ಬೆಂಗಳೂರು: ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಿನ ಗಡಿ ವಿವಾದವನ್ನು ಮಾತುಕತೆ ಮೂಲಕ ಪರಿಹರಿಸಿಕೊಳ್ಳೋಣ ಎನ್ನುವ ಮಹಾರಾಷ್ಟ್ರ ಮುಖ್ಯಮಂತ್ರಿ ಹೇಳಿಕೆ ಕುರಿತು ಮುಂದಿನ ವಾರ ಸರ್ವಪಕ್ಷ ಸಭೆ ಕರೆದು ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಡಿ ವಿವಾದ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳೋಣ ಎನ್ನುವ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಹೇಳಿಕೆ ವಿಚಾರ ಗಮನಿಸಿದ್ದೇನೆ. ಅವರ ಈ ಹೇಳಿಕೆ ಬಗ್ಗೆ ಚರ್ಚಿಸಲು ಸರ್ವಪಕ್ಷ ಸಭೆ ಕರೆಯುತ್ತೇವೆ. ಮುಂದಿನ ವಾರ ಸರ್ವಪಕ್ಷ ಸಭೆ ಕರೆದು ಚರ್ಚಿಸುತ್ತೇವೆ ಎಂದರು.
ಸುಪ್ರೀಂಕೋರ್ಟ್ನಲ್ಲಿ ಅವರೇ (ಮಹಾರಾಷ್ಟ್ರ) ದಾವೆ ಹೂಡಿದ್ದಾರೆ. ನಾವು ನಮ್ಮ ವಾದ ಮಂಡನೆಗೆ ಸಮರ್ಥವಾಗಿ ತಯಾರಿ ಮಾಡಿಕೊಂಡಿದ್ದೇವೆ. ಈ ಮಧ್ಯೆ ಮಹಾರಾಷ್ಟ್ರ ಸಿಎಂ ಅವರು ಮಾತುಕತೆ ನಡೆಸುವ ಕುರಿತು ಹೇಳಿಕೆ ಕೊಟ್ಟಿದ್ದಾರೆ. ಸುಪ್ರೀಂಕೋರ್ಟ್ನಲ್ಲಿ ವಾದ ಮಾಡುವ ಬಗ್ಗೆ ಈ ಹಿಂದಿನ ಸರ್ವಪಕ್ಷ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು ಎಂದು ಹೇಳಿದರು.
ಸದ್ಯಕ್ಕೆ ನಮ್ಮ ಮುಂದೆ ಸುಪ್ರೀಂಕೋರ್ಟ್ ಮುಂದೆ ವಾದ ಮಂಡಿಸುವ ಉದ್ದೇಶ ಒಂದೇ ಇದೆ. ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವ ಏಕನಾಥ್ ಶಿಂಧೆ ಅವರ ಹೇಳಿಕೆ ಬಗ್ಗೆ ಸರ್ವಪಕ್ಷ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಮಾಡುತ್ತೇವೆ. ಇಡೀ ಗಡಿ ವಿಚಾರವೇ ಮುಗಿದು ಹೋಗಿದೆ. ಜತ್ ತಾಲೂಕು ಕರ್ನಾಟಕಕ್ಕೆ ಸೇರುವ ಬಗ್ಗೆ ಅಲ್ಲಿ ಗ್ರಾಮ ಪಂಚಾಯಿತಿಗಳೇ ನಿರ್ಣಯ ಮಾಡಿವೆ. ಇವೆಲ್ಲ ಸುಪ್ರೀಂಕೋರ್ಟ್ ಮುಂದೆ ವಾದ ಮಂಡನೆ ವೇಳೆ ಬರಲಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.
ಇದನ್ನೂ ಓದಿ:ಗಡಿ ವಿವಾದ ಮಾತುಕತೆ ಮೂಲಕ ಬಗೆಹರಿಯಲಿ: ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