ಕರ್ನಾಟಕ

karnataka

By ETV Bharat Karnataka Team

Published : Aug 24, 2023, 3:20 PM IST

Updated : Aug 24, 2023, 3:45 PM IST

ETV Bharat / state

ಜೆಡಿಎಸ್‌ ತ್ಯಜಿಸಿ 'ಕೈ' ಹಿಡಿದ ಆಯನೂರು ಮಂಜುನಾಥ್: 'ಕಾಂಗ್ರೆಸ್ ಬಸ್ ಹತ್ತಿದ ಮೇಲೆ ಕೊನೆತನಕ ಕೂರಬೇಕು'- ಡಿ.ಕೆ.ಶಿವಕುಮಾರ್‌

ಜೆಡಿಎಸ್ ತೊರೆದಿರುವ ಆಯನೂರು ಮಂಜುನಾಥ್ ಅವರು ಇಂದು ಡಿ.ಕೆ.ಶಿವಕುಮಾರ್​ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷ ಸೇರಿದರು.

ಆಯನೂರು ಮಂಜುನಾಥ್ ಕಾಂಗ್ರೆಸ್ ಸೇರ್ಪಡೆ
ಆಯನೂರು ಮಂಜುನಾಥ್ ಕಾಂಗ್ರೆಸ್ ಸೇರ್ಪಡೆ

ಬೆಂಗಳೂರು : ಬಿಜೆಪಿಯಿಂದ ಇತ್ತೀಚೆಗೆ ಜೆಡಿಎಸ್​ಗೆ ಬಂದಿದ್ದ ಹಿರಿಯ ಮುಖಂಡ ಆಯನೂರು ಮಂಜುನಾಥ್ ಅವರು ಇಂದು ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾದರು. ಕೆಪಿಸಿಸಿ ಕಚೇರಿಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆಯಿತು. ಶಿವಮೊಗ್ಗ ಜಿಲ್ಲೆಯ ಪ್ರಮುಖ ಜೆಡಿಎಸ್, ಬಿಜೆಪಿ ಮುಖಂಡರು 'ಕೈ' ಹಿಡಿದರು. ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಬಾವುಟ ನೀಡಿ ಪಕ್ಷಕ್ಕೆ ಬರಮಾಡಿಕೊಂಡರು.

'ಕೈ' ಹಿಡಿದವರು ಯಾರೆಲ್ಲ?: ಶಿಕಾರಿಪುರದ ಕಾಂಗ್ರೆಸ್‌ ಟಿಕೆಟ್ ಆಕಾಂಕ್ಷಿಯಾಗಿದ್ದ ನಾಗರಾಜ್ ಗೌಡ ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ ಸೇರಿದ್ದಾರೆ. ಉಳಿದಂತೆ, ಬಿಜೆಪಿ ಮುಖಂಡ ಮಹೇಂದ್ರನಾಥ್, ಬಿಜೆಪಿ ಕಾರ್ಪೊರೇಟರ್ ದೀರರಾಜ್ ಹೊನ್ನವಿಲೆ, ಜೆಡಿಎಸ್ ಮಾಜಿ ಕಾರ್ಪೊರೇಟರ್ ಐಡಿಯಲ್ ಗೋಪಿ, ಬಿಜೆಪಿ ಮಾಜಿ ನಗರಸಭಾ ಸದಸ್ಯ ಪರಂದಾಮ ರೆಡ್ಡಿ, ರೈತ ಸಂಘದ ಲೋಕೇಶಪ್ಪ ಕಾರ್ಯಕರ್ತರೊಂದಿಗೆ ಕಾಂಗ್ರೆಸ್ ಸೇರಿದ್ದಾರೆ.

