ನವದೆಹಲಿ/ಬೆಂಗಳೂರು:ಶಾಸಕ ಸ್ಥಾನ ಹಾಗೂ ಜೆಡಿಎಸ್ಗೆ ರಾಜೀನಾಮೆ ಸಲ್ಲಿಸಿದ ಅರಕಲಗೂಡು ಜೆಡಿಎಸ್ ಶಾಸಕ ಎ ಟಿ ರಾಮಸ್ವಾಮಿ ಅವರು ಇಂದು ಬಿಜೆಪಿಗೆ ಸೇರ್ಪಡೆ ಆಗಿದ್ದಾರೆ. ನಿನ್ನೆಯಷ್ಟೇ ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿ ಅವರಿಗೆ ರಾಮಸ್ವಾಮಿ ಅವರು ರಾಜೀನಾಮೆ ಪತ್ರ ಸಲ್ಲಿಸಿದ್ದರು. ಇಂದು ದೆಹಲಿಯಲ್ಲಿ ಪಕ್ಷದ ಕಚೇರಿಯಲ್ಲಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಹಾಗೂ ಇತರ ಮುಖಂಡರ ಸಮ್ಮುಖದಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ಈಗಾಗಲೇ ಜೆಡಿಎಸ್ ಘೋಷಣೆ ಮಾಡಿರುವ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಅರಕಲಗೂಡು ಕ್ಷೇತ್ರದಿಂದ ಎ. ಮಂಜು ಅವರನ್ನು ಕಣಕ್ಕಿಳಿಸಲು ಜೆಡಿಎಸ್ ನಿರ್ಧರಿಸಿತ್ತು. ಹೀಗಾಗಿ ಎ.ಟಿ. ರಾಮಸ್ವಾಮಿ ಬಿಜೆಪಿಗೆ ಸೇರ್ಪಡೆ ಆಗುವ ಮಾತುಗಳು ಕೇಳಿ ಬಂದಿತ್ತು. ಈ ನಡುವೆ ಕಾಂಗ್ರೆಸ್ಗೆ ಸೇರಲಿದ್ದಾರೆ ಎಂಬ ಮಾತುಗಳೂ ಇದ್ದವು.
ರಾಮಸ್ವಾಮಿ ಬಿಜೆಪಿ ಸೇರ್ಪಡೆ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವ ಅನುರಾಗ್ ಠಾಕೂರ್, ''ಎ.ಟಿ ರಾಮಸ್ವಾಮಿ ಅವರು ರೈತ ಪರ ಹೋರಾಟಗಾರರಾಗಿದ್ದು, ಒಕ್ಕಲಿಗ ಸಮಾಜದ ಮುಖಂಡರು ಆಗಿದ್ದಾರೆ. ಅವರ ಸೇರ್ಪಡೆಯಿಂದ ಬಿಜೆಪಿಗೆ ಹೆಚ್ಚಿನ ಶಕ್ತಿ ಬಂದಂತಾಗಿದೆ. ಕರ್ನಾಟಕದಲ್ಲಿ ಡಬಲ್ ಎಂಜಿನ್ ಸರ್ಕಾರವು ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದು, ಇದು ಮುಂಬರುವ ಚುನಾವಣೆಯಲ್ಲಿ ಸಾಬೀತಾಗಲಿದೆ'' ಎಂದರು.
ಇದನ್ನೂ ಓದಿ:ಶಾಸಕ ಸ್ಥಾನಕ್ಕೆ ಎ ಟಿ ರಾಮಸ್ವಾಮಿ ರಾಜೀನಾಮೆ ಜೆಡಿಎಸ್ಗೂ ಗುಡ್ ಬೈ