ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆದಾಯಕ್ಕಿಂತ ಖರ್ಚು ಹೆಚ್ಚಾಗಿದೆ. ಕೊರೊನಾ ಸೋಂಕು ಪಾಲಿಕೆಯನ್ನು ಇನ್ನಷ್ಟು ಆರ್ಥಿಕ ಸಂಕಷ್ಟಕ್ಕೆ ತಳ್ಳಿದೆ. ಈ ನಡುವೆ ಪಾಲಿಕೆ ಸದಸ್ಯರ ಆಡಳಿತಾಧಿಕಾರವೂ ಮುಗಿದಿದ್ದು, ಅಧಿಕಾರಿಗಳ ಉಸ್ತುವಾರಿಯಲ್ಲಿ ನಡೆಯುತ್ತಿದೆ.
ಇಷ್ಟು ವರ್ಷ ತಡೆಯಲಾಗಿದ್ದ ಆಸ್ತಿ ತೆರಿಗೆ ಏರಿಕೆ ವಿಚಾರ ಈಗ ಮತ್ತೆ ಮುನ್ನೆಲೆಗೆ ಬಂದಿದ್ದು, ಸದ್ಯದಲ್ಲೇ ಬಿಬಿಎಂಪಿ ವ್ಯಾಪ್ತಿಯ ಆಸ್ತಿ ಮಾಲೀಕರಿಗೆ ಪಾಲಿಕೆ ಶಾಕ್ ನೀಡುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. ಪ್ರತಿ 3 ವರ್ಷಗಳಿಗೊಮ್ಮೆ ಒಂದು ಬಾರಿ ಆಸ್ತಿ ತೆರಿಗೆ ಹೆಚ್ಚಳ ಮಾಡಲು ಕಾನೂನಿನಲ್ಲಿ ಅವಕಾಶ ಇದೆ. ಆದರೆ, ರಾಜಕೀಯ ಪಕ್ಷಗಳು ಇಷ್ಟು ದಿನ ವಿರೋಧಿಸಿದ್ದರಿಂದ ಹೆಚ್ಚಳ ಮಾಡಲು ಆಗಿರಲಿಲ್ಲ. ಬದಲಾಗಿ ಪ್ರತಿ ವರ್ಷ ಅವೈಜ್ಞಾನಿಕ ಬಜೆಟ್ ಮಂಡನೆ ಮಾಡಿ, ಗುತ್ತಿಗೆದಾರರಿಗೂ ಬಿಲ್ ಪಾವತಿಸದೇ, ಪಾಲಿಕೆ ಈಗ ಸಾಕಷ್ಟು ಆರ್ಥಿಕ ಸಂಕಷ್ಟದಿಂದ ನರಳುತ್ತಿದೆ ಎನ್ನಲಾಗಿದೆ.
ಆಸ್ತಿ ತೆರಿಗೆ ಹೆಚ್ಚಿಸಲು ಚಿಂತನೆ: ಸದ್ಯದಲ್ಲೇ ಬಿಬಿಎಂಪಿಯಿಂದ ಶಾಕ್ ಆದ್ದರಿಂದ 5 ರೀತಿಯ ತೆರಿಗೆ ಹೆಚ್ಚಳ ಮಾಡುವ ಮೂಲಕ ಆದಾಯ ಕ್ರೋಢೀಕರಣಕ್ಕೆ ಪಾಲಿಕೆ ಅಧಿಕಾರಿಗಳು ಯೋಜನೆ ರೂಪಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಇನ್ನೂ ಈ ಕುರಿತು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಮಾತನಾಡಿ, ಕೌನ್ಸಿಲ್ನಲ್ಲಿ ಪಾಸ್ ಆಗದ ವಿಚಾರಗಳು ಹಾಗೂ ಆಸ್ತಿ ತೆರಿಗೆ ಹೆಚ್ಚಳ ವಿಚಾರವನ್ನು ಆಡಳಿತಾಧಿಕಾರಿಗಳ ಮುಂದೆ ಇಟ್ಟಿದ್ದೇವೆ, ಅವರು ಈ ಬಗ್ಗೆ ನಿರ್ಧರಿಸಲಿದ್ದಾರೆ ಎಂದು ಹೇಳಿದರು.
ಇನ್ನೋರ್ವ ಆಡಳಿತಾಧಿಕಾರಿ ಗೌರವ್ ಗುಪ್ತಾ ಮಾತನಾಡಿ, ಆದಾಯ ಸಂಪನ್ಮೂಲಗಳ ಬಗ್ಗೆ ಸೋಮವಾರ ಸಭೆ ಮಾಡಲಾಗಿದೆ. ಆದಾಯಕ್ಕಿಂತ ಖರ್ಚು ಏರಿಕೆಯಾಗಿದ್ದರಿಂದ ಆದಾಯ ಹೆಚ್ಚು ಮಾಡಲು ತೆರಿಗೆ ವ್ಯವಸ್ಥೆ ಬದಲಾವಣೆ ಮಾಡಬೇಕು. ಹೆಚ್ಚಳ ಮಾಡುವ ಬಗ್ಗೆಯೂ ಪ್ರಸ್ತಾವನೆ ಇದೆ ಎಂದರು.
ಖರ್ಚು ಸರಿದೂಗಿಸುವ ಸಲುವಾಗಿ ಚರ್ಚೆ ಮಾಡಲಾಗಿದೆ. ಈ ವಿಭಾಗಗಳಲ್ಲಿ ಸಾರ್ವಜನಿಕರಿಗೆ ತೆರಿಗೆ ಬರೆ, ಆಸ್ತಿ ತೆರಿಗೆ ಹೆಚ್ಚಳ, ವಸತಿ ಹಾಗೂ ವಾಣಿಜ್ಯ ಕಟ್ಟಡಗಳು ಪಾವತಿಸುವ ಆಸ್ತಿ ತೆರಿಗೆ ಹೆಚ್ಚಿಸುವ ಸಾಧ್ಯತೆ ಇದೆ ಎಂದರು.
ಈಗಾಗಲೇ ನಗರದಲ್ಲಿ ಕಟ್ಟಡ ನಿರ್ಮಾಣ ನಕ್ಷೆ ಮಂಜೂರಾತಿ ದರ ಹೆಚ್ಚಳ ಹಾಗೂ ಹೊಸದಾಗಿ ಹೆಚ್ಚುವರಿ ಅಭಿವೃದ್ಧಿ ಶುಲ್ಕ ಶೇ.0.8 (ಪ್ರತಿಶತ) ರಷ್ಟು ಹೆಚ್ಚಳ ಮಾಡಲಾಗಿದೆ. ಖಾತಾ ನೋಂದಣಿ ವೇಳೆ, ಶುಲ್ಕ ಶೇಕಡಾ 2 ರಿಂದ 5ಕ್ಕೆ ಏರಿಸುವ ಸಾಧ್ಯತೆ ಇದೆ. ಆದಾಯ ಕ್ರೋಢೀಕರಣಕ್ಕೆ ಹಲವಾರು ಸುಧಾರಿತ ಕ್ರಮಗಳನ್ನು ಸದ್ಯದಲ್ಲೇ ಜಾರಿಗೊಳಿಸುವ ಸಾಧ್ಯತೆ ಇದೆ.