ಸಚಿವ ಮಧು ಬಂಗಾರಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್, ಚಂದ್ರಪ್ಪ, ಶಾಸಕ ಬೇಳೂರು ಗೋಪಾಲಕೃಷ್ಣ, ರಾಜೇಗೌಡ, ಶಿವಮೊಗ್ಗ ಜಿಲ್ಲಾಧ್ಯಕ್ಷ ಸುಂದರೇಶ್ ಹಾಗು ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಬಳಿಕ ಮಾತನಾಡಿದ ಆಯನೂರು ಮಂಜುನಾಥ್, "ನಾನು, ನನ್ನ ಸ್ನೇಹಿತರು ದೊಡ್ಡ ಸಂಖ್ಯೆಯಲ್ಲಿ ಇವತ್ತು ಕಾಂಗ್ರೆಸ್ ಸೇರಿದ್ದೇವೆ. ಯಾವುದೇ ಕಂಡಿಷನ್ ಇಲ್ಲದೆ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಪಕ್ಷ ಸೇರ್ಪಡೆಯಾಗಿದ್ದೇವೆ. ಬರುವ ದಿನಗಳಲ್ಲಿ ಜಿಲ್ಲೆ, ತಾಲ್ಲೂಕು, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿಗಾಗಿ ನಮ್ಮ‌ ಶಕ್ತಿ ವಿನಿಯೋಗ ಮಾಡುತ್ತೇವೆ. ಪದವೀಧರ ಶಿಕ್ಷಕರ ಕ್ಷೇತ್ರದ ಚುನಾವಣೆ ಬರ್ತಿದೆ. ನಾನು ಅದರ ಸದಸ್ಯನಾಗಿದ್ದೆ. ಪಕ್ಷ ಏನು ತೀರ್ಮಾನ ಮಾಡುತ್ತೋ ನೋಡೋಣ. ನನಗೆ ಕೊಟ್ರೂ ಸಂತೋಷ, ಬೇರೆಯವರಿಗೂ ಕೊಟ್ರೂ ಸಂತೋಷ. ಒಟ್ಟಾಗಿ ಕೆಲಸ ಮಾಡುತ್ತೇವೆ" ಎಂದು ಹೇಳಿದರು.

ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನಾಗರಾಜು ಗೌಡ, "ಮತ್ತೆ ಕಾಂಗ್ರೆಸ್ ಸೇರಲು ಅವಕಾಶ ಕೊಟ್ಟಿದ್ದಾರೆ. ಪಕ್ಷ ಸೇರುವುದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧ್ಯಕ್ಷರು ಸಹಕಾರ ನೀಡಿದ್ದಾರೆ. ಟಿಕೆಟ್ ಕೊಡಲಿಲ್ಲ ಅಂತಾ ಬೇಸರ ಆಗಲಿಲ್ಲ. ಎಲ್ಲೋ ಒಂದೆಡೆ ಅವಕಾಶ ಇತ್ತು ಗೆಲ್ಲೋದಕ್ಕೆ. 1983ರಿಂದ 2023 ರವರೆಗೆ ಶಿಕಾರಿಪುರಲ್ಲಿ ನಾವು ಯಾರೂ ಶಾಸಕರಾಗಿರಲಿಲ್ಲ. 1999ರಿಂದ 2004ರಲ್ಲಿ ಒಮ್ಮೆ ಕಾಂಗ್ರೆಸ್ ಶಾಸಕರಾಗಿದ್ದರು. ತಾಲ್ಲೂಕಿನಲ್ಲಿ ಜನರ ಒತ್ತಡಕ್ಕೆ ಮಣಿದು, ಬಂಡಾಯ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕಾಯಿತು" ಎಂದು ತಿಳಿಸಿದರು.

"ಶಿಕಾರಿಪುರದಲ್ಲಿ ಭ್ರಷ್ಟಾಚಾರದ 100ರಿಂದ 150 ಕೋಟಿ ರೂ ಹಂಚಿ ಚುನಾವಣೆ ಮಾಡಿದ್ದಾರೆ. ಶಿಕಾರಿಪುರದ ಜನ ಹಣಕ್ಕೆ ಖರೀದಿಯಾಗಿಲ್ಲ. ಈಗ ಶಾಸಕರಾಗಿ ಆಯ್ಕೆಯಾಗಿದ್ದಾರಲ್ಲ, ಅವರ ವಿರುದ್ದ 70 ಸಾವಿರ ಮತವನ್ನು ನನಗೆ ಮತ ಹಾಕಿ ಸರಿಯಾದ ಉತ್ತರ ಕೊಟ್ಟರು. ಸೋತರೂ, ಗೆದ್ದರೂ ಕಾಂಗ್ರೆಸ್​ ಸೇರುತ್ತೇನೆ ಅಂತ ಹೇಳಿದ್ದೆ. ಚುನಾವಣೆಯಲ್ಲಿ ಸ್ಪರ್ಧೆ ಮಾಡೋದು ಅನಿವಾರ್ಯವಾಗಿತ್ತು.‌ ಆರು ವರ್ಷ ನನ್ನ ಸಸ್ಪೆಂಡ್ ಮಾಡಿದ್ದರು. ಇವತ್ತು ನಮ್ಮೆಲ್ಲರ ನಾಯಕರ ಆಶೀರ್ವಾದದಿಂದ‌ ಪಕ್ಷ ಸೇರುವುದಕ್ಕೆ ಅವಕಾಶ ಕೊಟ್ಟಿದ್ದಾರೆ. ಯಾವುದೇ ಚುನಾವಣೆ ಬಂದರೂ ಪಕ್ಷ ಹೇಳಿದಂತೆ ಕೇಳುತ್ತೇನೆ" ಎಂದು ನಾಗರಾಜು ಹೇಳಿದರು.

