ಕರ್ನಾಟಕ

karnataka

ETV Bharat / state

ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪನಿ ವಿರುದ್ಧ ನೋಟಿಸ್ ನೀಡಿ.. ಸಚಿವ ಬಿ ಸಿ ಪಾಟೀಲ್ ಸೂಚನೆ - United India Insurance Company

ರೈತರ ಖಾತೆಗಳಲ್ಲಿ ಏನಾದ್ರೂ ತಾಂತ್ರಿಕ ತೊಂದರೆಗಳಾಗಿದ್ದರೆ ಅವುಗಳನ್ನು ರೈತರ ಗಮನಕ್ಕೂ ಹಾಗೂ ಇಲಾಖೆಯ ಗಮನಕ್ಕೂ ತಂದು ಸರಿಪಡಿಸಬೇಕು. ವಿಮಾ ಕಂಪನಿಗಳಿಗೆ ಸರಿಯಾಗಿ ಕಂತು ಪಾವತಿಸಿದ ಯಾವುದೇ ರೈತರಿಗೂ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು..

B C Patil
ಸಚಿವ ಬಿ.ಸಿ.ಪಾಟೀಲ್

By

Published : Oct 3, 2020, 5:17 PM IST

ಬೆಂಗಳೂರು :ರೈತರಿಗೆ ಸರಿಯಾಗಿ ವಿಮೆ ಪಾವತಿಸದ ಹಾಗೂ ಕೃಷಿ ಇಲಾಖೆಯ ಸಭೆಗಳಿಗೆ ಸರಿಯಾಗಿ ಹಾಜರಾಗಿ ಮಾಹಿತಿ ನೀಡದ ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪನಿ ವಿರುದ್ಧ ನೋಟಿಸ್ ನೀಡುವಂತೆ ಕೃಷಿ ಇಲಾಖೆಯ ಅಧಿಕಾರಿಗಳಿಗೆ ಕೃಷಿ ಸಚಿವ ಬಿ ಸಿ ಪಾಟೀಲ್ ಖಡಕ್ ಸೂಚನೆ ನೀಡಿದ್ದಾರೆ.

ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಇಂದು ನಡೆದ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಸಂಬಂಧ ಕೃಷಿ ಇಲಾಖೆ ಅಧಿಕಾರಿಗಳು, ಎನ್‌ಐಸಿ ಹಾಗೂ ವಿಮಾ ಕಂಪನಿಗಳ ಮುಖ್ಯಸ್ಥರ ಜೊತೆಯ ಪ್ರಗತಿಪರಿಶೀಲನಾ ಸಭೆಯಲ್ಲಿ ಬಜಾಜ್ ಅಲೈಯನ್ಸ್, ಭಾರತಿ ಎಎಕ್ಸ್​, ಫ್ಯೂಚರ್ ಜೆನರಲ್, ಯುನಿವರ್ಸಲ್ ಸೋಂಪೋ ಹೆಚ್‌ಡಿಎಫ್‌ಸಿ ಸೇರಿದಂತೆ ಇನ್ನಿತರೆ ವಿಮಾ ಕಂಪನಿಗಳ ಮುಖ್ಯಸ್ಥರು ಭಾಗವಹಿಸಿ ಬೆಳೆ ವಿಮೆ ಸಂಬಂಧ ಮಾಹಿತಿ ಹಾಗೂ ರೈತರ ಬ್ಯಾಂಕ್ ಖಾತೆಯಲ್ಲಾಗಿರುವ ತಾಂತ್ರಿಕ ತೊಂದರೆಗಳ ಬಗ್ಗೆ ಸಚಿವರ ಗಮನಕ್ಕೆ ತಂದರು.

ಆದರೆ, ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಕಂಪನಿಯಿಂದ ಯಾರೊಬ್ಬ ಪ್ರತಿನಿಧಿಯಾಗಲೀ, ಮುಖಸ್ಥರಾಗಲೀ ಸಭೆಯಲ್ಲಿ ಭಾಗವಹಿಸರಲಿಲ್ಲ. ಅಲ್ಲದೇ ಸರಿಯಾದ ಮಾಹಿತಿ ಕೂಡ ಇಲಾಖೆಗೆ ನೀಡದಿರುವುದನ್ನು ಗಮನಿಸಿದ ಕೃಷಿ ಸಚಿವರು, ಈ ಕಂಪನಿ ವಿರುದ್ಧ ನೋಟಿಸ್ ನೀಡುವಂತೆ ಸಭೆಯಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು. ಯಾವುದೋ ಒಂದೆರಡು ಕಂಪನಿಗಳು ಮಾಡುವ ತಪ್ಪಿನಿಂದ ಇಲಾಖೆಗೆ ಕೆಟ್ಟ ಹೆಸರು ಬರುವಂತೆ ಆಗುತ್ತದೆ.

