ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ದಕ್ಷಿಣ ವಲಯ ವ್ಯಾಪ್ತಿಯಲ್ಲಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಇಂದು ಬೆಳಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಜೊತೆಗೆ ಸುಮಾರು 7 ಕಿ.ಮೀ ಕಾಲ್ನಡಿಗೆಯಲ್ಲೇ ತೆರಳಿ ಪರಿವೀಕ್ಷಣೆ ಮಾಡಿದರು. ಮಿನರ್ವಾ ವೃತ್ತದಿಂದ ಡಾಯಾಗ್ನಲ್ ರಸ್ತೆ, ಸಜ್ಜನ್ ರಾವ್ ರಸ್ತೆ, ಕವಿ ಲಕ್ಷ್ಮೀಶ ರಸ್ತೆ, ನ್ಯಾಷನಲ್ ಕಾಲೇಜು ವೃತ್ತ, ಕೆ.ಆರ್.ರಸ್ತೆ, ನೆಟ್ಟಕಲ್ಲಪ್ಪ ವೃತ್ತ, ದೇವನ್ ಮಾದೇವ ರಸ್ತೆ, ಆರ್ಮುಗಂ ವೃತ್ತ, ಪಟ್ಟಾಲಮ್ಮ ದೇವಸ್ಥಾನ ರಸ್ತೆ ಹಾಗೂ ಸೌತ್ ಎಂಡ್ ವೃತ್ತದವರೆಗೆ ವರೆಗೆ ಆಯುಕ್ತರು ಪರಿಶೀಲನೆ ಮಾಡಿದರು.
ಮಿನರ್ವ ವೃತ್ತ ಪರಿಶೀಲನೆ:ಮಿನರ್ವ ವೃತ್ತ ಪಾದಚಾರಿ ಮಾರ್ಗದಲ್ಲಿ ಕರ್ಬ್ ಸ್ಟೋನ್ ಕುಸಿದಿರುವುದು ಹಾಗೂ ಹಾಳಾಗಿರುವುದನ್ನು ಕೂಡಲೇ ಸರಿಪಡಿಸಬೇಕು. ರಸ್ತೆ ಬದಿಯಿರುವ ಮರದ ಕೊಂಬೆಗಳನ್ನು ರಾತ್ರಿ ವೇಳೆ ವಾಹನಗಳು ಸಂಚರಿಸದ ವೇಳೆ ಕಟಾವು ಮಾಡಿ ಕೊಂಬೆಗಳನ್ನು ತೆರವುಗೊಳಿಸಬೇಕು. ಬೀದಿ ದೀಪಗಳ ದುರಸ್ತಿ ಸಂಬಂಧ ನಿತ್ಯ ವರದಿ ನೀಡಬೇಕು. ಪಾದಚಾರಿ ಮಾರ್ಗದಲ್ಲಿ ದ್ವಿಚಕ್ರ ವಾಹನಗಳನ್ನು ನಿಲ್ಲಿಸಿದ್ದು, ಸಂಬಂಧಪಟ್ಟವರಿಗೆ ನೋಟೀಸ್ ನೀಡಿ ದಂಡ ವಿಧಿಸಬೇಕು ಎಂದು ಜೊತೆಗೆ ಒತ್ತುವರಿ ಜಾಗ ತೆರವುಗೊಳಿಸಬೇಕು ಎಂದು ವಿದ್ಯುತ್ ವಿಭಾಗದ ಅಧೀಕ್ಷಕ ಅಭಿಯಂತರರಿಗೆ ಸೂಚನೆ ನೀಡಿದರು.
ಸಜ್ಜನ್ ರಾವ್ ವೃತ್ತ ಪರಿಶೀಲನೆ:ಸಜ್ಜನ್ ರಾವ್ ವೃತ್ತದಲ್ಲಿರುವ ಉದ್ಯಾನದ ಕಾಮಗಾರಿಯ ಸಾಮಗ್ರಿ ಪಾದಚಾರಿ ಮಾರ್ಗದಲ್ಲಿ ಹಾಕಿದ್ದು, ಅದನ್ನು ಕೂಡಲೇ ತೆರವುಗೊಳಿಸಬೇಕು. ಬಿಡಾಡಿ ದನ - ಹಸುಗಳನ್ನು ರಸ್ತೆ ಮೇಲೆ ಬಿಟ್ಟರೆ ಪಶುಪಾಲನಾ ವಿಭಾಗದ ಅಧಿಕಾರಿಗಳು ಪಾಲಿಕೆ ವಶಕ್ಕೆ ಪಡೆದು ದಂಡ ವಿಧಿಸಲು ಕ್ರಮ ಕೈಗೊಳ್ಳಬೇಕು. ಸಜ್ಜನ್ ರಾವ್ ವೃತ್ತವನ್ನು ಅಭಿವೃದ್ಧಿ ಪಡಿಸಬೇಕು. ಕವಿ ಲಕ್ಷ್ಮೀಶ ರಸ್ತೆಯ ಎರಡೂ ಬದಿ ಪಾದಚಾರಿ ಮಾರ್ಗ ಹಾಗೂ ಚರಂಡಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ಸಾಧ್ಯವಾದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಬೇಕು.
