ಬೆಂಗಳೂರು :ಸಾರ್ವಜನಿಕರು ವಾರಾಂತ್ಯದ ಕರ್ಫ್ಯೂಗೆ ಸಹಕರಿಸಿದ್ದಾರೆ. ಆದರೂ, ಕೋವಿಡ್ ನಿಯಂತ್ರಣಕ್ಕೆ ಬಂದಿಲ್ಲ. ಸೋಂಕು ನಿಯಂತ್ರಿಸಲು ಆಸ್ಪತ್ರೆ ಸಂಖ್ಯೆ, ಐಸಿಯು ಬೆಡ್ ಮತ್ತು ಕೋವಿಡ್ ಪರೀಕ್ಷೆ ಹೆಚ್ಚಿಸುವ ಬಗ್ಗೆ ಇಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದು ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ತಿಳಿಸಿದರು.
ಜನರು ಅನಗತ್ಯ ಓಡಾಟ ಕಡಿಮೆ ಮಾಡಿದರೆ ಮಾತ್ರ ಕೋವಿಡ್ ನಿಯಂತ್ರಣ ಸಾಧ್ಯ. ಕರ್ಫ್ಯೂ ಪರಿಣಾಮ ಬೀಳಲಿದೆ, ಕ್ರಮೇಣ ಕೋವಿಡ್ ಸಂಖ್ಯೆ ಕಡಿಮೆ ಆಗಬಹುದು ಎಂಬ ನಿರೀಕ್ಷೆಯಿದೆ. ಕಳೆದ ಇಪ್ಪತ್ತು ದಿನದಲ್ಲಿ ಸೋಂಕು ವೇಗವಾಗಿ ಹರಡಿದೆ. ಸಂಪುಟ ಸಭೆಯಲ್ಲಿ ತಜ್ಞರು ಹೊಸ ರೂಪದ ವೈರಸ್ ಬಂದಿದೆಯಾ ಎಂಬುವುದರ ಬಗ್ಗೆಯೂ ವರದಿ ನೀಡಲಿದ್ದಾರೆ ಎಂದರು.
ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಕೋವಿಡ್ ವರದಿ ತಡವಾಗಿ ನೀಡಿದ 4 ಪ್ರಯೋಗಾಲಗಳಿಗೆ ನೋಟಿಸ್, ಎರಡಕ್ಕೆ ಬೀಗ
ನಗರದಲ್ಲಿ ಹೆಚ್ಚು ಜನರ ಕೋವಿಡ್ ಟೆಸ್ಟ್ ಮಾಡುತ್ತಿದ್ದರೂ, ವರದಿ ನೀಡುವುದು ತಡವಾಗ್ತಿದೆ. ಇದರಿಂದ ಬಿಯು ನಂಬರ್ ಸಿಗುವುದು ತಡವಾಗ್ತಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ನಾಲ್ಕು ಪ್ರಯೋಗಾಲಯಗಳಿಗೆ ನೋಟಿಸ್ ನೀಡಲಾಗಿದೆ, ಎರಡನ್ನು ಬಂದ್ ಮಾಡಲಾಗಿದೆ. 24 ಗಂಟೆಯೊಳಗೆ ಟೆಸ್ಟ್ ವರದಿ ಬರಬೇಕು. ಈ ಬಗ್ಗೆ ನಿಗಾ ವಹಿಸಲಾಗುತ್ತಿದೆ. ಅಧಿಕಾರಿಗಳು ಪ್ರಯೋಗಾಲಯಗಳ ಜೊತೆ ಚರ್ಚೆ ನಡೆಸುತ್ತಿದ್ದಾರೆ ಎಂದು ಆಯುಕ್ತರು ತಿಳಿಸಿದರು.
ನಗರದಲ್ಲಿ ಸೋಂಕಿತರ ಸಂಖ್ಯೆ ಉಲ್ಬಣ ಹಿನ್ನೆಲೆಯಲ್ಲಿ, ಆರೋಗ್ಯ ವ್ಯವಸ್ಥೆಗಳ ಮೇಲೆ ಒತ್ತಡ ಬೀಳಲಿದೆ. ದೇಶದಲ್ಲೇ ಬೆಂಗಳೂರಿನಲ್ಲಿ ಆರೋಗ್ಯ ವ್ಯವಸ್ಥೆ ಉತ್ತಮವಾಗಿದೆ. ಆದರೂ, ಸೋಂಕಿತರ ಸಂಖ್ಯೆ ಹೆಚ್ಚಳವಾಗಿರುವುದರಿಂದ ಕಷ್ಟವಾಗಬಹುದು. ನರ್ಸ್ಗಳ ನಿಯೋಜನೆ ಕುರಿತು ಎನ್ಜಿಒ, ಸ್ವಯಂ ಸೇವಕರು ಮತ್ತು ಕಾರ್ಪೊರೇಟ್ ಗುಂಪುಗಳ ಜೊತೆ ಮಾತುಕತೆ ನಡೆಸಲಾಗುತ್ತಿದೆ ಎಂದರು.
ಇದನ್ನೂಓದಿ : ಮಾಸ್ಕ್ ಧರಿಸದೇ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾದ ಸ್ಪೀಕರ್ ಕಾಗೇರಿ
ಸದ್ಯ, ಖಾಸಗಿ ಆಸ್ಪತ್ರೆಗಳಲ್ಲಿ 9 ಸಾವಿರ ಸರ್ಕಾರಿ ಕೋಟಾದ ಬೆಡ್ಗಳಿವೆ. ಇದನ್ನು 11 ಸಾವಿರಕ್ಕೆ ಏರಿಸುವ ಗುರಿ ಇದೆ. ಇನ್ನೆರಡು ದಿನದಲ್ಲಿ ಹೊಸ ಬೆಡ್ಗಳು ಸರ್ಕಾರದ ವ್ಯಾಪ್ತಿಗೆ ಬರಲಿದೆ. ಮಾರುಕಟ್ಟೆ ಸೇರಿದಂತೆ ಹೆಚ್ಚು ಜನ ಸೇರುವ ಸ್ಥಳಗಳಿಂದ ದೂರ ಇರಿ. ಮಾರುಕಟ್ಟೆಗಳ ವಿಕೇಂದ್ರೀಕರಣ ಜವಾಬ್ದಾರಿಯನ್ನು ವಲಯ ಮಟ್ಟದ ಅಧಿಕಾರಿಗಳಿಗೆ ಕೊಡಲಾಗಿದೆ ಎಂದು ಹೇಳಿದರು.