ಕರ್ನಾಟಕ

karnataka

ETV Bharat / state

ಕೊರೊನಾಗೆ ಆಯುರ್ವೇದ ಚಿಕಿತ್ಸೆ: ಸರ್ಕಾರಕ್ಕೆ ಮನವಿ ಸಲ್ಲಿಸಲು ಹೈಕೋರ್ಟ್ ಸೂಚನೆ - ayurvedic treatment for corona

ರಾಜ್ಯದಲ್ಲಿ ಕೊರೊನಾ ಸೋಂಕಿತರಿಗೆ ಆಯುರ್ವೇದ ಪದ್ಧತಿಯಲ್ಲಿ ಚಿಕಿತ್ಸೆ ಕಲ್ಪಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿ ಸಂಬಂಧ ಹೈಕೋರ್ಟ್​ ವಿಚಾರಣೆ ನಡೆಸಿದ್ದು, ನಿಮ್ಮ ಕೋರಿಕೆಯನ್ನು ರಾಜ್ಯ ಸರ್ಕಾರಕ್ಕೆ ಮನವಿ ಪತ್ರದ ಮೂಲಕ ಸಲ್ಲಿಸಿ ಎಂದು ಅರ್ಜಿದಾರರಿಗೆ ಸೂಚಿಸಿದೆ.

pil
ರಾಜ್ಯ ಸರ್ಕಾರಕ್ಕೆ ಮನವಿ ಪತ್ರ

By

Published : Sep 29, 2020, 11:07 PM IST

ಬೆಂಗಳೂರು :ರಾಜ್ಯದಲ್ಲಿ ಕೊರೊನಾ ಸೋಂಕಿತರಿಗೆ ಆಯುರ್ವೇದ ಪದ್ಧತಿಯಲ್ಲಿ ಚಿಕಿತ್ಸೆ ಕಲ್ಪಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿ ಇತ್ಯರ್ಥಪಡಿಸಿರುವ ಹೈಕೋರ್ಟ್, ಈ ಸಂಬಂಧ ಸರ್ಕಾರಕ್ಕೆ ಮನವಿ ಸಲ್ಲಿಸುವಂತೆ ಅರ್ಜಿದಾರರಿಗೆ ಸೂಚಿಸಿದೆ.

ಈ ಕುರಿತು ಎ ವರ್ಗೀಸ್ ಎಂಬುವವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಈ ವೇಳೆ, ಅರ್ಜಿದಾರರ ಪರ ವಾದಿಸಿದ ವಕೀಲರು, ಸರ್ಕಾರ ಕೇವಲ ಅಲೋಪತಿ ಪದ್ಧತಿಯಲ್ಲಿ ಚಿಕಿತ್ಸೆ ನೀಡುತ್ತಿದೆ. ಆದರೆ, ಆಯುರ್ವೇದ ಪದ್ಧತಿಯಲ್ಲಿ ಚಿಕಿತ್ಸೆ ಪಡೆದುಕೊಳ್ಳಲು ರೋಗಿಗಳಿಗೆ ಅವಕಾಶ ಕಲ್ಪಿಸಿಲ್ಲ. ಚಿಕಿತ್ಸೆ ವಿಧಾನ ಯಾವುದು ಇರಬೇಕು ಎಂಬ ಆಯ್ಕೆಯು ರೋಗಿಯ ಹಕ್ಕಾಗಿದೆ. ಆದ್ದರಿಂದ ಕೊರೊನಾ ಸೋಂಕಿತರಿಗೆ ಆಯುರ್ವೇದ ಚಿಕಿತ್ಸೆಯ ಅವಕಾಶ ಕಲ್ಪಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಮನವಿ ಮಾಡಿದರು.

ವಾದ ಆಲಿಸಿದ ಪೀಠ, ಕೊರೊನಾ ಸೋಂಕಿತರಿಗೆ ಯಾವ ಪದ್ಧತಿಯಲ್ಲಿ ಚಿಕಿತ್ಸೆ ನೀಡಬೇಕು. ಆಯುರ್ವೇದ ಪದ್ಧತಿಯಲ್ಲಿ ಚಿಕಿತ್ಸೆ ನೀಡುವುದು ಉತ್ತಮವೋ ಅಥವಾ ಅಲೋಪತಿ ಪದ್ಧತಿಯಲ್ಲಿ ಚಿಕಿತ್ಸೆ ನೀಡುವುದು ಸೂಕ್ತವೋ ಎಂಬ ವಿಚಾರಗಳನ್ನು ನಿರ್ಧರಿಸುವಷ್ಟು ವೈಜ್ಞಾನಿಕ ಮತ್ತು ವೈದ್ಯಕೀಯ ಪರಿಣತಿ ನ್ಯಾಯಾಲಯಕ್ಕಿಲ್ಲ. ಆದ್ದರಿಂದ ಚಿಕಿತ್ಸೆ ಸಂಬಂಧ ನಿಮ್ಮ ಕೋರಿಕೆಯನ್ನು ರಾಜ್ಯ ಸರ್ಕಾರಕ್ಕೆ ಮನವಿ ಪತ್ರದ ಮೂಲಕ ಸಲ್ಲಿಸಿ ಎಂದು ಅರ್ಜಿದಾರರಿಗೆ ಸೂಚಿಸಿ ಅರ್ಜಿ ಇತ್ಯರ್ಥ ಪಡಿಸಿದೆ.

ABOUT THE AUTHOR

...view details