ಮರದ ಸುತ್ತಲೂ ಆರ್ಸಿಸಿ ಗೋಡೆ ನಿರ್ಮಿಸಿದ್ದು, ಅದನ್ನು ಪಾದಚಾರಿ ಮಾರ್ಗಕ್ಕೆ ಹೊಂದಿಕೊಂಡಂತೆ ಮರುವಿನ್ಯಾಸ ಮಾಡಬೇಕು. ವಿದ್ಯುತ್ ತಂತಿ ಪಾದಚಾರಿಯ ಮೇಲ್ಭಾಗದಲ್ಲಿದ್ದು, ಅದನ್ನು ನೆಲದಡಿ ಅಳವಡಿಸಬೇಕು. ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ಪಾದಚಾರಿ ಮಾರ್ಗದಲ್ಲೇ ಹಾಕಿದ್ದು, ಅದನ್ನು ಕೂಡಲೇ ತೆಗದು ವರದಿ ನೀಡುವಂತೆ ಸೂಚಿಸಿದರು.
ಜೈನ್ ಟೆಂಪಲ್ ರಸ್ತೆ ಪರಿಶೀಲನೆ:ನ್ಯಾಷನಲ್ ಕಾಲೇಜು ವೃತ್ತದಿಂದ ಜೈನ್ ಟೆಂಪಲ್ ರಸ್ತೆ ಬಳಿ ನೆಲದಡಿ ಒಎಫ್ಸಿ ಕೇಬಲ್ ಅಳವಡಿಸಲು ಚೇಂಬರ್ ನಿರ್ಮಿಸಿದ್ದು, ಚೇಂಬರ್ ಸ್ಥಳದಲ್ಲಿ ಪುನಶ್ಚೇತನ ಕಾರ್ಯವನ್ನು ಸಂಬಂಧಪಟ್ಟವರಿಂದಲೇ ಮಾಡಿಸಬೇಕು. ಜೊತೆಗೆ ಅವರಿಂದಲೇ ದಂಡ ವಸೂಲಿ ಮಾಡಬೇಕು. ಜೈನ್ ಟೆಂಪಲ್ ರಸ್ತೆಯಲ್ಲಿ ಮ್ಯಾನ್ ಹೋಲ್ನಿಂದ ಸೀವೇಜ್ ನೀರು ರಸ್ತೆ ಮೇಲೆ ಬರುತ್ತಿದ್ದು, ಆ ಸಮಸ್ಯೆಯನ್ನು ಕೂಡಲೇ ಬಗೆಹರಿಸಲು ಜಲಮಂಡಳಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನ್ಯಾಷನಲ್ ಕಾಲೇಜು ವೃತ್ತ ಪರಿಶೀಲನೆ (ಕೆ.ಆರ್ ರಸ್ತೆ ಮಾರ್ಗ):ನ್ಯಾಷನಲ್ ಕಾಲೇಜು ವೃತ್ತ ಮೆಟ್ರೋ ಫಿಲ್ಲರ್ ಬಳಿ ಕಸದ ಟ್ರಾನ್ಸ್ಫರ್ ಸ್ಟೇಷನ್ ಇದ್ದು, ಸಾರ್ವಜನಿಕರಿಗೆ ಸಮಸ್ಯೆ ಆಗದಂತೆ ಸ್ಥಳವನ್ನು ಸೀಟಿನಿಂದ ಮುಚ್ಚಿ ದುರ್ವಾಸನೆ ಬರದಂತೆ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಪಾದಚಾರಿ ಮಾರ್ಗದಲ್ಲಿ ಮೆಟ್ಟಿಲುಗಳನ್ನು ನಿರ್ಮಿಸಿದ್ದು, ಅದನ್ನು ತೆರವುಗೊಳಿಸಬೇಕು. ಕೆ.ಆರ್ ರಸ್ತೆಯ ಪಾದಚಾರಿ ಮಾರ್ಗದಲ್ಲಿ ನರ್ಸರಿ ಇಟ್ಟುಕೊಂಡಿದ್ದು, ಅದನ್ನು ಸಂಜೆಯೊಳಗಾಗಿ ತೆರವುಗೊಳಿಸಬೇಕು. ಮತ್ತೆ ಈ ಸ್ಥಳದಲ್ಲಿ ಇಡಕೂಡದು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೆ.ಆರ್ ರಸ್ತೆ ಪರಿಶೀಲನೆ:ಪೋಸ್ಟ್ ಆಫೀಸ್ ರಸ್ತೆ ಜಲಮಂಡಳಿಯಿಂದ ಮ್ಯಾನ್ಹೋಲ್ ಕಾಮಗಾರಿ ಮಾಡಿದ್ದು, ರಸ್ತೆ ಪುನಶ್ಚೇತನ ಕಾರ್ಯ ಬಾಕಿಯಿದೆ. ಇದನ್ನು ಕೂಡಲೇ ಪೂರ್ಣಗೊಳಿಸಬೇಕು. ಪೋಸ್ಟ್ ಆಫೀಸ್ ರಸ್ತೆ ಬಳಿ ಕಟ್ಟಡ ನಿರ್ಮಾಣದ ಸ್ಥಳದಲ್ಲಿ ಪಾದಚಾರಿ ಮಾರ್ಗ ಒತ್ತುವರಿ ಮಾಡಿಕೊಂಡು ಕಾಂಪೌಂಡ್ ಗೋಡೆ ನಿರ್ಮಿಸಲು ಫಿಲ್ಲರ್ ಅಳವಡಿಸಿದ್ದು, ಅದನ್ನೂ ಸಹ ತೆರವುಗೊಳಿಸಿ ಕಟ್ಟಡ ಮಾಲೀಕರಿಗೆ ದಂಡ ವಿಧಿಸಲು ಸೂಚನೆ ನೀಡಿದರು.