ಕರ್ನಾಟಕ

karnataka

ETV Bharat / state

ಹಲವು ಯೋಜನೆಗಳಿಗೆ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ

ಬಿಬಿಎಂಪಿ ವಿಭಜನೆ ವಿಧೇಯಕ ವಾಪಸ್​, ಆಲುಗಡ್ಡೆ ಬೆಳೆಗಾರಿಗೆ ವಿಶೇಷ ಪ್ಯಾಕೇಜ್, ಕೆರೆಗಳ ಅಭಿವೃದ್ಧಿ ಸೇರಿದಂತೆ ಇತರೆ ವಿಷಯಗಳಿಗೆ ಸಂಬಂಧಿಸಿದಂತೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ಹಲವು ಯೋಜನೆಗಳಿಗೆ ಸಚಿವ ಸಂಪುಟದಿಂದ ಅಸ್ತು

By

Published : Jul 11, 2019, 5:14 PM IST

ಬೆಂಗಳೂರು: ಬಿಬಿಎಂಪಿ ವಿಭಜನೆ ವಿಧೇಯಕ ವಾಪಸ್​, ಆಲುಗಡ್ಡೆ ಬೆಳೆಗಾರಿಗೆ ವಿಶೇಷ ಪ್ಯಾಕೇಜ್, ಕೆರೆಗಳ ಅಭಿವೃದ್ಧಿ ಸೇರಿದಂತೆ ಇತರೆ ವಿಷಯಗಳಿಗೆ ಸಂಬಂಧಿಸಿದಂತೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ವಿಧಾನಸೌಧದಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆ ಬಳಿಕ ಮಾಹಿತಿ ನೀಡಿದ ಸಚಿವ ಕೃಷ್ಣ ಬೈರೇಗೌಡ, ಬಿಬಿಎಂಪಿ ವಿಭಜನೆ ಕುರಿತು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದ ವಿಧೇಯಕವನ್ನ ಹಿಂಪಡೆಯಲು ಸಂಪುಟ ಒಪ್ಪಿಗೆ ನೀಡಿದೆ.‌

ವಿಭಜನೆ ಮಾಡದೇ ಬದಲಿ ಮಾರ್ಗಗಳನ್ನ ಹುಡುಕಲು ತೀರ್ಮಾನ ಮಾಡಲಾಗಿದೆ. ಇನ್ನು ಬಿ.ಎಸ್.ಪಾಟೀಲ್ ಕಮಿಟಿ ವರದಿ ತಿರಸ್ಕಾರ ಮಾಡಿಲ್ಲ, ಬದಲಾಗಿ ಬೇರೆ ರೀತಿ ಅನುಷ್ಠಾನಗೊಳಿಸುವ ಕುರಿತು ಚಿಂತನೆ ನಡೆದಿದೆ ಅಂತಾ ಹೇಳಿದರು.

ಇನ್ನು ಆಲೂಗಡ್ಡೆ ಬೆಳೆಗಾರರ ಸಂಖ್ಯೆ ಗಣನೀಯ ಇಳಿಕೆಯಾಗಿದ್ದು, ಇದಕ್ಕೆ ಪ್ರೋತ್ಸಾಹಿಸಲು ವಿಶೇಷ ಪ್ಯಾಕೇಜ್​​​ವೊಂದನ್ನು ಘೋಷಿಸಲು ಸಂಪುಟ ಒಪ್ಪಿಗೆ ನೀಡಿದೆ‌‌. ಆಲೂಗಡ್ಡೆ ಬೆಳೆಗಾರರಿಗೆ ಎರಡು ಹೆಕ್ಟೇರ್​​​ಗೆ ಸೀಮಿತಪಡಿಸಿ 7500 ರೂ. ಪ್ರೋತ್ಸಾಹಧನ ನೀಡಲು ತೀರ್ಮಾನಿಸಲಾಗಿದೆ.‌ ಇದಕ್ಕೆ 25.5 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ ಎಂದರು.

