ಬೆಂಗಳೂರು/ನವದೆಹಲಿ :ಬಿಬಿಎಂಪಿ ಚುನಾವಣೆ ಸಂಬಂಧ ಕ್ಷೇತ್ರ ಮರು ವಿಂಗಡಣೆ, ಮೀಸಲಾತಿ ಹಂಚಿಕೆ ಪ್ರಕ್ರಿಯೆ ಪೂರ್ಣಗೊಳಿಸಲು 8 ವಾರ ಕಾಲಾವಕಾಶ ನೀಡಿ ಸುಪ್ರೀಂಕೋರ್ಟ್ ಆದೇಶಿಸಿದೆ. ಈ ಮೂಲಕ ಶೀಘ್ರದಲ್ಲೇ ಚುನಾವಣೆ ಜರುಗುವ ಸಾಧ್ಯತೆ ದಟ್ಟವಾಗಿದೆ.
ಚುನಾವಣೆ ನಡೆಸುವಂತೆ ಬಿಬಿಎಂಪಿ ಮಾಜಿ ಸದಸ್ಯರಾದ ಶಿವರಾಜ್ ಹಾಗೂ ಈ ವಾಜೀದ್ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿರುವ ಸುಪ್ರೀಂಕೋರ್ಟ್, 8 ವಾರದಲ್ಲಿ ಈ ಎಲ್ಲ ಪ್ರಕ್ರಿಯೆ ಮುಗಿಸಬೇಕು ಎಂದು ರಾಜ್ಯ ಸರ್ಕಾರ ರಚನೆ ಮಾಡಿದ ಮರುವಿಂಗಡನಾ ಆಯೋಗಕ್ಕೆ ಸೂಚಿಸಿದೆ ಎಂದು ತಿಳಿದು ಬಂದಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಅರ್ಜಿದಾರ ಅಬ್ದುಲ್ ವಾಜೀದ್, ಚುನಾವಣೆ ನಡೆಸುವ ಪ್ರಕ್ರಿಯೆಯನ್ನು ರಾಜ್ಯ ಚುನಾವಣಾ ಆಯೋಗ ಶುರು ಮಾಡಬೇಕು ಎಂದು ಸುಪ್ರೀಂಕೋರ್ಟ್ ಮಹತ್ವದ ನಿರ್ದೇಶನ ನೀಡಿದೆ.
ಒಬಿಸಿ ಮೀಸಲಾತಿ ಪ್ರಕ್ರಿಯೆ 8 ವಾರಗಳಲ್ಲಿ ಪೂರ್ಣಗೊಳ್ಳಬೇಕು : ಕರ್ನಾಟಕ ಮುನ್ಸಿಪಲ್ ಕಾರ್ಪೊರೇಷನ್ ತಿದ್ದುಪಡಿ ಕಾಯ್ದೆ ಅನುಸಾರ ರಚನೆಗೊಂಡಿದ್ದ ಮರು ವಿಂಗಡನಾ ಆಯೋಗ ಒಬಿಸಿ ಮೀಸಲಾತಿ ಪ್ರಕ್ರಿಯೆ ಕೂಡ 8 ವಾರಗಳಲ್ಲಿ ಪೂರ್ಣಗೊಳ್ಳಬೇಕು. ನಂತರ ರಾಜ್ಯ ಸರ್ಕಾರ ಈ ಪ್ರಕ್ರಿಯೆ ಪೂರ್ಣಗೊಳಿಸಿದ ಬಗ್ಗೆ ಅಧಿಸೂಚನೆ ಹೊರಡಿಸಬೇಕು ಎಂದು ಸೂಚನೆ ನೀಡಿದೆ ಎಂದು ತಿಳಿಸಿದರು.
ಚುನಾವಣೆ ಆಯೋಗ ಕ್ರಮ ಕೈಗೊಳ್ಳಬೇಕು :ರಾಜ್ಯ ಸರ್ಕಾರದ ಪರ ಪ್ರಕ್ರಿಯೆ ಪೂರ್ಣಗೊಳಿಸುವ ಬಗ್ಗೆ ಭರವಸೆ ನೀಡಿದ ಕೇಂದ್ರದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಅಧಿಸೂಚನೆ ಜಾರಿಯಾಗಿ ಬಿಬಿಎಂಪಿ ಚುನಾವಣೆ ನಡೆಸಲು ಚುನಾವಣೆ ಆಯೋಗ ಕ್ರಮಕೈಗೊಳ್ಳಬೇಕು ಎಂದರು.