ಅಲ್ಲದೇ ಇನ್ಸೂರೆನ್ಸ್ ಕಂಪನಿಗಳು ಪ್ರೀಮಿಯಂ ಕಟ್ಟಿಸಿಕೊಳ್ಳುವಾಗ ಷರತ್ತುಗಳನ್ನು ಸಡಿಲಿಸಿ ಕ್ಲೇಮ್ ಮಾಡುವಾಗ ಷರತ್ತುಗಳನ್ನು ಬಿಗಿಗೊಳಿಸುವುದು ಸರಿಯಲ್ಲ. ಈವರೆಗೆ ರೈತರಿಗೆ ವಿಮಾ ಹಣ ನೀಡದೇ ಬಾಕಿ ಉಳಿಸಿಕೊಂಡಿರುವ ವಿಮಾ ಕಂಪನಿಗಳು ಆದಷ್ಟು ಬೇಗ ಹಣವನ್ನು ರೈತರ ಖಾತೆಗೆ ಪಾವತಿಯಾಗುವಂತೆ ನೋಡಿಕೊಳ್ಳಬೇಕು.

ರೈತರ ಖಾತೆಗಳಲ್ಲಿ ಏನಾದ್ರೂ ತಾಂತ್ರಿಕ ತೊಂದರೆಗಳಾಗಿದ್ದರೆ ಅವುಗಳನ್ನು ರೈತರ ಗಮನಕ್ಕೂ ಹಾಗೂ ಇಲಾಖೆಯ ಗಮನಕ್ಕೂ ತಂದು ಸರಿಪಡಿಸಬೇಕು. ವಿಮಾ ಕಂಪನಿಗಳಿಗೆ ಸರಿಯಾಗಿ ಕಂತು ಪಾವತಿಸಿದ ಯಾವುದೇ ರೈತರಿಗೂ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು ಎಂದು ಸಚಿವ ಬಿ ಸಿ ಪಾಟೀಲ್ ಹೇಳಿದರು.

50 ಸಾವಿರಕ್ಕೂ ಮೇಲ್ಪಟ್ಟ ಹಣ ರೈತರ ಖಾತೆಗೆ ಜಮೆ ಮಾಡಲು ಆರ್‌ಬಿಐ ನಿಯಮಾವಳಿ ಪ್ರಕಾರ ಕೆಲವು ಬ್ಯಾಂಕ್‌ಗಳ ಖಾತೆಗಳಿಗೆ ಸಾಧ್ಯವಾಗುತ್ತಿಲ್ಲ. ಈ ಸಂಬಂಧ ಕೇಂದ್ರದ ಗಮನಕ್ಕೆ ತರುವ ಬಗ್ಗೆ ಸಭೆಯಲ್ಲಿ ಅಧಿಕಾರಿಗಳು ಹೇಳಿದರು. ಸಭೆಯಲ್ಲಿ ಕೃಷಿ ಇಲಾಖೆ ಆಯುಕ್ತ ಬ್ರಿಜೇಶ್ ಕುಮಾರ್‌ ದೀಕ್ಷಿತ್, ಅಪರ ಕೃಷಿ ನಿರ್ದೇಶಕ ಅಂತೋನಿ ಇಮ್ಯಾನ್ಯುಯಲ್ ಸೇರಿ ಮತ್ತಿತರ ಅಧಿಕಾರಿಗಳು ಭಾಗವಹಿಸಿದ್ದರು.

ಕೃಷಿ ಸಚಿವರ ಮನವಿ :ಕೆಲವು ಬ್ಯಾಂಕುಗಳ ವಿಲೀಕರಣವಾಗಿರುವುದರಿಂದ ಬ್ಯಾಂಕ್‌ಗಳ ಐಎಫ್‌ಸಿ ಕೋಡ್ ಬದಲಾವಣೆಯಾಗಿರುತ್ತದೆ. ಆದ್ದರಿಂದ ರೈತರು ಆದಷ್ಟು ಬೇಗ ತಮ್ಮ ಬ್ಯಾಂಕ್ ಖಾತೆಗೆ ಸರಿಯಾದ ಆಧಾರ್ ಸಂಖ್ಯೆ, ಐಎಫ್‌ಸಿ ಸಂಖ್ಯೆ, ಖಾತೆ ಸಂಖ್ಯೆ ಸರಿಯಾಗಿದೆಯೇ ಎಂಬುದನ್ನು ಪರೀಕ್ಷಿಸಿಕೊಂಡು ಕೃಷಿ ಇಲಾಖೆಯ ಗಮನಕ್ಕೆ ತರುವಂತೆ ಕೃಷಿ ಸಚಿವರು ರೈತ ಬಾಂಧವರಲ್ಲಿ ಮನವಿ ಮಾಡಿದ್ದಾರೆ.

ABOUT THE AUTHOR

...view details