ಬೆಂಗಳೂರು:'ಏರೋ ಇಂಡಿಯಾ 2023' ಫೆಬ್ರವರಿ 13ರಂದು ಪ್ರಾರಂಭವಾಗಲಿದೆ. ಈ ಹಿನ್ನೆಲೆ ಬಿಬಿಎಂಪಿ ಸುಮಾರು 1.40 ಕೋಟಿ ರೂಪಾಯಿ ವೆಚ್ಚದಲ್ಲಿ ನಾಗರೀಕ ಸೌಲಭ್ಯ ಕಲ್ಪಿಸಲು ಸಕಲ ಸಿದ್ಧತೆಗಳನ್ನು ಆರಂಭಿಸಿದೆ. ಸಿದ್ಧತೆಯ ಭಾಗವಾಗಿ ಬಿಬಿಎಂಪಿ ನೀರಿನ ಟ್ಯಾಂಕರ್‌ಗಳು, ತಾತ್ಕಾಲಿಕ ಶೌಚಾಲಯಗಳು, ಆಟೋ, ಟಿಪ್ಪರ್ ಕಾಂಪ್ಯಾಕ್ಟರ್‌ಗಳು, ಕಸದ ತೊಟ್ಟಿಗಳು ಮತ್ತು ಸೈನ್ ಬೋರ್ಡ್‌ಗಳ ಸ್ಥಾಪನೆಗೆ ಟೆಂಡರ್‌ಗಳನ್ನು ಆಹ್ವಾನಿಸಿದೆ. ಇತ್ತೀಚೆಗೆ ಟೆಂಡರ್‌ಗಳನ್ನು ಪ್ರಕಟಿಸಲಾಗಿದೆ. ಅರ್ಜಿ ಸಲ್ಲಿಸಲು ಜನವರಿ 31 ಕೊನೆಯ ದಿನವಾಗಿದೆ.
ಏರೋ ಇಂಡಿಯಾ ನಮ್ಮ ಹೆಮ್ಮೆ: ಯಲಹಂಕದಲ್ಲಿ ನಡೆಯುವ ಏರೋ ಇಂಡಿಯಾಕ್ಕಾಗಿ 1.40 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಘನತ್ಯಾಜ್ಯ ನಿರ್ವಹಣೆ, ತಾತ್ಕಾಲಿಕ ಶೌಚಾಲಯಗಳು ಮತ್ತು ಕುಡಿಯುವ ನೀರಿನ ಸೌಲಭ್ಯಗಳು, ಸಾರ್ವಜನಿಕ ಪಾರ್ಕಿಂಗ್ ಮತ್ತು ಮುಂಗಡ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಏರೋ ಇಂಡಿಯಾ ನಮ್ಮ ಹೆಮ್ಮೆಯಾಗಿದ್ದು, ಇದಕ್ಕಾಗಿ ಸಕಲ ಸಿದ್ಧತೆಗಳನ್ನು ಮಾಡಲಾಗುತ್ತಿದೆ ಎಂದು ಪಾಲಿಕೆಯ ಘನತ್ಯಾಜ್ಯ ನಿರ್ವಹಣೆಯ ಮುಖ್ಯ ಅಭಿಯಂತರರರಾದ ಬಸವರಾಜ ಕಬಾಡೆ ತಿಳಿಸಿದ್ದಾರೆ.
ನೀರು, ನೈರ್ಮಲ್ಯ, ಕಸ ನಿರ್ವಹಣೆ ಮತ್ತು ಸೂಚನಾ ಫಲಕಗಳು ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಖಚಿತ ಪಡಿಸಿಕೊಳ್ಳಲಾಗುತ್ತಿದೆ. ಮೆಟಲ್ ಪ್ಲಾಟ್ ಫಾರ್ಮ್‌ಗಳಲ್ಲಿರುವ 500 ಮೊಬೈಲ್ ಶೌಚಾಲಯಗಳು, ನೀರಿನ ಸಂಪರ್ಕಗಳು ಮತ್ತು ಒಳಚರಂಡಿಗಾಗಿ ಪಿವಿಸಿ ಪೈಪ್‌ಗಳು, ಪಾಶ್ಚಾತ್ಯ ಶೈಲಿಯ ಕಮೋಡ್, ಫ್ಲಶ್ ಟ್ಯಾಂಕ್, 25 ಮೀಟರ್ ಎತ್ತರದಲ್ಲಿ ಓವರ್ ಹೆಡ್ ವಾಟರ್ ಟ್ಯಾಂಕರ್‌ಗಳು, 36 ಆಟೋ ಟಿಪ್ಪರ್, 6 ಕಾಂಪಾಕ್ಟರ್, 100 ಲೀಟರ್ ಸಾಮರ್ಥ್ಯದ 150 ಹಸಿರು ಮತ್ತು ನೀಲಿ ಕಸದ ತೊಟ್ಟಿಗಳು, 200 ಸೈನ್‌ಬೋರ್ಡ್‌ಗಳು ಮತ್ತು 180 ನೀರಿನ ಟ್ಯಾಂಕರ್‌ಗಳನ್ನು ಏರೋ ಇಂಡಿಯಾಗಾಗಿ ಅಳವಡಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.