ಬೆಂಗಳೂರು :ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುತ್ತಿರುವುದನ್ನು ಖಂಡಿಸಿ ಸೆಪ್ಟೆಂಬರ್ 26ರಂದು ಬೆಂಗಳೂರು ಬಂದ್‌ಗೆ ನಿರ್ಧರಿಸಲಾಗಿದೆ ಎಂದು ರೈತ ಮುಖಂಡ ಕುರುಬೂರು ಶಾಂತಕುಮಾರ್ ಘೋಷಿಸಿದ್ದಾರೆ. ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿರೋಧಿಸಿ, ಆಮ್ ಆದ್ಮಿ ಪಕ್ಷದ ನೇತೃತ್ವದಲ್ಲಿ ಇಂದು ನಗರದ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಸರ್ವ ಸಂಘಟನೆಗಳ ಕಾವೇರಿ ಹೋರಾಟದ ಜಾಗೃತಿ ಸಭೆಯಲ್ಲಿ ಸೆಪ್ಟೆಂಬರ್ 26ಕ್ಕೆ ಬೆಂಗಳೂರು ಬಂದ್ ಘೋಷಿಸಲಾಯಿತು.
ಕುಡಿಯುವ ನೀರಿನ ಅಗತ್ಯತೆ ಅರಿಯದೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನೀಡಿರುವ ಅವೈಜ್ಞಾನಿಕ ಆದೇಶ ಖಂಡಿಸಲು ಕರ್ನಾಟಕ ಜಲ ಸಂರಕ್ಷಣಾ ಸಮಿತಿಯ ರೈತ ಸಂಘಟನೆಗಳ ಒಕ್ಕೂಟ, ಕನ್ನಡಪರ ಸಂಘಟನೆಗಳ ಒಕ್ಕೂಟ, ಆಮ್ ಆದ್ಮಿ ಪಕ್ಷ, ಮತ್ತಿತರ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು ಒಟ್ಟಾಗಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಶನಿವಾರ ಕಾವೇರಿ ಹೋರಾಟದ ಜಾಗೃತಿ ಸಭೆ ನಡೆಸಿದರು.
ಬೆಂಗಳೂರಿನ ಜನ ಹೋರಾಟ ಮಾಡಲಿ :ಬೆಂಗಳೂರಿನಲ್ಲಿ 1.30 ಕೋಟಿ ಜನ ಇದ್ದು, ಇದರಲ್ಲಿ 65 ಲಕ್ಷ ಜನ ಅನ್ಯ ಭಾಷಿಕರು ಇದ್ದಾರೆ. ಅವರಿಗೂ ಕುಡಿಯುವ ನೀರಿನ ಅವಶ್ಯಕತೆ ಇದೆ. 45 ದಿನಗಳಿಂದ ಕಾವೇರಿ ನೀರಿಗಾಗಿ ಹೋರಾಟ ನಡೆಯುತ್ತಿದ್ದರೂ ಬೆಂಗಳೂರಿನ ಜನ ಮಲಗಿದ್ದಾರೆ. ಇದು ಸರಿಯಲ್ಲ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದರು. ಯಾವುದೇ ಭಾಷಿಕರು ಆದರೂ ಕುಡಿಯಲು ನೀರು ಮುಖ್ಯ. ಆದ್ದರಿಂದ ಎಲ್ಲರೂ ಈ ಹೋರಾಟಕ್ಕೆ ಕೈಜೋಡಿಸಬೇಕು ಎಂದು ಅವರು ಮನವಿ ಮಾಡಿದರು. ಜನರ ಬದುಕು ಮುಖ್ಯ, ಯಾವುದೇ ಆದೇಶ ಏನೂ ಮಾಡಲು ಆಗಲ್ಲ. ಕುಡಿಯುವ ನೀರಿಗೆ ಆದ್ಯತೆ ಎಂದು ಸುಪ್ರೀಂಕೋರ್ಟ್ ಹೇಳಿದೆ. ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಬಿಡುತ್ತಿದೆ ಎಂದರು.