ಬೆಂಗಳೂರು: ಬಾಣಸವಾಡಿ ಮುಖ್ಯರಸ್ತೆಯಲ್ಲಿ ವ್ಯಕ್ತಿಯೋರ್ವರನ್ನು ಮಾರಕಾಸ್ತ್ರಗಳಿಂದ ಭೀಕರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ರಾಮಮೂರ್ತಿನಗರ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ರುತ್ವಿಕ್ ಮತ್ತು ಸುಮನ್ ಬಂಧಿತರು. ಮದನ್ ಅಲಿಯಾಸ್ ರಿಚರ್ಡ್ ಹತ್ಯೆಗೊಳಗಾದ ವ್ಯಕ್ತಿ. ಕೃತ್ಯಕ್ಕೆ ಸಹಕಾರ ನೀಡಿದ್ದ ಮತ್ತಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.
ಪ್ರಕರಣದ ಹಿನ್ನೆಲೆ:ಕೊಲೆಯಾದ ಮದನ್ ಹಾಗೂ ಆರೋಪಿಗಳು ಪರಿಚಯಸ್ಥರಾಗಿದ್ದು, ಚಿಕ್ಕಬಾಣಸವಾಡಿಯಲ್ಲಿ ನೆಲೆಸಿದ್ದರು. 2019ರಲ್ಲಿ ಮದನ್ ಹಾಗೂ ರುತ್ವಿಕ್ ನಡುವೆ ಗಲಾಟೆ ನಡೆದಿತ್ತು. ಕ್ರಿಕೆಟ್ ಬ್ಯಾಟ್ನಿಂದ ಮದನ್ ರುತ್ವಿಕ್ಗೆ ಹೊಡೆದಿದ್ದ. ಪರಿಣಾಮ 9 ದಿನ ಆಸ್ಪತ್ರೆಯಲ್ಲಿ ಕಳೆದಿದ್ದ ರುತ್ವಿಕ್ ಕೋಮಾ ಸ್ಥಿತಿಗೆ ತಲುಪಿದ್ದ. ಹಲ್ಲೆ ಬಳಿಕ ಮದನ್ ಬೆಂಗಳೂರು ತೊರೆದು ಚೆನ್ನೈಗೆ ತೆರಳಿದ್ದ. ಘಟನೆ ಸಂಬಂಧ ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಮದನ್ ಹಾಗೂ ಇನ್ನಿತರರ ವಿರುದ್ಧ ಪ್ರಕರಣ ದಾಖಲಾಗಿತ್ತು.
ನಾಲ್ಕು ವರ್ಷ ಚೆನ್ನೈನಲ್ಲೇ ಕಾರ್ ಡ್ರೈವರ್ ಆಗಿ ಕೆಲಸ ಮಾಡಿದ್ದ ಮದನ್ ಕಳೆದ ಒಂದು ತಿಂಗಳ ಹಿಂದೆಯಷ್ಟೇ ನಗರಕ್ಕೆ ವಾಪಸ್ ಆಗಿದ್ದ. ಮದನ್ ಬಂದಿರುವುದನ್ನು ಅರಿತಿದ್ದ ಆರೋಪಿಗಳು ಹಳೆ ದ್ವೇಷ ಮರೆತು ಮತ್ತೆ ಒಂದಾಗೋಣ ಎಂದು ಹೇಳಿ ಮಾತುಕತೆಗಾಗಿ ಅಕ್ಟೋಬರ್ 11ರ ಸಂಜೆ ಕರೆಸಿಕೊಂಡಿದ್ದರು. ಮಾತುಕತೆ ವೇಳೆ ಉಂಟಾದ ಜಗಳ ವಿಕೋಪಕ್ಕೆ ತಿರುಗಿತ್ತು. ನೋಡ ನೋಡುತ್ತಿದ್ದಂತೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲು ಆರೋಪಿಗಳು ಮುಂದಾಗಿದ್ದಾರೆ. ಈ ವೇಳೆ ಮದನ್ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ.