ಬೆಂಗಳೂರು: ರಾಜ್ಯ ಪ್ರವಾಸದಿಂದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾನುವಾರ ವಾಪಸಾಗುವಾಗ ಭದ್ರತಾ ವೈಫಲ್ಯ ಕಂಡುಬಂದಿದೆ. ನಗರದ ತಾಜ್ ವೆಸ್ಟ್ ಎಂಡ್ ಹೊಟೇಲ್‌ನಿಂದ ಹೆಚ್ಎಎಲ್ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದಾಗ ಗೃಹ ಸಚಿವರ ಭದ್ರತಾ ವಾಹನದೊಂದಿಗೆ ಇಬ್ಬರು ಯುವಕರು ಸುಮಾರು 300 ಮೀಟರ್ ದೂರ ದ್ವಿಚಕ್ರ ವಾಹನದಲ್ಲಿ ಬಂದಿದ್ದರು ಎನ್ನಲಾಗಿದೆ.
ತಡರಾತ್ರಿ 11 ಗಂಟೆ ಸುಮಾರಿಗೆ ವಿಮಾನ ನಿಲ್ದಾಣದತ್ತ ಹೊರಟಿದ್ದ ಅಮಿತ್ ಶಾ ಅವರ ಬೆಂಗಾವಲು ವಾಹನ ಬರುತ್ತಿದ್ದಂತೆ ಯುವಕರು ಮಣಿಪಾಲ್ ಸೆಂಟರ್‌ವರೆಗೂ ಹಿಂದೆಯೇ ಬಂದಿದ್ದಾರೆ. ಇದನ್ನರಿತ ಪೊಲೀಸರು ದ್ವಿಚಕ್ರ ವಾಹನ ಅಡ್ಡಗಟ್ಟಿದ್ದು ಹಿಂಬದಿ ಸವಾರನನ್ನು ಬಂಧಿಸಿ ಕ್ರಮ ಕೈಗೊಂಡಿದ್ದಾರೆ. ಇಬ್ಬರೂ ಸಹ ವಿದ್ಯಾರ್ಥಿಗಳು, ಉದ್ದೇಶಪೂರ್ವಕವಾಗಿ ಹೀಗೆ ಮಾಡಿಲ್ಲ ಎಂಬುದು ಮೇಲ್ನೋಟಕ್ಕೆ ತಿಳಿದುಬಂದಿದೆ.
ಈ ಬಗ್ಗೆ ಕಮರ್ಷಿಯಲ್ ಸ್ಟ್ರೀಟ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಇಬ್ಬರನ್ನೂ ಬಂಧಿಸಿದ್ದಾರೆ. ಐಪಿಸಿ ಸೆಕ್ಷನ್ 353ರಡಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಹಾಗೂ ಸೆಕ್ಷನ್ 279ರ ಅಡಿ ಅಜಾಗರೂಕತೆಯಿಂದ ವಾಹನ ಚಾಲನೆ ಮಾಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಿ ಕ್ರಮ ಕೈಗೊಂಡಿದ್ದಾರೆ.
ಹಿಂದಿನ ಘಟನೆಗಳು:ಕಳೆದ ಶನಿವಾರ ಪ್ರಧಾನಿ ಮೋದಿ ದಾವಣಗೆರೆ ಆಗಮಿಸಿ ರೋಡ್ ಶೋ ನಡೆಸುತ್ತಿದ್ದ ವೇಳೆ ಭದ್ರತಾ ಲೋಪ ಉಂಟಾಗಿತ್ತು. ಯುವಕನೋರ್ವ ಪ್ರಧಾನಿ ಬೆಂಗಾವಲು ಪಡೆಯತ್ತ ಓಡಲು ಯತ್ನಿಸಿದ್ಧ. ತಕ್ಷಣ ಅಲ್ಲಿದ್ದ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದರು.