಹಾಕಿ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಎಳೆದಿದ್ದನು. ಸರ ಎಳೆದ ರಭಸಕ್ಕೆ ವೃದ್ದೆ ಕೆಳಗೆ ಬಿದ್ದಿದ್ದು, ಕ್ಷಣ ಮಾತ್ರದಲ್ಲಿ ಖದೀಮ ಸ್ಥಳದಿಂದ ಪರಾರಿಯಾಗಿದ್ದನು. ಈ ಸರಗಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿತ್ತು. ಈ ಬಗ್ಗೆ ರಾಮಮೂರ್ತಿನಗರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ನಟ ಮಾಸ್ಟರ್ ಆನಂದ್​ಗೆ 18.5 ಲಕ್ಷ ರೂ ವಂಚನೆ: ಜೂನ್​ ತಿಂಗಳು ಅಭಿಮಾನಿ ಎಂದು ಪರಿಚಯವಾದ ಉದ್ಯಮಿಯೊಬ್ಬರಿಂದ ನಟ ಮಾಸ್ಟರ್ ಆನಂದ್​ಗೆ 18.5 ಲಕ್ಷ ರೂ. ವಂಚಿಸಿದ ಪ್ರಕರಣ ಚಂದ್ರಾಲೇಔಟ್ ಠಾಣೆಯಲ್ಲಿ ದಾಖಲಾಗಿತ್ತು. ನಿವೇಶನ ನೀಡುವುದಾಗಿ ನಂಬಿಸಿ 2020ರ ಸೆಪ್ಟೆಂಬರ್​ ನಿಂದ 2021ರ ಅಕ್ಟೋಬರ್ ಅವಧಿಯಲ್ಲಿ 18.5 ಲಕ್ಷ ರೂ. ಹಣ ಪಡೆದು ವಂಚಿಸಿದ್ದಾರೆಂದು ಮಲ್ಟಿ ಲೀಪ್ ವೆಂಚರ್ಸ್ ಕಂಪನಿಯ ಸುಧೀರ್ ಹಾಗೂ ಅವರ ಆಪ್ತ ಸಹಾಯಕಿ ಮನಿಕಾ ಎಂಬವರ ವಿರುದ್ಧ ನಟ ದೂರು ನೀಡಿದ್ದರು.

ಇದನ್ನೂ ಓದಿ :'ಮದುವೆ ಭರವಸೆ ನೀಡಿ ವಂಚಿಸಿದ ಕಾನ್ಸ್​ಟೇಬಲ್'​: ಮೈಸೂರಿನಲ್ಲಿ ಪೊಲೀಸರಿಗೆ ದೂರು ನೀಡಿದ ವಿದ್ಯಾರ್ಥಿನಿ

ABOUT THE AUTHOR

...view details