ಕರ್ನಾಟಕ

karnataka

ETV Bharat / state

ಚಿತ್ರದುರ್ಗ ಮುರುಘಾ ಶ್ರೀ ವಿರುದ್ಧದ ಷಡ್ಯಂತ್ರ.. ಆರೋಪಿ ಬಸವರಾಜನ್​ಗೆ ಜಾಮೀನು - ಚಿತ್ರದುರ್ಗದ ಸೆಷನ್ಸ್ ಕೋರ್ಟ್

ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಶರಣರ ವಿರುದ್ಧ ಷಡ್ಯಂತ್ರ ನಡೆಸಿದ ಆರೋಪಿ ಬಸವರಾಜನ್​ಗೆ ಹೈಕೋರ್ಟ್​ ಜಾಮೀನು ಮಂಜೂರು ಮಾಡಿದೆ.

ಹೈಕೋರ್ಟ್
ಹೈಕೋರ್ಟ್

By

Published : Dec 22, 2022, 8:12 PM IST

Updated : Dec 22, 2022, 10:00 PM IST

ಬೆಂಗಳೂರು: ಅಪ್ರಾಪ್ತರ ಮೇಲಿನ ಲೈಂಗಿಕ ದೌರ್ಜನ್ಯ ಆರೋಪ ಸಂಬಂಧ ಚಿತ್ರದುರ್ಗ ಮುರುಘಾ ಮಠದ ಪೀಠಾಧಿಪತಿ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಸುಳ್ಳು ಕೇಸು ದಾಖಲಿಸಲು ಕ್ರಿಮಿನಲ್ ಸಂಚು ರೂಪಿಸಿದ ಆರೋಪದಡಿ ಬಂಧನಕ್ಕೆ ಒಳಗಾಗಿದ್ದ ಮುರುಘಾ ಮಠದ ಮಾಜಿ ಆಡಳಿತಾಧಿಕಾರಿ ಹಾಗೂ ಮಾಜಿ ಶಾಸಕ ಎಸ್. ಕೆ ಬಸವರಾಜನ್​ಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಜಾಮೀನು ಕೋರಿ ಎಸ್. ಕೆ ಬಸವರಾಜನ್ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಎಸ್. ರಾಚಯ್ಯ ಅವರಿದ್ದ ನ್ಯಾಯಪೀಠ ಜಾಮೀನು ಮಂಜೂರು ಮಾಡಿ ಸರ್ಕಾರಕ್ಕೆ ನೋಟಿಸ್​ ಜಾರಿ ಮಾಡಿ ವಿಚಾರಣೆ ಮುಂದೂಡಿದೆ. ಅರ್ಜಿದಾರರ ಪರ ವಾದ ಮಂಡಿಸಿದ್ದ ವಕೀಲರು, ಅರ್ಜಿದಾರರ ವಿರುದ್ಧ ಭಾರತೀಯ ದಂಡ ಸಂಹಿತೆ ಕಲಂ 120-ಬಿ (ಅಪರಾಧಿಕ ಪಿತೂರಿ), 384 (ಸುಲಿಗೆ), 420 (ವಂಚನೆ) ಮತ್ತು 366-ಎ (ಅಪ್ರಾಪ್ತ ಬಾಲಕಿಯನ್ನು ದುರುದ್ದೇಶ ಸಾಧನೆಗೆ ಬಳಸಿಕೊಂಡ ಆರೋಪ) ಅಡಿಯಲ್ಲಿ ಆರೋಪ ಹೊಸಲಾಗಿದೆ. ಇದೇ ಆರೋಪ ಸಂಬಂಧ ಈ ಹಿಂದೆ ಅರ್ಜಿದಾರರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು. ನಂತರ ಎರಡನೇ ಎಫ್‌ಐಆರ್ ದಾಖಲಿಸಲಾಗಿದೆ. ಒಂದೇ ಪ್ರಕರಣ ಸಂಬಂಧ ಎರಡೆರಡು ಎಫ್‌ಐಆರ್ ದಾಖಲಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ತಿಳಿಸಿದರು.