ಡಿಕೆಶಿ ಪ್ರತಿಕ್ರಿಯೆ:ಡಿಸಿಎಂ ಡಿ‌‌.ಕೆ.ಶಿವಕುಮಾರ್ ಕಾಂಗ್ರೆಸ್ ಪಕ್ಷ ಬಿಟ್ಟು ಹೋಗಿ ಮತ್ತೆ ಬರುತ್ತಿರುವವರಿಗೆ ಪರೋಕ್ಷವಾಗಿ ಸಂದೇಶ ನೀಡುತ್ತಾ, "ಕಾಂಗ್ರೆಸ್ ಬಸ್ ಹತ್ತಿದ ಮೇಲೆ ಕೊನೆಯತನಕ ಕುಳಿತುಕೊಳ್ಳಬೇಕು. ಪಕ್ಷದಲ್ಲಿದ್ದರೆ ಹಿರಿತನವೂ ಇರುತ್ತೆ, ಅಧಿಕಾರವೂ ಸಿಗುತ್ತೆ. ಕಾಂಗ್ರೆಸ್ ಪಕ್ಷ ಬಸ್ ಸೀಟ್ ತರಹ ಅಲ್ಲ. ಹತ್ತಿ ಇಳಿಯುವ ಕೆಲಸ ಮಾಡಬಾರದು. ಇದೊಂದು ಖಾಯಂ ಸೀಟ್" ಎಂದು ಕಿವಿಮಾತು ಹೇಳಿದರು.

"ನಾವು ನುಡಿದಂತೆ ನಡೆದಿದ್ದೇವೆ. ಎಲ್ಲಾ 5 ಯೋಜನೆಗಳು ಜಾರಿಯಾಗಿವೆ. ಇವುಗಳನ್ನು ಬಿಜೆಪಿ, ಜೆಡಿಎಸ್ ಯಾಕೆ ಕೊಡಲಿಲ್ಲ?. ಬಿಜೆಪಿಗೆ ಒಂದೇ ಒಂದು ಕಾರ್ಯಕ್ರಮ ಕೊಡಲು ಆಗಲಿಲ್ಲ‌. ವ್ಯಕ್ತಿಗಿಂತ ಪಕ್ಷದ ಕಾರ್ಯಕ್ರಮ ಬಹಳ ಮುಖ್ಯ. ಕಾಂಗ್ರೆಸ್ ಪಕ್ಷ ಎಲ್ಲಾ ಧರ್ಮ, ಜಾತಿ ಜನರ ಬದುಕಿನಲ್ಲಿ ಬದಲಾವಣೆ ತರುತ್ತಿದೆ. ಎಲ್ಲಿ ಹೋದರೂ ನೀರು ಸಮುದ್ರ ಸೇರಬೇಕು, ಆ‌ ಸಮುದ್ರವೇ ಕಾಂಗ್ರೆಸ್ ಪಕ್ಷ. ಯಾವುದೇ ಹುದ್ದೆ ಆಕಾಂಕ್ಷೆಯಿಲ್ಲದೆ ಆಯನೂರು ಮಂಜುನಾಥ್ ನಮ್ಮ ಪಕ್ಷ ಸೇರ್ತಿದ್ದಾರೆ. ವ್ಯಕ್ತಿ, ಅರ್ಹತೆ ನೋಡಿ ಅಧಿಕಾರ ಕೊಡ್ತೀವಿ, ಹಿರಿಯರ ಜೊತೆ ಹೊಸಬರು ಕೆಲಸ ಮಾಡಿಕೊಂಡು ಹೋಗಬೇಕು. ಕಾಂಗ್ರೆಸ್ ಸದಸ್ಯತ್ವ ಪಡೆಯುವುದೇ ಸೌಭಾಗ್ಯದ ಕೆಲಸ. ಬೇರೆ ಯಾವ ಪಕ್ಷದವರಿಗೆ ಬಾವುಟದ ಶಾಲು ಹಾಕಲು ಆಗಲ್ಲ" ಎಂದು ಹೇಳಿದರು.

