ಬೆಂಗಳೂರು: ಮಹಾನಗರದಲ್ಲಿ ನಡೆಯುತ್ತಿರುವ ಕೃಷಿ ಮೇಳ ದಿನದಿಂದ ದಿನಕ್ಕೆ ಹೆಚ್ಚು ಜನಪ್ರಿಯತೆ ಪಡೆಯುತ್ತಿದೆ. ಇದರಲ್ಲೂ ಕೋಳಿ ಪ್ರಪಂಚ ಅಪಾರವಾಗಿ ವೀಕ್ಷಕರ ಗಮನ ಸೆಳೆಯುತ್ತಿದೆ. ಬೆಂಗಳೂರಿನ ಜಿಕೆವಿಕೆ ಆವರಣದಲ್ಲಿ ನಡೆಯುತ್ತಿರುವ ಕೃಷಿ ಮೇಳ ಇಂದು ಮುಕ್ತಾಯವಾಗಲಿದ್ದು, ಅಪಾರ ಸಂಖ್ಯೆಯ ಜನರು ಹರಿದು ಬರುತ್ತಿದ್ದಾರೆ. ಈ ವೇಳೆ ಹೆಚ್ಚಿನ ಜನರನ್ನು ಆಕರ್ಷಿಸಿದ್ದು, ಕೋಳಿ ಪ್ರಪಂಚ. ಅದರಲ್ಲೂ ಹೆಬ್ಬಾಳ ಪಶುವೈದ್ಯಕೀಯ ವಿಭಾಗದ ಕುಕ್ಕುಟ ಶಾಸ್ತ್ರ ವಿಭಾಗದ ಗಿರಿರಾಜ ಹಾಗೂ ಇತರೆ ಕೋಳಿಗಳು ಅಪಾರವಾಗಿ ಗಮನ ಸೆಳೆಯುತ್ತಿವೆ.
ಇಲಾಖೆಯ ಮಳಿಗೆಯಲ್ಲಿ ಎಲ್ಲಾ ಕೋಳಿಗಳೂ ದಷ್ಟಪುಷ್ಟವಾಗಿ ಬೆಳೆದಿದ್ದು, ಅದರಲ್ಲಿ ಗಿರಿರಾಜ ಕೋಳಿ ಮೇಲೆ ಎಲ್ಲರ ಕಣ್ಣು ನೆಟ್ಟಿತು. ಸುಮಾರು 50 ಸಾವಿರ ರೂ ಬೆಲೆ ಬಾಳುವ ಈ ಕೋಳಿ, ಮೇಳದಲ್ಲಿಯೇ ದುಬಾರಿ ಕೋಳಿ ಎಂಬ ಹೆಗ್ಗಳಿಕೆ ಹೊಂದಿದೆ. ಈ ಬಾರಿ ಜಾನುವಾರು ಪ್ರದರ್ಶನಕ್ಕೆ ಅವಕಾಶ ನೀಡಿಲ್ಲ. ಕುರಿಗಳು ಸಹ ಕಡಿಮೆ ಸಂಖ್ಯೆಯಲ್ಲಿ ಇವೆ. ಕೋಳಿಗಳು ಮಾತ್ರ ಅಪಾರ ಸಂಖ್ಯೆಯಲ್ಲಿದ್ದು, 100ಕ್ಕೂ ಹೆಚ್ಚು ಕುಕ್ಕುಟ ಮಳಿಗೆಗಳು ಮೇಳದಲ್ಲಿದ್ದು, ಜನರು ಕುತೂಹಲದಿಂದ ಸಾಕಷ್ಟು ವಿಷಯಗಳನ್ನು ಅರಿತರು.