ಬೆಂಗಳೂರು: ಸಾವಿನ ಹೆದ್ದಾರಿ ಎಂದೇ ಬಿಂಬಿತವಾಗಿದ್ದ ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪೊಲೀಸರು ಕೈಗೊಂಡ ಕ್ರಮಗಳಿಂದಾಗಿ ಕೊನೆಗೂ ಅಪಘಾತ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಇದೇ ವರ್ಷ ಮಾರ್ಚ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹೈವೇ ಉದ್ಘಾಟಿಸಿದ್ದರು. ಈ ಮಾರ್ಗದ ಮೂಲಕ ಬೆಂಗಳೂರಿಂದ ಮೈಸೂರಿಗೆ ತೆರಳಬೇಕಾದರೆ ಮೂರುವರೆ ಗಂಟೆಯಿಂದ ಒಂದೂವರೆ ಗಂಟೆಗೆ ಇಳಿಕೆಯಾಗಿತ್ತು.
ಜೊತೆಗೆ ಉದ್ಘಾಟನೆಯಾದ ಆರಂಭದಿಂದಲೂ ಡೆಡ್ಲಿ ಹೆದ್ದಾರಿ ಎಂದು ಕುಖ್ಯಾತಿ ಪಡೆದಿತ್ತು. ವಾಹನಗಳ ಮಿತಿ ಮೀರಿದ ವೇಗ, ಅಗತ್ಯ ಕಡೆಗಳಲ್ಲಿ ಸೂಚನಾ ಫಲಕ ಇಲ್ಲದಿರುವುದು ಸೇರಿದಂತೆ ಹಲವು ಲೋಪದೋಷದಿಂದಾಗಿ ಅಪಘಾತ ಸಂಖ್ಯೆಯಲ್ಲಿ ಹೆಚ್ಚಳವಾಗಿತ್ತು. ಅಲ್ಲದೇ ಸಾವಿನ ಸಂಖ್ಯೆಯೂ ಏರಿಕೆಯಾಗಿತ್ತು. ಇದು ರಾಷ್ಟ್ರಮಟ್ಟದಲ್ಲೇ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಸದ್ಯ ಆಕ್ಸಿಡೆಂಟ್ ಪ್ರಕರಣಗಳನ್ನ ಕಡಿಮೆಗೊಳಿಸಲು ಹಾಗೂ ವಾಹನ ಸವಾರರ ಸುರಕ್ಷತೆಗಾಗಿ ಪೊಲೀಸರು ಕೈಗೊಂಡ ಕ್ರಮಗಳಿಂದಾಗಿ ಸಾವಿನ ಪ್ರಕರಣಗಳನ್ನು ನಿಯಂತ್ರಿಸಿದ್ದಾರೆ.
ಸಾವಿನ ಸಂಖ್ಯೆಯಲ್ಲಿ ಇಳಿಕೆ:ಕಳೆದ ಮೇ ತಿಂಗಳಲ್ಲಿ 29 ಮಂದಿ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಜೂನ್ನಲ್ಲಿ 28, ಜುಲೈ 8 ಹಾಗೂ ಆಗಸ್ಟ್ನಲ್ಲಿ 6 ಮಂದಿ ಸಾವನ್ನಪ್ಪಿದ್ದಾರೆ. ಈ ಬಗ್ಗೆ ರಸ್ತೆ ಹಾಗೂ ಸುರಕ್ಷತೆ ಇಲಾಖೆಯ ಎಡಿಜಿಪಿ ಅಲೋಕ್ ಕುಮಾರ್ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ. ನಿರಂತರವಾಗಿ ಪೊಲೀಸರು ಕೈಗೊಂಡ ಕ್ರಮಗಳಿಂದಾಗಿ ಅಪಘಾತ ಪ್ರಕರಣಗಳು ಕಡಿಮೆಯಾಗಿವೆ ಎಂದು ಹೇಳಿದ್ದಾರೆ.