'ಯಾರಿಗೂ ಟಿಕೆಟ್ ಭರವಸೆ ಕೊಟ್ಟಿಲ್ಲ': "ನಾನು ಯಾರಿಗೂ ಟಿಕೆಟ್ ಭರವಸೆ ಕೊಟ್ಟಿಲ್ಲ. ಅವರ ಶಕ್ತಿ ಸಾಮರ್ಥ್ಯದ ಆಧಾರದ ಮೇಲೆ ನಿರ್ಧಾರ ಮಾಡ್ತೇವೆ. ಸಿಎಂ, ಹೈಕಮಾಂಡ್ ಇದ್ದಾರೆ. ಟಿಕೆಟ್ ಹಂಚಿಕೆ ತೀರ್ಮಾನ ನಡೆಯಲಿದೆ. ನಾವು ಆಯನೂರು ಮಂಜುನಾಥ್​ ಅವರಿಗೂ ಟಿಕೆಟ್ ಭರವಸೆ ನೀಡಿಲ್ಲ. ನಾಗರಾಜ್ ಗೌಡಗೆ ವಿಧಾನಸಭೆ ಟಿಕೆಟ್ ನೀಡಲಾಗಲಿಲ್ಲ. ಕೊನೆ ಕ್ಷಣದಲ್ಲಿ ನಾಲ್ಕೈದು ಟಿಕೆಟ್ ಬದಲಾವಣೆ ಮಾಡಲು ಹೊರಟಿದ್ದೆ. ಕಾರಣಾಂತರಗಳಿಂದ ಬದಲಾವಣೆ ಮಾಡಲಾಗಲಿಲ್ಲ. ಯಾರಿಗೂ ಟಿಕೆಟ್ ಕನ್ಫರ್ಮೇಶನ್ ಇಲ್ಲ. ನಾವು ಚುನಾವಣೆ ಸಂದರ್ಭದಲ್ಲಿ ಸರ್ವೆ ಮಾಡಿಸುತ್ತೇವೆ. ಆಗ ಟಿಕೆಟ್ ನಿರ್ಧರಿಸುತ್ತೇವೆ. ಪಕ್ಷದ ಕಾರ್ಯಕರ್ತರಾಗಿ ನಿಷ್ಠೆಯಿಂದ ಕೆಲಸ ಮಾಡಬೇಕು" ಎಂದು ಡಿಕೆಶಿ ತಿಳಿಸಿದರು.

'ಚಂದ್ರಯಾನ-3 ಯಾವುದೇ ಪಕ್ಷದ ಸಾಧನೆ ಅಲ್ಲ': "ಚಂದ್ರಯಾನ-3 ಸಕ್ಸಸ್ ಆಗಿದ್ದು, ವಿಜ್ಞಾನಿಗಳು ಸಾಧನೆ ಮಾಡಿದ್ದಾರೆ. ನಿನ್ನೆ ರಾತ್ರಿಯೇ ಇಸ್ರೋಗೆ ತೆರಳಿ ಸರ್ಕಾರದ ಪರವಾಗಿ ಅಭಿನಂದನೆ ಸಲ್ಲಿಸಿದ್ದೇನೆ. ಈಗ ಸಿಎಂ ಸಿದ್ದರಾಮಯ್ಯ ಇಸ್ರೋಗೆ ಹೋಗಿ ಅಭಿನಂದನೆ ಸಲ್ಲಿಸಿದ್ದಾರೆ. ಚಂದ್ರಯಾನ ಯಾವುದೇ ವ್ಯಕ್ತಿ, ಪಕ್ಷದ ಸಾಧನೆ ಅಲ್ಲ, ಅದು ವಿಜ್ಞಾನಿಗಳ ಪರಿಶ್ರಮ" ಎಂದರು.

ಇದನ್ನೂ ಓದಿ :ಇಸ್ರೋಕ್ಕೆ ಭೇಟಿ ನೀಡಿದ ಸಿಎಂ..'ಸರ್ಕಾರದಿಂದಲೇ ವಿಜ್ಞಾನಿಗಳಿಗೆ ಗೌರವ ಕಾರ್ಯಕ್ರಮ' ಎಂದ ಸಿದ್ದರಾಮಯ್ಯ

Last Updated : Aug 24, 2023, 3:45 PM IST

ABOUT THE AUTHOR

...view details