ತಿರುಪತಿಯಲ್ಲಿ ಅತಿಥಿ ಗೃಹ

ತಿರುಪತಿಯಲ್ಲಿ ಕರ್ನಾಟಕದ ಛತ್ರವಿದ್ದು, ಅಲ್ಲಿ 27 ಕೋಟಿ ರೂ. ವೆಚ್ಚದಲ್ಲಿ ಅತಿಥಿ ಗೃಹ ನಿರ್ಮಾಣ ಮಾಡಲು ಸಂಪುಟ ಒಪ್ಪಿಗೆ ನೀಡಿದೆ. ಕರ್ನಾಟಕದಿಂದ ಅತೀ ಹೆಚ್ಚು ಭಕ್ತರು ತಿರುಪತಿಗೆ ಹೋಗುವುದರಿಂದ ಸಾರ್ವಜನಿಕರ ಅನುಕೂಲಕ್ಕಾಗಿ ಅತಿಥಿ ಗೃಹ ನಿರ್ಮಾಣ ಮಾಡಲಾಗುತ್ತಿದೆ ಅಂತಾ ಸಚಿವರು ತಿಳಿಸಿದರು.

ಹಾಸನ‌ ಜಿಲ್ಲೆಯಲ್ಲಿ ತೋಟಗಾರಿಕಾ ವಿಶ್ವವಿದ್ಯಾಲಯ

ಹಾಸನ‌ ಜಿಲ್ಲೆಯಲ್ಲಿ ತೋಟಗಾರಿಕಾ ವಿಶ್ವವಿದ್ಯಾಲಯ ಸ್ಥಾಪನೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಸಿರಿಧಾನ್ಯ ಪ್ರೋತ್ಸಾಹಕ್ಕೆ ಈ ವರ್ಷ ಸಣ್ಣ ಸಿರಿಧಾನ್ಯ ಬೆಳೆಗಾರರಿಗೆ ಹೆಕ್ಟೇರ್​​ಗೆ 10 ಸಾವಿರ ಅನುದಾನ ನೀಡಲು ಸಭೆ ಒಪ್ಪಿಗೆ ನೀಡಿದೆ.

ಕುಷ್ಟಗಿ ಪಟ್ಟಣಕ್ಕೆ ಕುಡಿಯುವ ನೀರಿಗೆ 88 ಕೋಟಿ

ಕೊಪ್ಪಳದ ಕುಷ್ಟಗಿ ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆ ಹಿನ್ನೆಲೆ ಕೃಷ್ಣಾ ಎಡ ದಂಡೆಯಿಂದ ನೀರು ತರಲು 88 ಕೋಟಿ ಅನುದಾನ ನೀಡಲು ಒಪ್ಪಿಗೆ ಸೂಚಿಸಿದೆ. ಅಪ್ಪರ್ ಬಲದಂಡೆ ನಾಲೆ ಆಧುನೀಕರಣ ಮಾಡಲು ವೆಚ್ಚ 750 ಕೋಟಿ ವೆಚ್ಚವಾಗಲಿದ್ದು, ಮೊದಲ ಹಂತದ 375 ಕೋಟಿ ರೂ. ಕಾಮಗಾರಿಗೆ ಸಂಪುಟ ಒಪ್ಪಿಗೆ ನೀಡಿದೆ.

ಇನ್ನು ಹೆಬ್ಬಾಳ ಮತ್ತು ನಾಗವಾರ ಕೆರೆಗೆ ಹರಿಯುತ್ತಿರುವ ತ್ಯಾಜ್ಯ ನೀರನ್ನು ಸಂಸ್ಕರಿಸಿ, ಚಿಕ್ಕಬಳ್ಳಾಪುರ ಜಿಲ್ಲೆ‌ ಬಾಗೇಪಲ್ಲಿ ತಾಲೂಕಿನ‌ 24 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಒಪಿಗೆ ನೀಡಿದ್ದು, ಇದಕ್ಕೆ 70 ಕೋಟಿ ರೂ. ಅನುದಾನ ನೀಡಲು ಸಭೆ ಒಪ್ಪಿಗೆ ನೀಡಿದೆ. ಇನ್ನು ಹೆಸರಘಟ್ಟ ಕೆರೆ ಮತ್ತು ತಿಪ್ಪಗೊಂಡನಹಳ್ಳಿ ಕೆರೆಗೆ ಸಂಸ್ಕರಣೆ ಇಲ್ಲದೇ ತ್ಯಾಜ್ಯ ನೀರು ಕೆರೆಗೆ ಬಿಡಲಾಗುತ್ತಿದೆ. ಮಳೆ ನೀರಿನಲ್ಲೇ ತುಂಬುವ ಕೆರೆಗಳ ನೀರು ಕೂಡ ಈಗ ಕಲುಷಿತವಾಗುತ್ತಿದೆ. ಈ ನಿಟ್ಟಿನಲ್ಲಿ ಸುತ್ತಮುತ್ತ ಒಳಚರಂಡಿ ನಿರ್ಮಾಣ ವ್ಯವಸ್ಥೆ ಕಲ್ಪಿಸಲು ಕಾಮಗಾರಿಗೆ 50 ಕೋಟಿ ನೀಡಲಾಗಿದೆ.

