ಕರ್ನಾಟಕ

karnataka

By

Published : Jun 18, 2022, 7:14 PM IST

ETV Bharat / state

ಪಠ್ಯ ಪರಿಷ್ಕರಣೆ ವಿರೋಧಿಸಿ ಪ್ರತಿಭಟನೆ: ವರದಿಗಾರನ ಮೇಲೆ ಹಲ್ಲೆ

ಫ್ರೀಡಂ ಪಾರ್ಕ್​ನಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಖಾಸಗಿ ವಾಹಿನಿಯೊಂದರ ಸಿಬ್ಬಂದಿ ಮೇಲೆ ಹಲ್ಲೆ ನಡೆದಿದೆ.

Assault on a reporter while protest in Bangalore
ವರದಿಗಾರನ ಮೇಲೆ ಹಲ್ಲೆ

ಬೆಂಗಳೂರು: ರೋಹಿತ್ ಚಕ್ರತೀರ್ಥ ನೇತೃತ್ವದಲ್ಲಿ ಪರಿಷ್ಕರಿಸಿದ ಪಠ್ಯದಲ್ಲಿ ಮಕ್ಕಳಿಗೆ ಅಸತ್ಯವನ್ನು ಬೋಧಿಸಲಾಗುತ್ತಿದೆ. ಕುವೆಂಪು, ಅಂಬೇಡ್ಕರ್ ಅವರಿಗೆ ಅವಮಾನ ಮಾಡಲಾಗಿದೆ ಎಂದು ಕುವೆಂಪು ಹೋರಾಟ ಸಮಿತಿಯ ನೇತೃತ್ವದಲ್ಲಿ ಕನ್ನಡ ಪರ, ದಲಿತಪರ ಸಂಘಟನೆಗಳು ನಗರದ ಫ್ರೀಡಂ ಪಾರ್ಕ್​ನಲ್ಲಿ ಪ್ರತಿಭಟನಾ ಸಭೆ ಹಮ್ಮಿಕೊಂಡಿದ್ದವು. ಈ ವೇಳೆ ಅಸಮಾಧಾನದ ಕೂಗು ಕೇಳಿಬಂದರೆ, ವರದಿಗಾರನೋರ್ವನ ಮೇಲೆ ಹಲ್ಲೆಯೂ ಆಗಿದೆ.

ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣ ಗೌಡ ಬಣದ ಕಾರ್ಯಕರ್ತರು ವೇದಿಕೆ ಮುಂಭಾಗದಲ್ಲಿ ಘೋಷಣೆ ಕೂಗಿದರು. ನಾರಾಯಣ ಗೌಡರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಬಳಿಕ ಆಯೋಜಕರು ಕಾರ್ಯಕರ್ತರನ್ನು ಸಮಾಧಾನಪಡಿಸಿದರು.

ವರದಿಗಾರನ ಮೇಲೆ ಹಲ್ಲೆ

ಖಾಸಗಿ ವಾಹಿನಿಯ ಸಿಬ್ಬಂದಿ ಮೇಲೆ ಹಲ್ಲೆ ಕೂಡ ನಡೆಯಿತು. ರಣಧೀರ ಪಡೆಯ ರಾಜ್ಯಾಧ್ಯಕ್ಷ ಹರೀಶ್ ಬೈರಪ್ಪ ನಿನ್ನದು ಆರ್.ಎಸ್.ಎಸ್ ಚಾನಲ್, ಯಾಕಿಲ್ಲಿ ಬಂದಿದ್ದೀಯಾ ಎಂದು ವರದಿಗಾರನಿಗೆ ಪ್ರಶ್ನೆ ಮಾಡಿದರು. ಅಲ್ಲದೇ, ಹಿಗ್ಗಾಮುಗ್ಗಾ ಥಳಿಸಿ ಬಟ್ಟೆ ಹರಿದು, ಫ್ರೀಡಂ ಪಾರ್ಕ್ ಮತ್ತು ಪಕ್ಕದ ರಸ್ತೆಯಲ್ಲಿ ಅಟ್ಟಾಡಿಸಿ ಹೊಡೆದರು. ಪೊಲೀಸರು ತಡೆಯುವ ಪ್ರಯತ್ನ ಮಾಡಿದರೂ ಕೂಡ ಅವರನ್ನು ಲೆಕ್ಕಿಸದೇ ಹಲ್ಲೆ ನಡೆಸಿದ್ದಾರೆ. ಆರ್.ಎಸ್.ಎಸ್​ಗೆ ಧಿಕ್ಕಾರ ಕೂಗಿ ಹರೀಶ್ ಬೈರಪ್ಪ ಅವರು ಮಾಧ್ಯಮ ಕ್ಯಾಮರಾಗಳ ಮುಂದೆಯೇ ಹಿಗ್ಗಾಮುಗ್ಗಾ ಥಳಿಸಿದರು.

