ಬೆಂಗಳೂರು: ಅಮೃತ್ ನಗರೋತ್ಥಾನ ಯೋಜನೆಯಡಿ ನಗರದ ಪೂರ್ವ ವಲಯಕ್ಕೆ 450 ಕೋಟಿ ರೂಪಾಯಿ ಮಂಜೂರಾಗಿದ್ದು, ಕಾಮಗಾರಿಗಳನ್ನು ಕೈಗೊಳ್ಳಲು ಟೆಂಡರ್ ಕರೆಯಲಾಗಿದೆ ಎಂದು ಪೂರ್ವ ವಲಯದ ಉಸ್ತುವಾರಿ ಆಗಿರುವ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ್ ತಿಳಿಸಿದ್ದಾರೆ.
ಮಳೆಯಿಂದಾಗಬಹುದಾದ ತೊಂದರೆಗಳ ಕುರಿತು ಬಿಬಿಎಂಪಿ ಪೂರ್ವ ವಲಯದ ಅಧಿಕಾರಿಗಳ ಜೊತೆ ವರ್ಚ್ಯುವಲ್ ಸಭೆ ನಡೆಸಿದ ಅವರು 450 ಕೋಟಿ ರೂ.ಗಳಲ್ಲಿ 180 ಕೋಟಿ ರೂಪಾಯಿಯನ್ನು ಮಳೆ ನೀರು ಸರಾಗವಾಗಿ ಹರಿದು ಹೋಗಲು ಚರಂಡಿ ಹೂಳೆತ್ತುವ ಕೆಲಸಕ್ಕೆ ವಿನಿಯೋಗಿಸಲಾಗುವುದು. ಇದಕ್ಕೆ ಈಗಾಗಲೇ ಟೆಂಡರ್ ಕರೆಯಲಾಗಿದೆ' ಎಂದರು.
ಪೂರ್ವ ವಲಯದ ವ್ಯಾಪ್ತಿಯ ರಸ್ತೆಗಳಲ್ಲಿ 100 ಕಡೆಗಳಲ್ಲಿ ಮಳೆ ನೀರು ನಿಂತು ತೊಂದರೆ ಆಗುತ್ತಿದೆ. ಇದನ್ನು ಸಂಬಂಧಿಸಿದ ಎಂಜಿನಿಯರುಗಳು ತ್ವರಿತವಾಗಿ ಸರಿಪಡಿಸಬೇಕು. ರಸ್ತೆ ಮಾಡುವಾಗಲೇ ಇಂತಹ ಅಂಶಗಳನ್ನು ಗಮನಿಸಬೇಕು. ಇಲ್ಲದಿದ್ದರೆ ತಪ್ಪಿತಸ್ಥ ಎಂಜಿನಿಯರ್ಗಳನ್ನು ಸಸ್ಪೆಂಡ್ ಮಾಡಲಾಗುವುದು. ಜತೆಗೆ ಮಳೆನೀರು ನಿಂತು ಸಮಸ್ಯೆ ಆಗುತ್ತಿರುವ ಗೆದ್ದಲಹಳ್ಳಿ ಸೇತುವೆ ಬಳಿ ನಿಗಾ ಇಟ್ಟು, ಪರಿಸ್ಥಿತಿಯನ್ನು ಅವಲೋಕಿಸುತ್ತಿರಬೇಕು ಎಂದು ಎಚ್ಚರಿಸಿದ್ದಾರೆ.