ಗಾಣಿಕರಹಳ್ಳಿ ಕೆರೆ ಅಭಿವೃದ್ಧಿಗೆ 28 ಕೋಟಿ

ಬೆಂಗಳೂರು ಉತ್ತರ ತಾಲೂಕಿನ ಗಾಣಿಕರಹಳ್ಳಿ ಕೆರೆ ಅಭಿವೃದ್ಧಿಗೆ 28 ಕೋಟಿ ರೂ., ಚಿಕ್ಕಬಾಣಾವರ ಕೆರೆಗಳ ಅಭಿವೃದ್ಧಿಗೆ 30 ಕೋಟಿ‌ ರೂ. ನೀಡಲು ಒಪ್ಪಿಗೆ ನೀಡಲಾಗಿದೆ. ನವ ಬೆಂಗಳೂರು ಯೋಜನೆಯಲ್ಲಿ ವೈಟ್ ಟಾಪಿಂಗ್ ಟೆಂಡರ್ ಈಗಾಗಲೇ ಅನುಮೋದನೆ ಆಗಿದ್ದು, ಮೂರು ಪ್ಯಾಕೇಜ್​​​ಗಳಲ್ಲಿ ವೈಟ್ ಟಾಪಿಂಗ್ ರಸ್ತೆ ಮಾಡಲಾಗುತ್ತಿದೆ.‌ 147 ಕೋಟಿ, 211 ಕೋಟಿ ಮತ್ತು 207 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಿದೆ.

ಇಂದು ನಡೆದ ಸಂಪುಟ ಸಭೆಯಲ್ಲಿ ಜಿಂದಾಲ್ ವಿಚಾರ ಕುರಿತು ಪ್ರಸ್ತಾಪವಾಗಿಲ್ಲವೆಂದ ಸಚಿವರು, ಕೆಲ ಮಾಧ್ಯಮಗಳಲ್ಲಿ ಸಂಪುಟ ಉಪ ಸಮಿತಿ ಒಪ್ಪಿಗೆ ನೀಡಿದೆ ಎಂದು ವರದಿಗಳು ಬಂದಿವೆ. ಇದು ಸತ್ಯಕ್ಕೆ‌ ದೂರವಾದದ್ದು. ಮಾಹಿತಿ ತಿಳಿದುಕೊಂಡು ಸುದ್ದಿ ಪ್ರಕಟಿಸುವುದು ಸೂಕ್ತ ಅಂದರು. ಯಾವುದೇ ರೀತಿಯ ಮಾಹಿತಿ ಇಲ್ಲದೇ ಸಾರ್ವಜನಿಕರಿಗೆ ತಪ್ಪು ಸಂದೇಶ ಹೋದರೆ, ತಳಮಟ್ಟದಲ್ಲಿ ಪ್ರತಿಭಟನೆಗಳು ನಡೆಯುತ್ತವೆ. ಆತುರದ ನಿರ್ಧಾರ ತೆಗೆದುಕೊಂಡರೆ, ಏನಾದರೂ ಸಮಸ್ಯೆ ಆದರೆ ಏನು ಮಾಡುವುದು ಎಂದು ಪ್ರಶ್ನಿಸಿದರು. ನಮ್ಗೂ ಕಾಮನ್ ಸೆನ್ಸ್ ಇದೆ. ಇಂತಹ ಸೂಕ್ಷ್ಮ ವಿಷಯವನ್ನು‌ ಗಂಭೀರವಾಗಿ ಪರಿಶೀಲಿಸಲಾಗುತ್ತದೆ ಎಂದು ಸಚಿವ ಕೃಷ್ಣ ಬೈರೇಗೌಡ ಗರಂ ಆದ್ರು.

ABOUT THE AUTHOR

...view details