ನಂಜಾವಧೂತ ಸ್ವಾಮೀಜಿ ಆಗ್ರಹ:ಪಠ್ಯ ಪರಿಷ್ಕರಣೆ ವಿಚಾರವಾಗಿ ರಾಜ್ಯ ಸರ್ಕಾರ ಹಠ ಸಾಧಿಸಬಾರದು, ತಪ್ಪು ಸರಿಪಡಿಸಬೇಕು ಎಂದು ನಂಜಾವಧೂತ ಸ್ವಾಮೀಜಿ ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಎಲ್ಲಾ ಪಕ್ಷಗಳು ಉದಯವಾಗಿರುವುದು ಚಳವಳಿಯಿಂದ. ಹಾಗಾಗಿ ತಪ್ಪು ನಿರ್ಧಾರ ಮಾಡಿದ್ರೆ ಜನರು ಸರಿಯಾದ ನಿರ್ಧಾರ ಮಾಡುತ್ತಾರೆ. ಇದು ಚಿಕ್ಕ ವಿಚಾರ, ಸರ್ಕಾರ ಪ್ರತಿಷ್ಠೆಯಾಗಿ ತೆಗೆದುಕೊಳ್ಳಬಾರದು. ಸಂವಿಧಾನದ ಆಶಯ ಗಟ್ಟಿಯಾಗಬೇಕು. ಮುಖ್ಯಮಂತ್ರಿ ಅವರು ಮಧ್ಯಸ್ಥಿಕೆ ವಹಿಸಬೇಕು ಎಂದು ಆಗ್ರಹಿಸಿದರು.

ನಂಜಾವಧೂತ ಸ್ವಾಮೀಜಿ

ದೇಶದಲ್ಲಿ ವಿಮರ್ಶೆ ಮಾಡುವವರನ್ನು ದೇಶದ್ರೋಹಿಗಳು ಎಂದು ತಿಳಿದುಕೊಳ್ಳುವ ವರ್ಗ ಹೆಚ್ಚಾಗುತ್ತಿದೆ. ನಿಮ್ಮ ಅಭಿಪ್ರಾಯಗಳನ್ನು ಮಕ್ಕಳ ಮನಸ್ಸಿಗೆ ಹೇರಬಾರದು ಎಂದರು. ಸಿಎಂ ಬಸವರಾಜ ಬೊಮ್ಮಾಯಿ ಪಠ್ಯ ಪರಿಷ್ಕರಣೆಯಲ್ಲಾದ ತಪ್ಪುಗಳನ್ನು ಸರಿಪಡಿಸಲು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅವರಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ. ಆದರೆ, ಶಾಲೆ ಆರಂಭವಾಗಿದ್ದು ಪಠ್ಯ ಮಕ್ಕಳ ಕೈಸೇರಿದೆ. ಯಾವಾಗ ಪಠ್ಯ ಸರಿಪಡಿಸುವುದು?. ಸಂವಿಧಾನವನ್ನು ತಮಗೆ ಬೇಕಾದ ರೀತಿಯಲ್ಲಿ ಅರ್ಥೈಸಿ ಮುಂದೆ ಒಂದು ದಿನ ತಾನು ಹೇಳಿದ್ದೇ ಸಂವಿಧಾನ ಎಂದಾದರೆ ನಾರಾಯಣ ಗುರು, ಅಂಬೇಡ್ಕರ್ ಸೇರಿದಂತೆ ದಾರ್ಶನಿಕರಿಗೆ ಏನು‌ ಗೌರವ ಬಂತು ಎಂದು ಪ್ರಶ್ನಿಸಿದರು.

ಇದನ್ನೂ ಓದಿ:ಚಿಕ್ಕಮಗಳೂರು : ಸಿಇಟಿ ಪರೀಕ್ಷೆಯಲ್ಲಿ ಅಕ್ರಮಕ್ಕೆ ಯತ್ನಿಸಿದ ವಿದ್ಯಾರ್ಥಿ ಪೊಲೀಸ್ ವಶಕ್ಕೆ

ಇದು ಎಚ್ಚರಿಕೆಯ ಸಭೆಯಾಗಿದೆ. ಈ ರೀತಿಯ ಅವಮಾನಗಳು ಮುಂದುವರಿದರೆ ನಮ್ಮಂತ ಸ್ವಾಮೀಜಿಗಳು, ಸಾಹಿತಿಗಳು, ಹೋರಾಟಗಾರರು ಬೀದಿಗಿಳಿದು ಪ್ರಶ್ನೆ ಮಾಡುವ ಅನಿವಾರ್ಯತೆ ಎದುರಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ABOUT THE AUTHOR

...view details