ಬೆಂಗಳೂರು: ತಡೆ ಹಿಡಿದಿರುವ ಬಿಲ್ ಪಾವತಿಗೆ ಸರ್ಕಾರದ ಮೇಲೆ ಒತ್ತಡ ಹೇರುವಂತೆ ಬಿಬಿಎಂಪಿ ಕಾರ್ಯನಿರತ ಗುತ್ತಿಗೆದಾರರ ಸಂಘದಿಂದ ಬೆಂಗಳೂರು ಶಾಸಕರು, ಬಿಜೆಪಿ ಮುಖಂಡರ ಭೇಟಿ ಮುಂದುವರೆದಿದೆ. ಗುತ್ತಿಗೆದಾರರ ಸಂಘ ಮಾಜಿ ಡಿಸಿಎಂ ಆರ್ ಅಶೋಕ್ ಅವರನ್ನು ಭೇಟಿ ಮಾಡಿ ಹೋರಾಟಕ್ಕೆ ಬೆಂಬಲ ನೀಡುವಂತೆ ಕೋರಿದೆ.
ಕಾಮಗಾರಿಗಳ ಬಿಲ್ ಹಣ ಬಿಡುಗಡೆಗೆ ಕಮಿಷನ್ ಬೇಡಿಕೆ ಆರೋಪ ಮಾಡಿರುವ ಬಿಬಿಎಂಪಿ ಕಾರ್ಯನಿರತ ಗುತ್ತಿಗೆದಾರರ ಸಂಘ ಇದೀಗ ಬಾಕಿ ಬಿಲ್ ಬಿಡುಗಡೆಗೆ ಒತ್ತಾಯಿಸಿ ಬಿಜೆಪಿ ನಾಯಕರ ಮನೆ ಬಾಗಿಲು ತಟ್ಟುತ್ತಿದೆ. ರಾಜ್ಯಪಾಲರ ಭೇಟಿ ಮಾಡಿದ್ದ ಗುತ್ತಿಗೆದಾರರ ಸಂಘ ನಂತರ ಯಡಿಯೂರಪ್ಪ, ಸಿ ಟಿ ರವಿ ಅವರನ್ನು ಭೇಟಿ ಮಾಡಿ ಬಾಕಿ ಬಿಲ್ ಪಾವತಿ ವಿಳಂಬದ ಕುರಿತು ಪ್ರಸ್ತಾಪಿಸಿ ನೆರವು ಕೋರಿತ್ತು. ಇಂದು ಮಾಜಿ ಡಿಸಿಎಂ ಆರ್.ಅಶೋಕ್ ಅವರನ್ನು ಭೇಟಿಯಾಗಿ ಮನವಿ ಮಾಡಿದೆ.
ಗುತ್ತಿಗೆದಾರರ ನಿಯೋಗದ ಭೇಟಿ ನಂತರ ಮಾತನಾಡಿದ ಅಶೋಕ್, ಈಗ ಬಿಲ್ ಮೊತ್ತ ಬಿಡುಗಡೆ ಮಾಡುವುದಕ್ಕೆ 26 ಷರತ್ತುಗಳನ್ನು ಹಾಕಿದ್ದಾರೆ. 26 ಷರತ್ತುಗಳನ್ನು ಪೂರೈಸಲು 26 ವರ್ಷ ಬೇಕು. ಪಾರ್ಕ್ ನಲ್ಲಿ ಕಳೆ ಕಿತ್ತಿದ್ದು ಕಳೆ ಎಲ್ಲಿ ಹಾಕಿದ್ರಿ!? ಅದೆಲ್ಲಾ ತನಿಖೆ ಆಗಬೇಕಲ್ಲ. ಗೋಡೆಗೆ ಬಣ್ಣ ಬಳಿದಿದ್ರೆ ಈಗ ಹೇಗೆ ತನಿಖೆ ಮಾಡುತ್ತೀರಿ, ಇದನ್ನೆಲ್ಲಾ ಇಸ್ರೋದ ಸ್ಯಾಟ್ಲೈಟ್ ಮೂಲಕ ತನಿಖೆ ಮಾಡಿಸುತ್ತೀರಾ ಎಂದು ವ್ಯಂಗ್ಯವಾಡಿದರು.
ನಾನು ನಾಲ್ಕು ಬಾರಿ ಬೆಂಗಳೂರು ಉಸ್ತುವಾರಿ ಸಚಿವನಾಗಿದ್ದೆ. ನಾನು ಯಾವತ್ತು ವರ್ಗಾವಣೆ ಮಾಡುವಾಗ ನನ್ನ ಗಮನಕ್ಕೆ ತಂದು ಮಾಡಿ ಎಂದು ಹೇಳಿರಲಿಲ್ಲ. ಅಂದು ನಮ್ಮ ಸರ್ಕಾರದ ಮೇಲೆ ಪೇಸಿಎಂ ಅಂದ್ರಿ. ಈಗ ನಿಮ್ಮದು ಪೇಸಿಎಂ, ಪೇ ಡಿಸಿಎಂ ಎಂದು ಪ್ರಶ್ನಿಸಿದರು. ಕಾಂಟ್ರಾಕ್ಟರ್ ಎಲ್ಲಾ ಬಿಜೆಪಿಗರು ಅಂದ್ರಲ್ಲ. ಅವರೇನು ಆಕಾಶದಿಂದ ಈಗ ಇಳಿದವರಲ್ಲ. ಈ ಕಾಂಟ್ರಾಕ್ಟರ್ ಎಲ್ಲಾ ತಯಾರು ಮಾಡಿದ್ದು ನೀವೆ. ಇವರೆಲ್ಲಾ ಬಿಜೆಪಿ ಕಾಲದಲ್ಲಿ ಬಂದಂತ ಕಾಂಟ್ರಾಕ್ಟರ್ ಅಲ್ಲ. ನಿಮ್ಮ ಪ್ರಕಾರ ಗುತ್ತಿಗೆದಾರರು ಕಳ್ಳರು ಎಂದರೆ, ನೀವು ಏನು ದರೋಡೆಕೋರರಾ? ಎಂದು ಅಶೋಕ್ ವಾಗ್ದಾಳಿ ನಡೆಸಿದರು.