ಜತೆಗೆ, ಕೇವಲ ರಾಜಕೀಯ ದುರುದ್ದೇಶದಿಂದ ಅರ್ಜಿದಾರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಬಸವರಾಜನ್ ಮನೆಯಲ್ಲಿ ಮಲಗಿದ್ದಾಗ ಪೊಲೀಸರು ರಾತ್ರೋರಾತ್ರಿ ಬಂದು ಕರೆದುಕೊಂಡು ಹೋಗಿ ನಂತರ ಎಫ್‌ಐಆರ್ ದಾಖಲಿಸಿದ್ದಾರೆ. ಆರೋಪಿ ಮುರುಘಾ ಶರಣರು ಪೋಕ್ಸೋ ಪ್ರಕರಣದಲ್ಲಿ ಸಿಲುಕಿರುವ ಕಾರಣ ಅರ್ಜಿದಾರರ ವಿರುದ್ಧ ಮಠದ ಹಾಲಿ ಉಸ್ತುವಾರಿ ಸ್ವಾಮೀಜಿ ಬಸವಪ್ರಭು ಅವರು ಪ್ರತಿದೂರು ದಾಖಲಿಸಿದ್ದಾರೆ. ಅಪರಾಧವೇ ನಡೆದಿಲ್ಲದಿರುವಾಗ ಅರ್ಜಿದಾರರನ್ನು ನ್ಯಾಯಾಂಗ ಬಂಧನದಲ್ಲಿಡುವುದು ಕಾನೂನು ಬಾಹಿರ. ಈ ಪ್ರಕರಣದಲ್ಲಿ ಸುಲಿಗೆ ಆರೋಪ ಉದ್ಭವಿಸುವ ಪ್ರಶ್ನೆಯೇ ಇಲ್ಲ. ಆದ್ದರಿಂದ, ಜಾಮೀನು ನೀಡಬೇಕು ಎಂದು ಕೋರಿದರು.

ಪೊಲೀಸರ ಪರ ಸರ್ಕಾರಿ ಅಭಿಯೋಜಕರಾದ ಶಂಕರ್, ಅರ್ಜಿದಾರರ ವಿರುದ್ಧ ಗಂಭೀರ ಸ್ವರೂಪದ ಆರೋಪಗಳಿವೆ. ಪ್ರಕರಣ ತನಿಖಾ ಹಂತದಲ್ಲಿದೆ. ಈ ಪರಿಸ್ಥಿತಿಯಲ್ಲಿ ಜಾಮೀನು ನೀಡಬಾರದು ಎಂದು ಮನವಿ ಮಾಡಿದರು. ವಾದ ಆಲಿಸಿದ ನ್ಯಾಯಪೀಠ, ಜಾಮೀನು ಮಂಜೂರು ಮಾಡಿ ಆದೇಶಿಸಿತು.

ಪ್ರಕರಣದ ಹಿನ್ನೆಲೆ..ಮುರುಘಾ ಮಠದ ಪೀಠಾಧಿಪತಿ ಡಾ. ಶಿವಮೂರ್ತಿ ಶರಣರ ವಿರುದ್ಧ ಸುಳ್ಳು ಕೇಸು ದಾಖಲಿಸುವ ಸಂಬಂಧ ಮಠದ ಪ್ರಿಯದರ್ಶಿನಿ ಹೈಸ್ಕೂಲ್‌ನಲ್ಲಿ ಕೆಲಸ ಮಾಡುತ್ತಿರುವ ಬಸವರಾಜೇಂದ್ರ ಮತ್ತು ಮಠದ ದಾಸೋಹದ ಸಿಬ್ಬಂದಿಯಾದ ಮಹಿಳೆಯೊಬ್ಬರ ನಡುವೆ ನಡೆದಿದೆ ಎನ್ನಲಾದ ಫೋನ್ ಸಂಭಾಷಣೆಯ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಪ್ರಕರಣ ಸಂಬಂಧ ಮಠದ ಉಸ್ತುವಾರಿ ಬಸವಪ್ರಭು ಸ್ವಾಮೀಜಿ ಚಿತ್ರದುರ್ಗ ಗ್ರಾಮೀಣ ಠಾಣಾ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಪೊಲೀಸರು ಎಫ್‌ಐಆರ್ ದಾಖಲಿಸಿ, ಅರ್ಜಿದಾರರನ್ನು ಬಂಧಿಸಿದ್ದರು.

ಓದಿ:ಮಠದ ಸಿಬ್ಬಂದಿ ವೇತನ ಚೆಕ್​ಗೆ​ ಸಹಿ ಹಾಕಲು ಮುರುಘಾ ಶರಣರಿಗೆ ಹೈಕೋರ್ಟ್ ಅವಕಾಶ

Last Updated : Dec 22, 2022, 10:00 PM IST

ABOUT THE AUTHOR

...view details